Advertisement

ಬೀಳ್ಳೋ ಸ್ಥಿತೀಲಿ ಅಂಗನವಾಡಿ ಕಟ್ಟಡ

01:15 PM Apr 12, 2017 | Team Udayavani |

ಪಿರಿಯಾಪಟ್ಟಣ: ಸರ್ಕಾರವು ಶಿಕ್ಷಣಕ್ಕೆ ಆದತೆ ನೀಡಿ ಪ್ರತಿ ಮಕ್ಕಳಿಗೂ ಕೂಡ ಕಡ್ಡಾಯ ಶಿಕ್ಷಣ ಜಾರಿಗೊಳಿಸಿ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುತ್ತಿದೆ. ಆದರೆ, ತಾಲೂಕಿನ ಮರಳ ಕಟ್ಟೆಯ ಗಿರಿಜನಹಾಡಿಯ ಮಕ್ಕಳಿಗೆ ಸೂಕ್ತ ಅಂಗನವಾಡಿ ವ್ಯವಸ್ಥೆ ಇಲ್ಲದೆ ವಿದ್ಯಾಭ್ಯಾಸ ದಿಂದ ವಂಚಿತರಾಗುತ್ತಿದ್ದಾರೆ.

Advertisement

ತಾಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಮರಳುಕಟ್ಟೆ ಹಾಡಿಯಲ್ಲಿ ಗಿರಿಜನರೇ ಹೆಚ್ಚು ವಾಸವಾಗಿದ್ದು ಇಲ್ಲಿ ನೆಪಮಾತ್ರಕ್ಕೆ ಅಂಗನವಾಡಿ ಕೇಂದ್ರವಿದೆ. ಆದರೆ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಎಂಬುದಿಲ್ಲ. ಇಲ್ಲಿನ ಅಂಗನವಾಡಿ ಕಟ್ಟಡವು ಶಿಥಿಲವಸ್ಥೆ ತಲುಪಿದ್ದು ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿರುಕು ಬಿಟ್ಟಿರುವ ಕಟ್ಟಡ: ಈ ಅಂಗನ ವಾಡಿಯನ್ನು ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ್ದು ಕಟ್ಟಡ ಶಿಥಿಲವಸ್ಥೆ ತಲುಪಿರುವ ಕಾರಣ ಯಾವ ಕ್ಷಣ ದಲ್ಲಾದರೂ ಚಾವಣಿ ಕುಸಿದು ಬೀಳುವ ಹಂತದಲ್ಲಿದೆ. ಗೋಡೆಗಳು ಬಿರುಕು ಬಿಟ್ಟಿದೆ. ಗೋಡೆಗಳನ್ನು ಕಿಡಿಗೇಡಿಗಳು ಹೊಡೆದು ಕಿಂಡಿಗಳನ್ನುನಿರ್ಮಿಸಿದ್ದಾರೆ.

ಇದರಿಂದಾಗಿ ಹಾವು ಹಲ್ಲಿಗಳ ಕಾಟವೂ ಹೆಚ್ಚಾಗಿದ್ದು ಮಕ್ಕಳ ಬದಲಾಗಿ ಇವುಗಳೇ ಹೆಚ್ಚಾಗು ಅಂಗನವಾಡಿಯಲ್ಲಿ ವಾಸಮಾಡುತ್ತಿವೆ. ಈ ಕಾರಣದಿಂದಾಗಿ ಮಕ್ಕಳು ಅಂಗನವಾಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ಹಳೆಯ ಹೆಂಚು, ಮರಗಳಿಂದ ನಿರ್ಮಿಸಿರುವ ಕಾರಣದಿಂದ ಮಳೆಬಂತೆಂದರೆ ಸಾಕು ಹೆಂಚುಗಳು ತೂರಿಕೊಂಡು ಬೀಳುತ್ತಿದ್ದು ಚಾವಣಿ ಕೂಡ ಬೀಳುವ ಹಂತ ತಲುಪಿದೆ.

ಬಣ್ಣ ಹಚ್ಚದಿರುವುದು: ಅಂಗನವಾಡಿಯ ಪ್ರಾರಂಭವಾದಾಗ ಮಾತ್ರ ಈ ಕಟ್ಟಡಕ್ಕೆ  ಸುಣ್ಣಬಣ್ಣ ಬಳಿದಿದ್ದಿ ಬಿಟ್ಟರೆ ಇದುವರೆವಿಗೂ ಯಾವುದೇ ಬಣ್ಣವನ್ನು ಇಲ್ಲಿನ ಗೋಡೆಗಳು ಕಂಡಿಲ್ಲ.

Advertisement

ಪೌಷ್ಟಿಕ ಆಹಾರದ ಕೊರತೆ: ಅಂಗನ ವಾಡಿಯ ದುಸ್ಥಿತಿ ಕಂಡರೆ ಮಕ್ಕಳಿಗೆ ಸಿಗುವ ಪೌಷ್ಟಿಕ ಆಹಾರವೂ ಕೂಡ ಸಿಗುತ್ತಿಲ್ಲ ವೆಂಬುದಾಗಿದ್ದು ಮಕ್ಕಳು ಆಹಾರದ ಕೊರತೆ ಯಿಂದ ಬಳಲುತ್ತಿದ್ದಾರೆ. ಇದು ತಾಲೂಕಿನ ಗಡಿಗ್ರಾಮವಾದ್ದರಿಂದ ಇದರ ಕಡೆ ಯಾವ ಜನಪ್ರತಿನಿಧಿಗಳಾಗಲಿ ಗಮನಹರಿಸಿಲ್ಲ.

ಅನೈರ್ಮಲ್ಯದ ತಾಂಡವ: ಗ್ರಾಮದಲ್ಲಿ ಸೂಕ್ತವಾದ ಚಂರಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರೆಲ್ಲಾ ಅಂಗನವಾಡಿ ಕೇಂದ್ರದ ಮುಂದೆ ಬಂದು ನಿಲ್ಲುವುದರಿಂದ ತ್ಯಾಜ್ಯಗಳು ಕೊಳೆತು ಗಬ್ಬು ನಾರುತ್ತಿವೆ. ಇದರಿಂದ ಸೊಳ್ಳೆ ನೊಣಗಳ ತಾಣವಾಗಿ ಪರಿಣಮಿಸಿದ್ದು ಸಾಂಕ್ರಾಮಿಕ ರೋಗ ಹರಡಬಹುದೆಂಬ ಭೀತಿಯಲ್ಲಿದ್ದು, ಪ್ರತಿನಿತ್ಯ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತಿದ್ದಾರೆ.

ಹೀಗೆ ಅನೇಕ ಸಮಸ್ಯೆಗಳ ನಡುವೆ ನೆಪಮಾತ್ರಕ್ಕೆ ಹಾಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು ಇದನ್ನು ಸರಿಪಡಿಸಿ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿ ನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ಹಾಡಿಯ ಜನರ ಅಳಲು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿ ಗಳಾಗಲೀ, ಜನಪ್ರತಿನಿಧಿಗಳಾಗಲೀ ಇತ್ತಕಡೆ ಗಮನಹರಿಸಿ ಅಂಗನವಾಡಿಗೆ ಮರುಜೀವ ಕಲ್ಪಿಸುವರೇ? ಕಾದು ನೋಡಬೇಕಾಗಿದೆ.

* ರಾ.ಶ.ವೀರೇಶ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next