ಉಡುಪಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,222 ಅಂಗನವಾಡಿ ಕೇಂದ್ರಗಳಲ್ಲಿ 170 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸರಕಾರಿ ಶಾಲೆ, ಗ್ರಾ.ಪಂ. ಕಟ್ಟಡ ಅಥವಾ ಬಾಡಿಗೆ ಕಟ್ಟಡಗಳಲ್ಲಿ ಈ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಸ್ತುತ ಅಂಗನವಾಡಿ ಕೇಂದ್ರಗಳನ್ನು ಮಾಂಟಸ್ಸರಿಯಾಗಿ ರೂಪಿಸಲು ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈಗಾಗಲೇ ಯೋಜನೆ ರೂಪಿಸಿ ಅನುಷ್ಠಾನ ಮಾಡಿದೆ. ಬೆಂಗಳೂರಿನಲ್ಲಿ ಈ ಪ್ರಕ್ರಿಯೆಯೂ ಆರಂಭವಾಗಿದೆ. ಪ್ರಸಕ್ತ ಸಾಲಿನಲ್ಲಿ ಬೇರೆ ಜಿಲ್ಲೆಗಳಿಗೂ ವಿಸ್ತರಿಸುವ ಬಗ್ಗೆಯೂ ಘೋಷಣೆಯಾಗಿದೆ. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
ಅಂಗನವಾಡಿಗಳನ್ನು ಮೊಂಟಸ್ಸರಿಯಾಗಿ ಪರಿವರ್ತಿಸಿದ ತತ್‌ಕ್ಷಣದಿಂದಲೇ ಮಕ್ಕಳು ಬರಲು ಸಾಧ್ಯವಿಲ್ಲ. ಮಕ್ಕಳನ್ನು ಆಕರ್ಷಿಸಲು ಬೇಕಾದ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಮೂಲ ಸೌಲಭ್ಯ ಅತಿ ಮುಖ್ಯವಾಗುತ್ತದೆ. 1,052 ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿದ್ದರೂ ಸುಸಜ್ಜಿತ ಕಟ್ಟಡವಲ್ಲ. ಕೆಲವು ಕಡೆಗಳಲ್ಲಿ ಹೆಂಚಿನ ಮೇಲ್ಛಾವಣಿ ಸೋರುವ ಸ್ಥಿತಿಯಲ್ಲಿವೆ. ಇನ್ನು ಕೆಲವು ಕಟ್ಟಡಗಳಲ್ಲಿ ನೀರಿನ ಸಮಸ್ಯೆಯಿದೆ. ಹೀಗೆ ಹತ್ತಾರು ಸಮಸ್ಯೆಗಳನ್ನು ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿಗಳು ಎದುರಿಸುತ್ತಿವೆ. ಕೆಲವು ಕಟ್ಟಡವಂತೂ ಸುಣ್ಣಬಣ್ಣ ಕಾಣದೇ ವರ್ಷವೇ ಕಳೆದಿದೆ. ಮಕ್ಕಳಿಗೆ ಆಟವಾಡಲು ಬೇಕಾದ ಪರಿಕರವೂ ಕೆಲವು ಕಡೆಗಳಲ್ಲಿ ಇಲ್ಲ. ಹೀಗಾಗಿ ಅಗತ್ಯ ವ್ಯವಸ್ಥೆ ಕಲ್ಪಿಸಿದ ಅನಂತರವಷ್ಟೇ ಮಕ್ಕಳನ್ನು ಆಕರ್ಷಿಸಲು ಸಾಧ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಸದ್ಯ ಜಿಲ್ಲೆಯಲ್ಲಿ 1,222 ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ 1,064 ಗ್ರಾಮೀಣ ಪ್ರದೇಶದಲ್ಲಿ ಹಾಗೂ 158 ನಗರ ಪ್ರದೇಶದಲ್ಲಿದೆ. 1052 ಸ್ವಂತ ಕಟ್ಟಡದಲ್ಲಿದ್ದರೆ, 29 ಅಂಗನವಾಡಿ ಸಮುದಾಯ ಭವನಗಳಲ್ಲಿ ನಡೆಯುತ್ತಿದೆ. 9 ಅಂಗನವಾಡಿಗಳು ಪಂಚಾಯತ್ ಕಟ್ಟಡದಲ್ಲಿ, 4 ಯುವಕ ಮಂಡಲದಲ್ಲಿ, 2 ಮಹಿಳಾ ಮಂಡಲ ದಲ್ಲಿ, 90 ಅಂಗನವಾಡಿಗಳು ಶಾಲಾವರಣ ದಲ್ಲಿ, 5 ಪರ್ಯಾಯ ವ್ಯವಸ್ಥೆಯ ಮೂಲಕ ಮತ್ತು 31 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 1,150ಕ್ಕೂ ಅಧಿಕ ಅಂಗನವಾಡಿಗಳಲ್ಲೂ ಕಾರ್ಯ ಕರ್ತೆಯರಿದ್ದಾರೆ. ನಿವೃತ್ತಿಯಿಂದ ಹುದ್ದೆ ಖಾಲಿಯಾದಂತೆ ಭರ್ತಿ ಪ್ರಕ್ರಿಯೆಯೂ ನಡೆಯುತ್ತಿದೆ.
ವ್ಯಾಪ್ತಿ- ಅಂಗನವಾಡಿ ಸಂಖ್ಯೆ
ಉಡುಪಿ:282
ಕಾರ್ಕಳ:232
ಕುಂದಾಪುರ: 432
ಬ್ರಹ್ಮಾವರ:276
ಮಕ್ಕಳ ಆರೈಕೆಯೇ ಮುಖ್ಯ
ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಲಿಕೆಯ ಜತೆಗೆ ಆರೈಕೆಯೂ ಮುಖ್ಯವಾಗುತ್ತದೆ. ಬಹುತೇಕ ಅಂಗನ ವಾಡಿ ಗಳಲ್ಲಿ ಕಲಿಕೆ ಮತ್ತು ಆರೈಕೆಗೆ ಪೂರಕವಾದ ವ್ಯವಸ್ಥೆಯಿಲ್ಲ. ಮಕ್ಕಳಿಗೆ ಸರಕಾರದಿಂದ ಬರುವ ಪೌಷ್ಠಿಕ ಆಹಾರ ಒದಗಿಸಲಾಗುತ್ತದೆ. ಆದರೆ ಅಂಗನವಾಡಿ ಸಹಾಯಕಿಯರಿಗೆ ಪೂರ್ಣ ಪ್ರಮಾಣದಲ್ಲಿ ಮಕ್ಕಳ ಆರೈಕೆ, ಕಲಿಕೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ, ಅವರಿಗೆ ಆಡಳಿತಾತ್ಮಕ ಕೆಲಸವೂ ಹೆಚ್ಚಿರುತ್ತದೆ. ಸರಕಾರದ ಸರ್ವೆ, ಆರೋಗ್ಯ ಸಂಬಂಧಿಸಿದ ಅಭಿಯಾನ ಸಹಿತ ಬೇರೆ ಬೇರೆ ಕಾರ್ಯಗಳಿಗೂ ಅವನ್ನು ನಿಯೋಜಿಸಲಾಗುತ್ತದೆ.