ಎಚ್.ಡಿ.ಕೋಟೆ: ಸರ್ಕಾರಗಳು ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಹಲವು ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸುತ್ತವೆ. ಆದರೆ, ಸರ್ಕಾರದ ಅನುದಾನದಡಿ ನಿರ್ಮಾಣಗೊಂಡ ಲಕ್ಷಾಂತರ ರೂ. ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ಬರೋಬ್ಬರಿ 3 ವರ್ಷಗಳೇ ಕಳೆದಿದ್ದು ಉದ್ಘಾಟನೆ ಭಾಗ್ಯವಿಲ್ಲದಂತಾಗಿದೆ!.
ತಾಲೂಕಿನ ಸೋಗಹಳ್ಳಿ ಸಮೀಪದ ಮಂಚೇ ಗೌಡನಹಳ್ಳಿ ಹಾಡಿಯಲ್ಲಿ 17ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಆದಿವಾಸಿ ಹಾಡಿಯ ಮಕ್ಕಳಿಗಾಗಿ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿತ್ತು. ಕಾಮಗಾರಿ ಪೂರ್ಣಗೊಂಡು 3 ವರ್ಷ ಉರುಳುತ್ತಿದ್ದರೂ ಇನ್ನೂ ಕಾರ್ಯಾರಂಭ ಗೊಂಡಿಲ್ಲ. ಈ ಮೂಲಕ, ಅಧಿಕಾರಿಗಳು ಮತ್ತು ತಾಲೂಕಿನ ಶಾಸಕರು ಕ್ರಮವಹಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಕ್ರಮ ಕೈಗೊಳ್ಳಿ: ನೂತನ ಕಟ್ಟಡ ಇದ್ದೂ ಉಪಯೋ ಗಕ್ಕೆ ಬಾರದೆ ಪಾಳುಬಿದ್ದು ಶಿಥಿಲಾವಸ್ಥೆ ತಲುಪುತ್ತಿದೆ. ಕೂಡಲೇ ಸಂಬಂಧಪಟ್ಟ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾಗಲಿ ಅಥವಾ ತಾಲೂಕಿನ ಶಾಸಕರಾಗಲಿ ಇತ್ತ ಗಮನ ಹರಿಸಿ ಕೂಡಲೇ ಪಾಳು ಬಿದ್ದಿರುವ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಾಡಿಯಲ್ಲಿ ಅಂಗನವಾಡಿ ಕಾರ್ಯನಿರ್ವಹಿಸಲು ಸ್ವಂತ ಕಟ್ಟಡ ಇಲ್ಲದೆ ಸದ್ಯದ ಸ್ಥಿತಿಯಲ್ಲಿ ಹಾಡಿ ಅಂಗನ ವಾಡಿ ಕೇಂದ್ರ ಸಮುದಾಯ ಭವನವೊಂದರಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದೆ. ತೀರ ಶಿಥಿಲಗೊಂಡಿದ್ದ ಹಾಲಿ ತಾತ್ಕಾಲಿಕ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಚಾವಣಿಗೆ ಸುರಕ್ಷತಾ ದೃಷ್ಟಿಯಿಂದ ಇತ್ತೀಚೆಗಷ್ಟೇ ಶೀಟ್ ಹೊದಿಸಲಾಗಿದೆ.
ತೊಟ್ಟಿಯಿಂದ ಅಪಾಯ: ನೂತನ ಅಂಗನವಾಡಿ ಕಟ್ಟಡದ ಮುಖ್ಯ ಪ್ರವೇಶ ದ್ವಾರದ ಕೆಲವೇ ಅಡಿಗಳ ಅಂತರದಲ್ಲಿ ಸರ್ಕಾರದ ವತಿಯಿಂದ ದನಗಳು ಕುಡಿ ಯುವ ನೀರಿನ ತೊಟ್ಟಿಯೊಂದನ್ನು ಗ್ರಾಪಂನಿಂದ ನಿರ್ಮಿಸಲಾಗಿದೆ. ಅಂಗನವಾಡಿ ಕೇಂದ್ರಕ್ಕೆ ಆಗಮಿಸ ಬೇಕಾದ ಪುಟಾಣಿಗಳು ನೀರಿನ ತೊಟ್ಟಿ ಮಾರ್ಗ ವಾಗಿಯೇ ಹಾದು ಬರಬೇಕಿದೆ. ಕೊಂಚ ಯಾಮಾರಿ ದರೂ ನೀರಿನ ತೊಟ್ಟಿಯಲ್ಲಿ ಬೀಳುವ ಸಾಧ್ಯತೆ.ಇದೆ. ಕೂಡಲೇ ಸಂಬಂಧಪಟ್ಟ ಗ್ರಾಪಂ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇತ್ತ ಗಮನ ಹರಿಸಿ ತೊಟ್ಟಿ ತೆರವಿಗೆ ಮುಂದಾಗಬೇಕಿದೆ.
ಜಿಪಂ ಸಿಇಒ ಅನುಮತಿ ಬೇಕು : ಸರ್ಕಾರದ ಅನುದಾನದಿಂದ ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಸಾರ್ವಜನಿಕ ಉಪಯೋಗದ ದೃಷ್ಟಿಯಿಂದ ನಿರ್ಮಿಸಿರುವ ನೀರಿನ ತೊಟ್ಟಿ ತೆರವಿಗೆ ಜಿಪಂ ಸಿಇಒ ಅವರ ಅನುಮತಿ ಬೇಕು. ಅನುಮತಿ ದೊರೆಯುತ್ತಿದ್ದಂತೆ ತೊಟ್ಟಿಯನ್ನು ತೆರವುಗೊಳಿಸುತ್ತೇವೆ ಎಂದು ತಾಪಂ ಇಒ ಜೆರಾಲ್ಡ್ ರಾಜೇಶ್ “ಉದಯವಾಣಿ’ಗೆ ಮಾಹಿತಿ ನೀಡಿದರು.
ಪಾಳು ಬಿದ್ದ ಕಟ್ಟಡ : 17ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಸುಸಜ್ಜಿತವಾಗಿ ಸ್ವಂತ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಉರುಳುತ್ತಿವೆ. ನೂತನ ಕಟ್ಟಡವನ್ನು ಉದ್ಘಾಟಿಸದೇ ಉಪಯೋಗಿಸದೇ ಪಾಳುಬಿದ್ದಿದೆ. ಕಟ್ಟಡ ಶಿಥಿಲಾವಸ್ಥೆ ತಲುಪುತ್ತಿದ್ದರೂ ಸಂಬಂಧಪಟ್ಟ ಸಿಡಿಪಿಒ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೂತನ ಸ್ವಂತ ಅಂಗನವಾಡಿ ಕಟ್ಟಡ ಉದ್ಘಾಟಿಸದೇ ಇರುವುದು ಎಷ್ಟು ಸರಿ. ನೂತನ ಅಂಗನವಾಡಿಗೆ ಕಳಂಕ ಪ್ರಾಯವಾಗಿರುವ ದನ, ಕುಡಿಯುವ ನೀರಿನ ತೊಟ್ಟಿ ಸ್ಥಳಾಂತರಕ್ಕೆ ಸಿಡಿಪಿಒ ಅಗತ್ಯ ಕ್ರಮವಹಿಸಬೇಕಿದೆ. ಅದೇ ರೀತಿ ತಾಪಂ ಇಒ ಮತ್ತು ಗ್ರಾಪಂ ಪಿಡಿಒ ಕೂಡ ಇತ್ತ ಗಮನ ಹರಿಸಿ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಮುಂದಾಗಬೇಕಿದೆ. ಅಂಗನವಾಡಿ ಕಟ್ಟಡದ ಎದುರಿನಲ್ಲಿರುವ ನೀರಿನ ತೊಟ್ಟಿಯಿಂದ ಮಕ್ಕಳಿಗೆ ಆಗುತ್ತಿರುವ ತೊಂದರೆ ಕುರಿತು ತಾಪಂ ಇಒಗೆ ಮನವಿ ನೀಡಲಾಗಿದೆ. ಅವರಿಂದ ನೀರಿನ ತೊಟ್ಟಿ ತೆರವಾಗುತ್ತಿದ್ದಂತೆಯೇ ಅಂಗನವಾಡಿ ಕಟ್ಟಡ ಉದ್ಘಾಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. –
ಆಶಾ, ಸಿಡಿಪಿಒ
–ಎಚ್.ಬಿ.ಬಸವರಾಜು