ಮಂಡ್ಯ: ಕೇಂದ್ರ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯ, ಹೊಸ ಗುಣಮಟ್ಟದ ಮೊಬೈಲ್ ವಿತರಣೆ ಹಾಗೂ ಬಜೆಟ್‌ನಲ್ಲಿ ಹೆಚ್ಚಳವಾದ 1 ಸಾವಿರ ರೂ. ಗೌರವಧನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಬಾಲಭವನದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಕಳಪೆ ಗುಣಮಟ್ಟದ ಮೊಬೈಲ್ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು. ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಿ ಜಾರಿಗೊಳಿಸಬೇಕು. ಇಎಸ್‌ಐ, ಪಿಎಫ್, ಪಿಂಚಣಿ, ಎಕ್ಸ್ ಗ್ರ್ಫೇಷಿಯಾ ಸೌಲಭ್ಯ ನೀಡಬೇಕು. 45 ಮತ್ತು 46ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್‌ಗಳ ಶಿಫಾರಸು ಜಾರಿ ಮಾಡಬೇಕು. ಸುಪ್ರೀಂಕೋರ್ಟ್ ನೀಡಿರುವ ಗ್ರ್ಯಾಚ್ಯುಟಿ ಕೊಡುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಸಿಬ್ಬಂದಿಯ ವಿವಿಧ ಬೇಡಿಕೆಗಳು: ಭತ್ಯೆ ಪರಿಶೀ ಲನೆ ಮತ್ತು ನಿಗದಿಗಾಗಿ ಸಮಿತಿ ರಚಿಸಬೇಕು. ಏಕರೂಪದ ಸೇವಾ ನಿಯಮಗಳನ್ನು ರೂಪಿಸಬೇಕು. ದೆಹಲಿಯಲ್ಲಿ ಸಂಘಟನೆ, ಮುಷ್ಕರ ಮಾಡಿದ ಕಾರಣಕ್ಕಾಗಿ ಕೆಲಸದಿಂದ ತೆಗೆದಿರುವ ಎಲ್ಲರನ್ನೂ ಮರು ನೇಮಕಾತಿ ಮಾಡಿಕೊಂಡು ಸಂಘಟನೆ, ಪ್ರತಿಭಟಿಸುವ ಹಕ್ಕು ಖಾತರಿಪಡಿಸಬೇಕು. ಪರಿಣಾಮಕಾರಿ ಕೆಲಸ ಮಾಡಲು ಗುಣಮಟ್ಟದ ಮೊಬೈಲ್ ಕೊಡಬೇಕು. ಹಂತಹಂತವಾಗಿ ಟ್ಯಾಬ್ಲೆಟ್ ನೀಡಬೇಕು. ಮೊಬೈಲ್‌ಗಳಲ್ಲಿ ಪ್ರಾದೇಶಿಕ ಭಾಷೆ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶ ಹಿಂಪಡೆಯಬೇಕು. ಐಸಿಡಿಎಸ್‌ಯೇತರ ಮತ್ತು ಇತರೆ ಇಲಾಖೆಗಳ ಕೆಲಸ ಹಚ್ಚಬಾರದು. ಇಸಿಸಿಇ ಮತ್ತು ಐಸಿಡಿಎಸ್ ಗುಣಾತ್ಮಕ ಅನುಷ್ಠಾನಕ್ಕಾಗಿ ಹಾಗೂ ಸಂಬಳ ಮತ್ತು ಸಾಮಾಜಿಕ ಭದ್ರತೆಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡಬೇಕು. ಎನ್‌ಇಪಿ 2020 ಅನ್ನು ಹಿಂಪಡೆಯಬೇಕು ಸೇರಿ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ತಾಲೂಕು ಅಧ್ಯಕ್ಷರಾದ ಪ್ರಮೀಳಾಕುಮಾರಿ, ಮಂಗಳಾ ಗಾಯಿತ್ರಿ, ನೂರಾರು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.