Advertisement

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

09:48 PM Feb 01, 2023 | Team Udayavani |

ಬೆಂಗಳೂರು: ಬೇಡಿಕೆ ಈಡೇರಿಕೆಗಾಗಿ ಕಳೆದ ಹಲವು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಗೆ ಕೊನೆಗೂ ಜಯ ಸಿಕ್ಕಿದ್ದು, ಗ್ರಾಚ್ಯುಟಿ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಬುಧವಾರ ಪ್ರತಿಭಟನೆ ಹಿಂಪಡೆದಿದ್ದಾರೆ.

Advertisement

ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯೆಕ್ಷೆ ಎಸ್‌.ವರಲಕ್ಷ್ಮೀ ಈ ಕುರಿತು ಮಾತನಾಡಿ, ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಫೆ.1ರಂದು ಮುಖ್ಯಮಂತ್ರಿಗಳ ಸಲಹೆಯಂತೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಯಿತು. ಸುಪ್ರಿಂ ಕೋರ್ಟಿನ ತೀರ್ಪಿನಂತೆ ಗ್ರಾಚ್ಯುಟಿ ಕಾಯ್ದೆ 1972ರ ಪ್ರಕಾರ ಉಪಧನ (ಗ್ರಾಚ್ಯುಟಿ) ನೀಡುವ ಕುರಿತು ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಘವು ಕಳೆದ 10 ದಿನಗಳಿಂದ ಹಮ್ಮಿಕೊಂಡಿರುವ ಶಾಂತಿಯುತ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಶಾಲಾಪೂರ್ವ ಶಿಕ್ಷಣಕ್ಕಾಗಿ ಬೆಳಗ್ಗೆ 10 ರಿಂದ 1 ಗಂಟೆಯ ವರೆಗೆ ನಿರ್ದಿಷ್ಟ ಸಮಯ ಮೀಸಲಿರಿಸಿದ ಸ್ಪಷ್ಟ ಆದೇಶ ಲಿಖಿತವಾಗಿ ನೀಡಿದೆ. ಮಿನಿ ಅಂಗನವಾಡಿ ಹಾಗೂ ಸಹಾಯಕಿಯರ ಪದೋನ್ನತಿಯ ಕುರಿತು ಲೋಪದೋಷಗಳಿರುವ ಆದೇಶ ವಾಪಸ್‌ ಪಡೆದು, ಮಾರ್ಪಡಿಸಿದ ತಿದ್ದುಪಡಿ ಆದೇಶವನ್ನು ಲಿಖಿತವಾಗಿ ಪಡೆಯಲಾಗಿದೆ. ಕಟ್ಟಡದ ವೆಚ್ಚ 12 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಗೆ ಒಪ್ಪಿಗೆ, ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಹೆಚ್ಚಿಸಲು ಒಪ್ಪಿಗೆ, ಅಂಗನವಾಡಿಗಳಲ್ಲಿ ಶಾಲಾಪೂರ್ವ ಶಿಕ್ಷಣ ಪಡೆದ ದೃಢೀಕರಣ ಪತ್ರ ನೀಡಲು ಸಮ್ಮತಿಸಿದ್ದಾರೆ. ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತುಕತೆಯ ವೇಳೆಯಲ್ಲಿ ಇನ್ನುಳಿದ ಬೇಡಿಕೆಗಳೊಂದಿಗೆ ರಾಜ್ಯದ ಎಲ್ಲಾ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಪೂರ್ಣ ಆರೋಗ್ಯ ತಪಾಸಣೆ ಇತ್ಯಾದಿ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರಕಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next