ಕುದೂರು: ರೈಲು ಭೋಗಿಯಲ್ಲಿ ಪಾಠ ಹೇಳುವ ಟೀಚರ್, ರೈಲಿನಲ್ಲಿಕುಳಿತು ಪಾಠ ಕೇಳುವ ಪುಟಾಣಿ ಮಕ್ಕಳು, ಆಟದೊಂ ದಿಗೆ ಪಾಠ, ಪಾಠದೊಂದಿಗೆ ಆಟ. ಆದರೆ, ಇದು ರೈಲಲ್ಲ. ಬದಲಿಗೆಕುದೂರಿನ ನಿಶಬ್ದ ನಗರದಲ್ಲಿರುವ ಅಂಗನವಾಡಿ ಕಟ್ಟಡ!.
ಇಲ್ಲಿನ ಅಂಗನವಾಡಿ ಕಟ್ಟಡದ ಕೊಠಡಿಗಳಿಗೆ ರೈಲಿನ ಚಿತ್ರ ಬಿಡಿಸಿದ್ದುಕಣ್ಮನ ಸೆಳೆಯುತ್ತಿದೆ. ರೈಲಿನ ಎಂಜಿನ್, ಬೋಗಿಗಳು,ಕಿಟಕಿ ಹಾಗೂ ಚಕ್ರಗಳು ಎಲ್ಲವೂ ಥೇಟ್ ರೈಲಿನಂತೆಯೇ ಭಾಸವಾಗುತ್ತದೆ. ಮಕ್ಕಳು ಅಂಗನವಾಡಿ ಕಟ್ಟಡದ ಬಾಗಿಲಿನಲ್ಲಿ ನಿಂತು ಇಣುಕಿ ನೋಡಿದರೆ, ರೈಲು ಬೋಗಿಯಿಂದ ಇಣುಕಿದಂತೆಯೇಕಾಣುತ್ತದೆ. ದೂರದಿಂದ ನೋಡಿದರೆ ಇಲ್ಲೊಂದು ರೈಲೇ ಬಂದು ನಿಂತಿರುವ ಮಟ್ಟಿಗೆಕಲಾವಿದರು ತಮ್ಮಕೈಚಳಕ ತೋರಿಸಿದ್ದಾರೆ. ಇದಕ್ಕೆ ಚಿಣ್ಣರ ಎಕ್ಸ್‌ಪ್ರೆಸ್ ಎಂದೂ ಹೆಸರಿಡಲಾಗಿದೆ.
ಕ್ರಿಯಾಶೀಲ ಅಧಿಕಾರಿಯಕಾರ್ಯಕ್ಷಮತೆ: ಈಗಿರುವ ಕಟ್ಟಡ ಅರ್ಧಕ್ಕೆಕಾಮಗಾರಿ ನಿಂತು ಹೋಗಿ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಈ ಕುರಿತು “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿಪಂ ಸಿಇಒ ಇಕ್ರಂ ಅವರ ಶ್ರಮದಿಂದ ಅಪೂರ್ಣಗೊಂಡು ನನೆಗುದಿಗೆ ಬಿದ್ದಿದ್ದ ಅಂಗನವಾಡಿ ಕಟ್ಟಡವನ್ನು ನರೇಗಾ ಯೋಜನೆಯಡಿ ಕೆಲಸ ಪೂರ್ಣಗೊಳಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸುಂದರ ವಿನ್ಯಾಸಗೊಳಿಸಿ ರೂಪಿಸಿದ್ದಾರೆ.
ಇವರ ಕಾರ್ಯ ವೈಖರಿಗೆ ತಾಲೂಕಿನ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಗಡಿ ತಾಲೂಕಿನಲ್ಲಿ ಒಟ್ಟು12 ಮಾದರಿ ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ8 ಕಟ್ಟಡ ಅಪೂರ್ಣಗೊಂಡಿದ್ದವು. ಒಟ್ಟು369 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ ಇಲಾಖೆಗೆ ಸೇರಿದ258 ಅಂಗನವಾಡಿ ಸ್ವಂತಕಟ್ಟಡಗಳಿದ್ದು ಅವುಗಳಿಗೆಲ್ಲಾ ಸ್ಥಳೀಯ ಗ್ರಾಪಂಕಡೆಯಿಂದ ಬಣ್ಣ ಬಳಿಸಲಾಗಿದೆ. ಇನ್ನುಳಿದ ಅಂಗನವಾಡಿ ಕಟ್ಟಡಗಳ ಕಾಮಗಾರಿಯೂ ನಡೆಯುತ್ತಿದೆ. ಮಕ್ಕಳ ಕಲಿಕೆ ಖುಷಿ ಹೆಚ್ಚಿಸುವ ಉಪಾಯ: ಕೊಠಡಿ ಬಾಗಿಲಿಗೆ ಬೋಗಿಗಳ ಬಾಗಿಲಿನ ಬಣ್ಣ ಬಳಿಯಲಾಗಿದೆ.
ಮಕ್ಕಳು ಬಾಗಿಲು ತೆಗೆದು ಕೊಠಡಿಯೊಳಕ್ಕೆ ಹೋದಾಗ ರೈಲಿನ ಒಳಗಡೆ ಹೋದ ಅನುಭವ ಬರುವಂತೆ ಮಾಡಲಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈ ಪ್ರಯತ್ನ ಮಾಡಲಾಗಿದೆ. ಮಕ್ಕಳ ಕಲಿಕೆ ಖುಷಿಯನ್ನು ಹೆಚ್ಚಿಸುವ ಜತೆಗೆ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆಕಂಡು ಕೊಂಡಿರುವ ಉಪಾಯವಿದು. ಇನ್ನು ಕಟ್ಟಡದ ಹಿಂದೆ ತುಂಬಿದಕೆರೆ, ಅದರ ಹಿಂದೆ ಭೈರವನದುರ್ಗದ ಬೆಟ್ಟ, ಎದುರು ಮತ್ತು ಪಕ್ಕದಲ್ಲಿ ದೇವಾಲಯಗಳು ಇಂತಹ ಪರಿಸರದ ನಡುವೆ ರೈಲು ಬೋಗಿ ರೀತಿಯಲ್ಲಿಕಟ್ಟಡಕ್ಕೆ ಬಣ್ಣ ಬಳಿದಿದ್ದು ಉದ್ಘಾಟನೆಗೆ ಮಕ್ಕಳು ಮತ್ತು ಪೋಷಕರು ಎದುರು ನೋಡುತ್ತಿದ್ದಾರೆ.
ಜಿಪಂ ಸಿಇಒ ದೂರ ದೃಷ್ಟಿತನ : ಅಂಗನವಾಡಿ ಕಟ್ಟಡಗಳು ಅತ್ಯಂತ ಆಕರ್ಷಣೀಯವಾಗಿ ರೂಪುಗೊಳ್ಳುವುದಕ್ಕೆ ನಮ್ಮ ಸಿಇಒ ಅವರ ದೂರ ದೃಷ್ಟಿತನ ಪ್ರಮುಖಪಾತ್ರ ವಹಿಸಿವೆ. ಅಂಗನವಾಡಿ ಶಿಕ್ಷಕಿಯರಿಗೆ ಟೊಯೋಟೋದವರ ಸಹಯೋಗದೊಂದಿಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತೇವೆ. ಆಕರ್ಷಕ ಶಾಲಾ ಕಟ್ಟಡದಲ್ಲಿ ಪ್ರತಿಭಾವಂತ ಶಿಕ್ಷಕಿಯರನ್ನು ರೂಪಿಸುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದರಿಂದ ಸರ್ಕಾರಿ ಶಾಲೆಗಳ ಕಡೆಗೆ ಪೋಷಕರನ್ನು ಮತ್ತು ಮಕ್ಕಳನ್ನು ಸೆಳೆಯಲು ಸುಲಭವಾಗುತ್ತದೆ ಎಂದು ಮಾಗಡಿ ಸಿಡಿಪಿಒಸುರೇಂದ್ರ ತಿಳಿಸಿದರು.
ಇದುವರೆಗೂ ಹಲವಾರು ಸರ್ಕಾರಿ ಶಾಲೆಗಳಿಗೆ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದ್ದೇನೆ. ಅಂಗನವಾಡಿ ಕಟ್ಟಡದಲ್ಲಿ ಒಂದು ರೈಲಿನ ಚಿತ್ರ ಬರೆದು ಸುಂದರವಾಗಿ ಕಟ್ಟಡ ರೂಪಿಸಿ ಎಂದು ಇಲಾಖೆ ಎಂಜಿನಿಯರ್ ನನಗೆ ಹೇಳಿದ್ದರು. ತುಂಬಾ ಶ್ರಮವಹಿಸಿ ಚಿತ್ರ ನೈಜವಾಗಿರುವಂತೆ ಚಿತ್ರಿಸಿದ್ದೇನೆ. ● ಶಿವಲಿಂಗಯ್ಯ, ಕಲಾವಿದ ಕುದೂರು
-ಕೆ.ಎಸ್.ಮಂಜುನಾಥ್, ಕುದೂರು