Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಪಾವತಿ ಹೊರೆ

09:13 PM Jul 28, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮೊಟ್ಟೆಯ  ಹೋಲ್‌ಸೇಲ್‌ ದರ ಏರಿಕೆ ಕಂಡಿದ್ದರೂ ಹೆಚ್ಚುವರಿ ದರವನ್ನು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೈಯಿಂದಲೇ ಕಳೆದ ಎರಡು ವರ್ಷಗಳಿಂದ ಭರಿಸುತ್ತಿ ದ್ದಾರೆ. ಇಲಾಖೆಯಿಂದ ಒಂದು ಮೊಟ್ಟೆಗೆ ನೀಡುತ್ತಿರುವ ಶುಲ್ಕ 5 ರೂ. ಮಾತ್ರ!

Advertisement

ಮೊಟ್ಟೆಯ ಈಗಿನ ಮಾರುಕಟ್ಟೆ ದರ 6ರಿಂದ 6.5 ರೂ. ಆಗಿದ್ದು  ಹೋಲ್‌ಸೇಲ್‌ನಲ್ಲಿ ಗ್ರಾಹಕರು 5.5ರಿಂದ 6 ರೂ. ಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಇಲಾಖೆಯು ಪ್ರತೀ ಮೊಟ್ಟೆಗೆ ಯೋಜನೆ ಆರಂಭದಿಂದಲೂ 5 ರೂ. ನಿಗದಿಪಡಿಸಿತ್ತು. ಇದೀಗ ಮೊಟ್ಟೆಯ ಮಾರುಕಟ್ಟೆ ದರ ಹೆಚ್ಚಳವಾಗಿದ್ದು ಅಂಗನವಾಡಿ ಕಾರ್ಯಕರ್ತೆಯರನ್ನು ಕಷ್ಟಕ್ಕೆ ಸಿಲುಕಿಸಿದೆ.

ಕೋಟ್ಯಂತರ ರೂ. ವೆಚ್ಚ:

ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೂರಕ ಪೌಷ್ಟಿಕ ಆಹಾರ ಕಾರ್ಯ ಕ್ರಮದಡಿ ಒಟ್ಟು 3,125.36 ಲ.ರೂ. ವೆಚ್ಚ  ಭರಿಸಲಾಗಿದೆ.

ಮಾತೃಪೂರ್ಣ ಯೋಜನೆ:

Advertisement

ಈ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾಗಿರುವ ಗರ್ಭಿಣಿ/ ಬಾಣಂತಿಯರಿಗೆ ಪ್ರತೀದಿನ ಘಟಕ ವೆಚ್ಚ 21 ರೂ.ನಂತೆ ಹಾಲು, ಮೊಟ್ಟೆಯ ನ್ನೊಳಗೊಂಡಂತೆ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಿಂಗಳಿಗೆ 25 ದಿನಗಳಂತೆ 15 ದಿನಗಳಿಗೊಮ್ಮೆ ಮನೆಗೆ ನೀಡಲಾಗುತ್ತಿದೆ.

ಮಕ್ಕಳಿಗೆ ಸಿಗುವ ಸೌಲಭ್ಯಗಳು :

ಅಂಗನವಾಡಿ ಕೇಂದ್ರಗಳ ಮೂಲಕ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ಪ್ರತೀ ದಿನ 8 ರೂ. ವೆಚ್ಚದಲ್ಲಿ ಒಂದು ತಿಂಗಳಿಗೆ 25 ದಿನಗಳಂತೆ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು 15 ದಿನಗಳಿಗೊಮ್ಮೆ ಮನೆಗೆ ನೀಡಲಾಗುತ್ತಿದೆ. ಇದರ ಜತೆಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ‌ಕ್ಕೆ 15 ಗ್ರಾಂ ಹಾಲಿನ ಪುಡಿಯನ್ನು 10 ಗ್ರಾಂ ಸಕ್ಕರೆಯೊಂದಿಗೆ ನೀಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಯಾಗಿರುವ 3ರಿಂದ 6 ವರ್ಷದ ಮಕ್ಕಳಿಗೆ 2 ದಿನ ಮೊಟ್ಟೆ ನೀಡಲಾಗುತ್ತಿದೆ.

6 ತಿಂಗಳಿಂದ 6 ವರ್ಷದ ತೀವ್ರ ಅಪೌಷ್ಟಿಕ ಮಕ್ಕಳಿಗೆ ಪ್ರತೀ ದಿನ 12 ರೂ. ಘಟಕ ವೆಚ್ಚದಲ್ಲಿ ಒಂದು ತಿಂಗಳಿಗೆ 25 ದಿನಗಳಂತೆ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು 15 ದಿನಗಳಿಗೊಮ್ಮೆ ಮನೆಗೆ ನೀಡಲಾಗುತ್ತಿದೆ. ಇದರ ಜತೆಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ  15 ಗ್ರಾಂ ಹಾಲಿನ ಪುಡಿಯನ್ನು 10 ಗ್ರಾಂ ಸಕ್ಕರೆಯೊಂದಿಗೆ ನೀಡಲಾಗುತ್ತಿದೆ. ತೀವ್ರ ಅಪೌಷ್ಟಿಕತೆ ಸುಧಾರಣೆಗಾಗಿ ತೀವ್ರ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 3 ದಿನ ದಿನವೊಂದಕ್ಕೆ 20 ಗ್ರಾಂ ಹಾಲಿನ ಪುಡಿ ಮತ್ತು 3 ದಿನ ತಲಾ ಒಂದೊಂದು ಮೊಟ್ಟೆಯನ್ನು ಮನೆಗೆ ನೀಡಲಾಗುತ್ತಿದೆ.

ಹೆಚ್ಚುವರಿ ಪಾವತಿಗೆ ಪಂ.ಗಳಿಗೆ ಸೂಚನೆ :

ಸರಕಾರ ನಿಗದಿಪಡಿಸಿರುವ 5 ರೂ. ದರಕ್ಕಿಂತ ಹೆಚ್ಚುವರಿ ದರದಲ್ಲಿ ಖರೀದಿಸುವ ಹೆಚ್ಚುವರಿ ಮೊತ್ತವನ್ನು ಸ್ಥಳೀಯ ಪಂಚಾಯತ್‌ಗಳು ನೀಡಬೇಕೆಂದು ಸರಕಾರ ತಿಳಿಸಿದೆ. ಆದರೆ ಪಂಚಾಯತ್‌ಗಳು ತಮ್ಮಲ್ಲಿ ಅನುದಾನ ಇಲ್ಲವೆ ನ್ನುತ್ತಿವೆ. ಈ ರೀತಿಯ ಸಮನ್ವಯ ಕೊರತೆ ಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೈಯಿಂದಲೇ ಹೆಚ್ಚುವರಿ ಹಣ ಪಾವತಿಸುವಂತಾಗಿದೆ.

ಲಕ್ಷಕ್ಕೂ ಅಧಿಕ ಮೊಟ್ಟೆ  ಅಗತ್ಯ :

ಜಿಲ್ಲೆಯಲ್ಲಿ 1,192 ಅಂಗನವಾಡಿ ಕೇಂದ್ರಗಳಿದ್ದು, ತಿಂಗಳಿಗೆ 7 ಲಕ್ಷಕ್ಕೂ ಅಧಿಕ ಮೊಟ್ಟೆ ಬೇಕಾಗುತ್ತದೆ. ಈ ಬಗ್ಗೆ ಒಬ್ಬರಿಗೆ ಟೆಂಡರ್‌ ನೀಡಿದರೆ ಕಳಪೆ ಮೊಟ್ಟೆ ಸಹಿತ ದಾಸ್ತಾನು ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಆಯಾ ಅಂಗನವಾಡಿ ಕಾರ್ಯಕರ್ತೆಯರೇ ಸ್ಥಳೀಯವಾಗಿ ಖರೀದಿಸಿ ಮೊಟ್ಟೆಯನ್ನು ನೀಡುತ್ತಾರೆ. ಅದರ ಹಣವನ್ನು ಇಲಾಖೆ ಬಾಲವಿಕಾಸ ಸಮಿತಿ ಮೂಲಕ ಪಾವತಿಸುತ್ತದೆ.

ಯೋಜನೆಗಳ  ಫ‌ಲಾನುಭವಿಗಳು :

0-3 ವರ್ಷದ ಮಕ್ಕಳು    30,108

3-6 ವರ್ಷದ ಮಕ್ಕಳು    29,641

ಸಾಮಾನ್ಯ ತೂಕದ ಮಕ್ಕಳು      70,379

ಸಾಧಾರಣ ಅಪೌಷ್ಟಿಕ ಮಕ್ಕಳು 1,064

ತೀವ್ರ ಅಪೌಷ್ಟಿಕ ಮಕ್ಕಳು         87

ಗರ್ಭಿಣಿಯರು  6,072

ಕರಾವಳಿ ಭಾಗದಲ್ಲಿ ಋತುಮಾನಗಳಿಗೆ ಅನುಗುಣವಾಗಿ ಮೊಟ್ಟೆಯ ದರದಲ್ಲಿ ಹೆಚ್ಚಳವಾಗುತ್ತದೆ. ಹಾಗೆಂದು ಫ‌ಲಾನುಭವಿಗಳಿಗೆ ಕಡಿಮೆ ಮೊಟ್ಟೆ ನೀಡುವಂತಿಲ್ಲ. ಪ್ರತೀ ಮೊಟ್ಟೆಗೆ ತಗಲುವ ಹೆಚ್ಚುವರಿ ಮೊತ್ತವನ್ನು ಆಯಾ ಅಂಗನವಾಡಿ ಕಾರ್ಯಕರ್ತೆಯರೇ ಪಾವತಿಸಿ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ಮಾಸಿಕವಾಗಿ 700ರಿಂದ 800 ರೂ.ಗಳಷ್ಟು ಹೊರೆ ಬೀಳುತ್ತಿದೆ. -ಸುಶೀಲಾ ನಾಡ,ಜಿಲ್ಲಾ ಪ್ರಧಾನ ಕಾರ್ಯದರ್ಶಿ,ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)

ಮೊಟ್ಟೆಗೆ ತಗಲುವ ಹೆಚ್ಚುವರಿ ಶುಲ್ಕವನ್ನು ಆಯಾ ಪಂಚಾಯತ್‌ಗಳೇ ನೀಡಬೇಕು ಎಂದು ಜಿ.ಪಂ. ಸಿಇಒ ಅವರು ತಿಳಿಸಿದ್ದಾರೆ. ಮಕ್ಕಳ ಅಭಿವೃದ್ಧಿ ಯೊಜನಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಸುತ್ತೋಲೆ ಹಾಗೂ ಪೂರಕ ನಿರ್ದೇಶನ ನೀಡಲಿದ್ದಾರೆ.-ಶೇಷಪ್ಪ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next