Advertisement

ಸ್ವಚ್ಛತಾ ಕಾರ್ಯಕ್ಕೆ ಅಂಗನವಾಡಿ ಕೇಂದ್ರ ಸಾಥ್‌

11:58 AM Mar 26, 2018 | Team Udayavani |

ಪಡುಪಣಂಬೂರು: ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಕಲ್ಪನೆಯ ಕಾರ್ಯಕ್ಕೆ ಆದ್ಯತೆ ನೀಡಿ ದೇಶದಲ್ಲಿಯೇ ಸಂಚಲನ ಮೂಡಿಸುವಂತೆ ಮಾಡಿದ್ದರಿಂದ ಕೇವಲ ನಗರಕ್ಕೆ ಸೀಮಿತವಾಗದೇ ಇಂದು ಗ್ರಾಮೀಣ ಭಾಗದಲ್ಲೂ ಗ್ರಾಮ ಪಂಚಾಯತ್‌ ಮೂಲಕ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂತಹ ವಿಶೇಷ ಕಾರ್ಯಕ್ಕೆ ಈಗ ಅಂಗನವಾಡಿ ಕೇಂದ್ರವು ಸಹ ಸೇರ್ಪಡೆಗೊಂಡಿದೆ.

Advertisement

ಇಲ್ಲಿನ ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಸಂಘ- ಸಂಸ್ಥೆಗಳು ವಾರಕ್ಕೆ ಮೂರರಿಂದ ನಾಲ್ಕು ಬಾರಿ ತಮ್ಮ ಪರಿಸರದಲ್ಲಿ ಸ್ವಚ್ಛತೆಯ ಶ್ರಮದಾನದಲ್ಲಿ ತೊಡಗಿಸಿಕೊಂಡಿದೆ. ಈಗ ಗ್ರಾಮದ ಎಲ್ಲ 6 ಅಂಗನವಾಡಿ ಕೇಂದ್ರಗಳು ಪ್ಲಾಸ್ಟಿಕ್‌ ಸಂಗ್ರಹ ಕೇಂದ್ರವಾಗಿ ಪರಿವರ್ತನೆಗೊಂಡಿರುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛತ ಕಾರ್ಯ ನಿರ್ವಹಿಸುವ ಜವಾಬ್ದಾರಿಯು ಹಂಚಿಕೆಯಾದಂತಾಗಿದೆ.

ಸಂಗ್ರಹ ಹೇಗೆ?
ಅಂಗನವಾಡಿ ಕೇಂದ್ರದ ಸುತ್ತ ಮುತ್ತ ವ್ಯಾಪ್ತಿಯ ಗ್ರಾಮಸ್ಥರು ಪ್ಲಾಸ್ಟಿಕ್‌ನ ಕೈ ಚೀಲ, ಹಾಲಿನ ಚೀಲ, ಇನ್ನಿತರ ಪ್ಲಾಸ್ಟಿಕ್‌
ನಂತಹ ವಸ್ತುಗಳು ಬಳಕೆಯಾಗಿ ತ್ಯಾಜ್ಯಕ್ಕೆ ಸೇರುವ ಪ್ಲಾಸ್ಟಿಕ್‌ಗಳನ್ನು ಮಾತ್ರ ಅಂಗನವಾಡಿ ಕೇಂದ್ರಕ್ಕೆ ನೀಡಬೇಕು. ಒಣ ಕಸ ಮತ್ತು ಹಸಿ ಕಸದೊಂದಿಗೆ ಸೇರಿಸದೇ ಪ್ಲಾಸ್ಟಿಕನ್ನು ಮರು ಬಳಕೆಯಂತೆ ಮಾಡಲು ಕೇಂದ್ರಕ್ಕೆ ನೀಡಬೇಕು. ಪ್ರತಿ ಶನಿವಾರ ಕೇಂದ್ರಗಳಿಗೆ ಬಂದು ಪಂಚಾಯತ್‌ನ ತ್ಯಾಜ್ಯ ವಾಹನಗಳು ವಿಶೇಷವಾಗಿ ಸಂಗ್ರಹಿಸುತ್ತದೆ. ಇದನ್ನು ಅನಂತರ ಜಿಲ್ಲಾ ಕೇಂದ್ರಕ್ಕೆ ವಿಲೇವಾರಿ ಮಾಡಲು ಬಳಕೆ ಯಾಗುತ್ತದೆ. ಜಿಲ್ಲೆಯ ಎಲ್ಲ ಗ್ರಾ.ಪಂ.ಗಳು ಗ್ರಾಮದ ಅಂಗನವಾಡಿ ಕೇಂದ್ರವನ್ನು ಈ ರೀತಿಯಾಗಿ ಬಳಸಿಕೊಳ್ಳಲು ಸುತ್ತೋಲೆ ಹೊರಡಿಸಲಾಗಿದೆ.

ಪಂಚಾಯತ್‌ ವ್ಯಾಪ್ತಿಯ ತೋಕೂರು ಸುಬ್ರಹ್ಮಣ್ಯ, ತೋಕೂರು ಹಿಂದೂಸ್ತಾನಿ, ಕಲ್ಲಾಪು, ಕೆರೆಕಾಡು-ಬೆಳ್ಳಾಯರು, ಕಂಬಳಬೆಟ್ಟು, ಪಡುಪಣಂಬೂರು ಅಂಗನವಾಡಿ ಕೇಂದ್ರಗಳು ತ್ಯಾಜ್ಯ ಸಂಗ್ರಹಿಸಿ ನೀಡುತ್ತಿವೆ. ಪಂಚಾಯತ್‌ನಿಂದ ವಿತರಿಸಿರುವ ರೇಡಿಯೋ ಬಳಸಿಕೊಂಡು ಪ್ರತಿ ಶುಕ್ರವಾರ ಪ್ರಸಾರ ವಾಗುವ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಆಲಿಸಿ ಗ್ರಾಮದಲ್ಲಿ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ ಸಂಯೋಜಿಸುವಾಗ ಸಹಕಾರ ನೀಡುತ್ತಿದೆ.

ಸ್ವಚ್ಛತೆ ನಮ್ಮ ಕರ್ತವ್ಯ
ಅಂಗನವಾಡಿ ಕೇಂದ್ರವನ್ನು ಸ್ವಚ್ಛತೆಯಲ್ಲಿ ಗ್ರಾ.ಪಂ.ಗೆ ಸಹಕಾರ ನೀಡುವುದನ್ನು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಕಾರ್ಯಕರ್ತರಿಗೆ ಕೇಂದ್ರದಲ್ಲಿಯೇ ಸಾಕಷ್ಟು ಕೆಲಸಗಳಿದೆ. ಆ ನಡುವೆಯೂ ಇಂತಹ ಕಾರ್ಯಕ್ಕೆ ಕೈ ಜೋಡಿಸಿದ್ದೇವೆ. ಜನರು ಸಹ ಪ್ಲಾಸ್ಟಿಕ್‌ನ್ನು ನೀಡುವಾಗ ಆದಷ್ಟು ಬಿಡಿಬಿಡಿಯಾಗಿ, ನೇರವಾಗಿ ಮರು ಬಳಕೆಯಾಗುವಂತೆ ನೀಡಿದರೆ ಸಹಕಾರಿಯಾಗುತ್ತದೆ.
– ನಾಗರತ್ನಾ,ಮೇಲ್ವಿಚಾರಕರು,
 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಂಗಳೂರು

Advertisement

ಸ್ವಚ್ಛತೆ ಜಾಗೃತಿ ನಿರಂತರ
ಗ್ರಾಮದಲ್ಲಿ ಅಂಗನವಾಡಿ ಕೇಂದ್ರವು ಬಹಳ ಹತ್ತಿರದ ಸಂಪರ್ಕ ಕೇಂದ್ರವಾಗಿರುವುದರಿಂದ ಮಹಿಳೆಯರು ಹೆಚ್ಚಾಗಿ ಮಕ್ಕಳೊಂದಿಗೆ ಭೇಟಿ ನೀಡುತ್ತಾರೆ. ಜತೆಗೆ ಬಾಣಂತಿಯರು, ಗರ್ಭಿಣಿಯರು ನಿಕಟವಾಗಿ ಕೇಂದ್ರದ ಅವಕಾಶ ಪಡೆಯುವಾಗ ಇಂತಹ ಸ್ವಚ್ಛತಾ ಜಾಗೃತಿಯನ್ನು ಪ್ರಚಾರ ಪಡಿಸಲು ಹಾಗೂ ಕೇಂದ್ರವನ್ನು ಇದಕ್ಕಾಗಿ ಬಳಸಿಕೊಳ್ಳುವ ಉದ್ದೇಶವು ಸ್ವಲ್ಪ ಮಟ್ಟನಲ್ಲಿ ಪರಿಣಾಮ ಬೀರಿದೆ.
-ಲೋಕನಾಥ ಭಂಡಾರಿ, ಕಾರ್ಯದರ್ಶಿ.
ಸುಬ್ರಹ್ಮಣ್ಯ, ತೋಕೂರು ಹಿಂದೂಸ್ತಾನಿ,

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next