ಬೆಂಗಳೂರು :ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮದಲ್ಲೂ ರಾಜ್ಯ ಸರ್ಕಾರ ಬೇಧ-ಭಾವ ತೋರಿರುವುದು ಇದೀಗ ಮತ್ತೂಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಅಂಗನವಾಡಿಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳಿಗೆ ಮಾತ್ರ ಮೊಟ್ಟೆ ವಿತರಣೆ ಮಾಡಲು ಸರ್ಕಾರದ ಆದೇಶಿಸಿದ್ದು ಅಲ್ಲಿನ ಇತರೆ ಸಮುದಾಯದ ಮಕ್ಕಳು ಇದರಿಂದ ಇರಿಸು -ಮುರಿಸು ಅನುಭವಿಸುವಂತಾಗಲಿದೆ.
ಸರ್ಕಾರದ ಆದೇಶ ಮಕ್ಕಳಿಗೆ ಮಾತ್ರವಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೂ ತಲೆನೋವು ತರಲಿದ್ದು, ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ಮಾತ್ರ ಮೊಟ್ಟೆ ಕೊಟ್ಟು ಇತರೆ ಸಮುದಾಯದ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂಬ ಸಂದಿಗ್ಧತೆ ಎದುರಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜನವರಿ 18 ರಂದು ಆದೇಶ ಹೊರಡಿಸಿದ್ದು, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ತೀರ್ಮಾನಿಸಿದಂತೆ ಆರು ತಿಂಗಳಿನಿಂದ ಆರು ವರ್ಷದವರೆಗಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ತೀವ್ರ ಅಪೌಷ್ಠಿಕತೆಯ ಮಕ್ಕಳಿಗೆ ಈಗಾಗಲೇ ನೀಡುತ್ತಿರುವ ಮೂರು ದಿನಗಳ ಮೊಟ್ಟೆಯ ಜತೆಗೆ ಹೆಚ್ಚುವರಿಯಾಗಿ ಮೂರು ದಿನ ಮೊಟ್ಟೆ ಕೊಡಲು ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ಅಂಗನವಾಡಿಗೆ ಬರುವ ಮಕ್ಕಳು ಬಡಕುಟುಂಬಗಳಿಂದ ಬಂದವರೇ ಆಗಿರುತ್ತಾರೆ. ಆದರೆ, ಆ ಮಕ್ಕಳಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಮಾತ್ರ ಮೊಟ್ಟೆ ಕೊಡುವ ನಿರ್ಧಾರ ಎಷ್ಟು ಸರಿ. ಅಲ್ಲಿರುವ ಇತರೆ ಸಮುದಾಯದಲ್ಲೂ ಇರುವ ಅಪೌಷ್ಠಿಕತೆ ಸಮಸ್ಯೆಯುಳ್ಳ ಮಕ್ಕಳಿಗೆ ಮೊಟ್ಟೆ ಭಾಗ್ಯ ಏಕಿಲ್ಲ ಎಂಬುದಕ್ಕೆ ಇಲಾಖೆ ಅಧಿಕಾರಿಗಳಲ್ಲೂ ಸ್ಪಷ್ಟ ಉತ್ತರವಿಲ್ಲ. ಸರ್ಕಾರದ ಆದೇಶ ನಾವು ಪಾಲಿಸಬೇಕಾಗುತ್ತದೆ ಅಷ್ಟೇ ಎಂದು ಅವರು ಹೇಳುತ್ತಾರೆ.
ವಿವಾದ ಮೊದಲಲ್ಲ:
ಈ ಹಿಂದೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರವಾಸ ಕರೆದೊಯ್ಯುವ ವಿಚಾರದಲ್ಲೂ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗಷ್ಟೇ ಆಯೋಜಿಸುವ ಬಗ್ಗೆ ಆದೇಶ ಹೊರಡಿಸಿ ಟೀಕೆಗೆ ಗುರಿಯಾಗಿತ್ತು. ಆ ನಂತರ ಶಾದಿಭಾಗ್ಯ ಯೋಜನೆ ಮುಸ್ಲಿಂ ಸಮುದಾಯಕ್ಕೆ ಮಾತ್ರ ಎಂದು ಆದೇಶ ಹೊರಡಿಸಿ ಇತರೆ ಸಮುದಾಯದ ಆಕ್ರೋಶಕ್ಕೆ ಒಳಗಾಗಿತ್ತು. ಟೀಕೆಯ ನಂತರ ವಿದ್ಯಾರ್ಥಿಗಳ ಪ್ರವಾಸ ಎಲ್ಲ ಸಮುದಾಯಕ್ಕೂ ವಿಸ್ತರಿಸಲಾಗಿತ್ತು. ಶಾದಿ ಭಾಗ್ಯ ಮುಸ್ಲಿಂ ಅಷ್ಟೇ ಅಲ್ಲದೆ ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಸಿಖ್ ಸೇರಿ ಇತರೆ ಅಲ್ಪಸಂಖ್ಯಾತ ಸಮುದಾಯದವರಿಗೂ ವಿಸ್ತರಿಸಲಾಗಿತ್ತು.