Advertisement

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

06:00 AM Jul 08, 2018 | |

ಕುಂದಾಪುರ: ಕನಿಷ್ಠ ವೇತನ, ಕನಿಷ್ಠ ಮಾಸಿಕ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಶನಿವಾರ ಕುಂದಾಪುರದಲ್ಲಿ ಕಾಲ್ನಡಿಗೆ ಜಾಥಾದ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿತು. 

Advertisement

ಕುಂದಾಪುರದ ತಾ.ಪಂ. ಕಚೇರಿ ಮುಂಭಾಗದಿಂದ ಆರಂಭವಾದ ಜಾಥಾವು ಶಾಸಿŒ ಸರ್ಕಲ್‌ ಮೂಲಕವಾಗಿ ಮಿನಿವಿಧಾನಸೌಧದವರೆಗೆ ನಡೆಯಿತು. ಅಲ್ಲಿ ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಬಳಿಕ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್‌ ಅವರಿಗೆ ಮನವಿ ಸಲ್ಲಿಸಿದರು. 

ಮಳೆಯ ನಡುವೆಯೂ ಜಾಥಾ
ಜೋರಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯೂ ಕರೆ ನೀಡಿದ್ದ ಮುಷ್ಕರದಿಂದ ಹಿಂದೆ ಸರಿಯದೇ ಪ್ರತಿಭಟನೆಯನ್ನು ನಡೆಸಿದರು. ಭಾರೀ ಮಳೆಯ ನಡುವೆಯೂ 13 ವಲಯಗಳ ಸುಮಾರು 500ಕ್ಕೂ ಅಧಿಕ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸಿದ್ದರು. 

ಪ್ರತಿಭಟನೆಯಲ್ಲಿ ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡೀಸ್‌, ಕಾರ್ಯದರ್ಶಿ ನಾಗರತ್ನಾ ಹವಾಲ್ದಾರ್‌, ಕೋಶಾಧಿಕಾರಿ ಶೋಭಾ, ಉಪಾಧ್ಯಕ್ಷರಾದ ಗುಲಾಬಿ ಬೆಳ್ವೆ, ಪದ್ಮಾವತಿ ಬಾಳೇಕೆರೆ, ದಾಕ್ಷಿಯಿಣಿ, ಇಂದಿರಾ ಬೈಂದೂರು, ಸವಿತಾ ಬಸ್ರೂರು, ನಾಗರತ್ನಾ ತೆಂಕಬೆಟ್ಟು ಮತ್ತಿತರರು ಪಾಲ್ಗೊಂಡಿದ್ದರು. 

ಸರಕಾರದ ಗಮನಕ್ಕೆ
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉತ್ತಮ ಕೆಲಸ ಮಾಡುತ್ತಿದ್ದು, ಅವರ ಕುರಿತು ಒಳ್ಳೆಯ ಭಾವನೆಯಿದೆ. ಇದೇ ಕಾರ್ಯವನ್ನು ಇನ್ನೂ ಕೂಡ ಮುಂದುವರಿಸಿಕೊಂಡು ಹೋಗಿ. ನಿಮ್ಮ ಬೇಡಿಕೆಗಳನ್ನು ಡಿಸಿ ಅವರ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು.
– ಟಿ. ಭೂಬಾಲನ್‌, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ  

Advertisement

ಬೇಡಿಕೆಗಳೇನು?
– ಕನಿಷ್ಠ ವೇತನ 18 ಸಾವಿರ ರೂ. ಜಾರಿ
– ನಿವೃತ್ತಿಯಾದ, ನಿವೃತ್ತಿಯಾಗಲಿರುವ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಕನಿಷ್ಠ ಮಾಸಿಕ ಪಿಂಚಣಿ 6 ಸಾವಿರ ರೂ. 
– ನೂತನ ಬಾಲವಿಕಾಸ ಸಮಿತಿ ರಚನೆ ಆದೇಶದಲ್ಲಿ ಅಧ್ಯಕ್ಷರ ಅನುಮತಿ ಪಡೆದು ರಜೆ ಮಾಡಬೇಕೆಂಬ ಆದೇಶ ಹಿಂಪಡೆಯುವುದು
– ಕಾರ್ಯಕರ್ತೆಯರಿಗೆ ಮೇಲ್ವಿಚಾರಕರ ಹುದ್ದೆ ನೀಡುವಾಗ ಇಲಾಖೆ ಪರೀಕ್ಷೆ ಮಾಡಿ ನೇಮಿಸಬೇಕು. ಈ ಹಿಂದೆ ಲೋಕ ಸೇವಾ ಆಯೋಗ ನಡೆಸಿದ ಪರೀಕ್ಷೆ ರದ್ದು ಮಾಡಿ, ಸೇವಾ ಹಿರಿತನದ ಆಧಾರದಲ್ಲಿ ಭಡ್ತಿ 
– ಪ್ರತಿ ತಿಂಗಳ ಗೌರವ ಧನ ಹಾಗೂ ಮೊಟ್ಟೆ ಹಣವನ್ನು ಪ್ರತಿ ತಿಂಗಳ 5 ರೊಳಗೆ ನೀಡಬೇಕು
– ಸೇವಾವಧಿ ಆಧಾರದಲ್ಲಿ ಗೌರವಧನ/ ವೇತನ ಹೆಚ್ಚಳ
– ಸಾದಿಲ್ವಾರು ವೆಚ್ಚವನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು
– ಅನಾರೋಗ್ಯದಲ್ಲಿರುವ ನೌಕರರಿಗೆ ಸ್ವಯಂ ನಿವೃತ್ತಿಗೆ ಅವಕಾಶ 
– ಅಂಗನವಾಡಿ ನೌಕರರನ್ನು ಸಿ, ಡಿ ಗ್ರೂಪ್‌ ನೌಕರರನ್ನಾಗಿ ಕೇಂದ್ರ ಸರಕಾರ ಘೋಷಿಸಬೇಕು
– ಬೇಸಿಗೆ ರಜೆ ಅಂಗನವಾಡಿಗೂ ನೀಡಬೇಕು.
– ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ- ಯುಕೆಜಿ ಸರಕಾರದ ವತಿಯಿಂದ ಪ್ರಾರಂಭಿಸಿದರೆ, ಆ ಶಾಲೆಗೆ ಅಂಗನವಾಡಿ ನೌಕರ ಆಯ್ಕೆ ಮಾಡಬೇಕು
– ಮಾತೃಪೂರ್ಣ ಯೋಜನೆ ಹೊರೆಯಾಗುತ್ತಿದ್ದು, ಕೆಲವು ಅಂಗನವಾಡಿಗಳಲ್ಲಿ ಸಹಾಯಕಿಯರಿಲ್ಲದೆ ಸಮಸ್ಯೆ ಯಾಗಿದೆ. ಜಿಲ್ಲೆಯಲ್ಲಿ ಈ ಹಿಂದಿನಂತೆ ಕಿಟ್‌ ರೂಪದಲ್ಲಿ ಕೊಡಲಿ.

ಕಾರ್ಕಳದಲ್ಲೂ  ಪ್ರತಿಭಟನೆ
ಕಾರ್ಕಳ:
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಂಗನವಾಡಿ ಕಾರ್ಯ ಕರ್ತೆಯರು, ಸಹಾಯಕಿಯರ ಸಂಘದ ವತಿಯಿಂದ ಜು. 7ರಂದು ಕಾರ್ಕಳ ತಾ.ಪಂ. ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಯಿತು.

ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಯಾದ ಪೌಷ್ಟಿಕಾಹಾರವನ್ನು ಪ್ಯಾಕೇಜ್‌ ರೂಪದಲ್ಲಿ ಹಾಗೂ ನೇರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತೆಯರು ರಾಜ್ಯ ಸರಕಾರದ ಮಾತೃಪೂರ್ಣ ಯೋಜನೆಯನ್ನು ಹಿಂದಿನಂತೆಯೇ ಫ‌ಲಾನುಭವಿಗಳಿಗೆ ನೀಡಲು ಆಗ್ರಹಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೂ ಮೊದಲು ಕೆಇಬಿಯಿಂದ ಬಂಡೀಮಠ ಬಸ್ಸು ನಿಲ್ದಾಣದ ಮೂಲಕ ತಹಶೀಲ್ದಾರ್‌ ಕಚೇರಿವರೆಗೆ ಜಾಥ ನಡೆಸಿ ದರು. ಕಾರ್ಕಳ ತಾಲೂಕಿನ 9 ವಲಯಗಳ ಸುಮಾರು ಸುಮಾರು 450 ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿ ಭಟನೆಯ ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್‌ ಮೂಲಕ ಸರಕಾರಕ್ಕೆ ಸಲ್ಲಿಸಿದರು.

ಸಂಘದ ಅಧ್ಯಕ್ಷೆ ಪದ್ಮಾವತಿ, ಕಾರ್ಯದರ್ಶಿ ಸಾಕಮ್ಮ, ಕೋಶಾಧಿಕಾರಿ ಚಂದ್ರಕಲಾ, ಉಪಾಧ್ಯಕ್ಷೆ ಗೀತಾ, ಪ್ರಮುಖರಾದ ಪ್ರಮೀಳಾ, ಮಮತಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next