Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಉದ್ಯೋಗ ಮುಕ್ತಿ ಭೀತಿ!

10:17 AM Jan 10, 2020 | mahesh |

ಬೆಂಗಳೂರು: ಒಂದೇ ಓರಗೆಯ ಮಕ್ಕಳ ದಾಖಲಾತಿ ಸಂಬಂಧ ಸರಕಾರಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಮಧ್ಯೆಯೇ, ಇನ್ನಷ್ಟು ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿರುವ ವಿಚಾರ ಬಹಿರಂಗವಾಗಿದೆ. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಉದ್ಯೋಗ ಕಳೆದು ಕೊಳ್ಳುವ ಭೀತಿ ಎದುರಾಗಿದೆ.

Advertisement

ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಅಂಗನವಾಡಿಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಎರಡೂ ಕಡೆಯವರು ತಂತಮ್ಮ ವಾದವನ್ನು ಮುಖ್ಯ ಕಾರ್ಯದರ್ಶಿಗಳ ಮುಂದಿಟ್ಟಿದ್ದಾರೆ. ಈ ವಿಚಾರವು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದ್ದು ಅಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದರು.

ಪೂರ್ವ ಪ್ರಾಥಮಿಕ ಶಾಲೆಗೆ ಬೇಡಿಕೆ
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ ಆರಂಭಿಸಿರುವ ಪೂರ್ವ ಪ್ರಾಥಮಿಕ ತರಗತಿಗಳಿಗೆ ಬೇಡಿಕೆ ಹೆಚ್ಚಿದೆ. ರಾಜ್ಯದಲ್ಲಿರುವ 200ಕ್ಕೂ ಅಧಿಕ ಕರ್ನಾಟಕ ಪಬ್ಲಿಕ್‌ ಶಾಲೆ ಸಹಿತವಾಗಿ ಕೆಲವೊಂದು ಪ್ರಾಥಮಿಕ ಶಾಲೆಗಳ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದೆ. ವಿದ್ಯಾರ್ಥಿಗಳ ದಾಖಲಾತಿಯೂ ಇದರಿಂದಾಗಿ ಕೆಲವು ಶಾಲೆಗಳಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಜಿಲ್ಲೆಗಳ ಸರಕಾರಿ ಶಾಲೆಗಳು ಪೂರ್ವ ಪ್ರಾಥಮಿಕ ಶಾಲೆಗೆ ಅವಕಾಶ ಕೋರಿ ಇಲಾಖೆಗೆ ಕೇಳಿಕೊಂಡಿವೆ. ಅಲ್ಲದೆ, ಸರಕಾರಿ ಶಾಲಾ ಶಿಕ್ಷಕರ ಸಂಘವೂ ಇದಕ್ಕೆ ಬೇಡಿಕೆ ಇಟ್ಟಿದೆ. ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯುವ ಮೂಲಕ ಸರಕಾರಿ ಶಾಲೆಗೆ ಉತ್ತೇಜನ ನೀಡಬೇಕು ಎಂದು ಕೋರಿಕೊಂಡಿದೆ. ಆದರೆ ಸರಕಾರವು ಅಂತಿಮ ನಿರ್ಧಾರ ತೆಗೆದುಕೊಳ್ಳದೇ ಇಲಾಖೆಯು ಈ ವಿಚಾರವಾಗಿ ಯಾವುದೇ ತೀರ್ಮಾನ ಮಾಡುವಂತಿಲ್ಲ.

ಅಂಗನವಾಡಿ ವಲಯ ವಾದ
– ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯುವುದರಿಂದ ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಅಂಗನವಾಡಿ ಕಾರ್ಯಕರ್ತೆ ಯರು ಉದ್ಯೋಗ ಕಳೆದು ಕೊಳ್ಳುತ್ತಾರೆ. ಹೀಗಾಗಿ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಬಾರದು ಅಥವಾ ಪೂರ್ವ ಪ್ರಾ.ಶಾಲೆಯ ಸಂಪೂರ್ಣ ವ್ಯವಸ್ಥೆಯನ್ನು ಅಂಗನವಾಡಿಗೆ ವಹಿಸಿಬಿಡಬೇಕು.

ಶಿಕ್ಷಣ ಇಲಾಖೆ ವಾದ
– ಸರಕಾರಿ ಶಾಲೆಯಲ್ಲಿರುವ ಶಿಕ್ಷಕರನ್ನೇ ಬಳಸಿಕೊಂಡು ಪೂರ್ವ ಪ್ರಾಥಮಿಕ ಶಾಲೆ ನಡೆಸುತ್ತೇವೆ. ಹಲವು ಕಡೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ, ಇನ್ನಷ್ಟು ಬೇಡಿಕೆ ಕೂಡ ಬರುತ್ತಿದೆ. ಹೀಗಾಗಿ ಅಂಗನವಾಡಿ ಕೇಂದ್ರಕ್ಕೂ ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳಿಗೂ ಸಂಬಂಧ ಇಲ್ಲ.

Advertisement

– ಅಂಗನವಾಡಿ ಕೇಂದ್ರಗಳು ಮಕ್ಕಳ ಪೌಷ್ಟಿಕಾಂಶದ ವಿಚಾರವಾಗಿ ಹೆಚ್ಚಿನ ಗಮನಹರಿಸಲಿ. ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಲಿವೆ. ಇದರಿಂದ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಪೂರ್ವ ಪ್ರಾಥಮಿಕ ತರಗತಿಗಳ ನಡುವೆ ಯಾವುದೇ ಗೊಂದಲ ಸೃಷ್ಟಿಯಾಗುವುದಿಲ್ಲ.

ಹೊಸದಾಗಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಸರಕಾರದ ಅನುಮತಿ ಕೋರಿದ್ದೇವೆ. ಈ ಸಂಬಂಧವಾಗಿ ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದ್ದಾರೆ. ಇಲಾಖೆಯ ಅಗತ್ಯವನ್ನು ಹೇಳಿದ್ದೇವೆ. ಸರಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
– ಉಮಾಶಂಕರ್‌, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next