ಬೈಲಹೊಂಗಲ: ಡಾ.ವಿಶ್ವನಾಥ ಪಾಟೀಲರು ಸೋಲಾಕ ನೀವೇ ಕಾರಣ. ನಿಮ್ಮ ಸ್ವಾರ್ಥ ಇಟ್ಟುಕೊಂಡು ಈಗ ಬಂದಿದ್ದೀರಿ. ಮುಂದಿನ ವಿಧಾನಸಭಾ ಟಿಕೆಟ್ ನಮ್ಮ ಪಾಟೀಲರಿಗೆ ಸಿಗುವಂತೆ ನೋಡಿಕೊಳ್ಳೋ ಜವಾಬ್ದಾರಿ ನಿಮ್ಮದು ಎಂದು ಬಿಜೆಪಿ ಕಾರ್ಯಕರ್ತರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಸುರೇಶ ಅಂಗಡಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಆರ್‌ಎಸ್‌ಎಸ್ ಬೈಠಕ್ ಸಭೆಯಲ್ಲಿ ನಡೆಯಿತು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿಯೂ ಬೈಲಹೊಂಗಲ ಮತಕ್ಷೇತ್ರದಲ್ಲಿ ಬಿಜೆಪಿ ಸೋಲು ಅನುಭವಿಸಬೇಕಾಯಿತು ಎಂದು ಕಾರ್ಯಕರ್ತರು ಹರಿಹಾಯ್ದರು. ಬೈಲಹೊಂಗಲ ಸ್ಥಾನವನ್ನು ನಾವು ಕಳೆದುಕೊಳ್ಳಬಾರದಿತ್ತು. ನಮ್ಮ ಜಗಳದಾಗ ಮೂರನೇ ವ್ಯಕ್ತಿಗೆ ಲಾಭವಾಯಿತು ಎಂದ ಅಂಗಡಿ ಮಾತಿಗೆ ಕಾರ್ಯಕರ್ತರು ಈ ರೀತಿ ತಿರುಗೇಟು ನೀಡಿದರು.
ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಈ ಮೊದಲೇ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹಾಗೂ ಮಾಜಿ ಶಾಸಕ
ಡಾ.ವಿಶ್ವನಾಥ ಪಾಟೀಲ ಅವರ ನಡುವೆ ಸಂಧಾನ ಮಾಡಿಸಬೇಕಿತ್ತು. ಈಗ ಲೋಕಸಭೆ ಚುನಾವಣೆ ಬಂದಾಗ ನಿಮ್ಮ ಲಾಭಕ್ಕಾಗಿ ಇಬ್ಬರ ನಡುವೆ ಹೊಂದಾಣಿಕೆ ಮಾಡಿಸಿದ್ದೀರಿ. ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ
ಜಗದೀಶ ಮೆಟಗುಡ್ಡ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಂಡಿರಿ. ಇದು ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮಾಡಿದ ದ್ರೋಹ. ಇನ್ನೂ ಮುಂದಾದರೂ ಇಬ್ಬರು ನಾಯಕರನ್ನು ಗಣನೆಗೆ ತೆಗೆದುಕೊಂಡು ಚುನಾವಣಾ ಕಾರ್ಯನಿರ್ವಹಿಸಿ. ನಮಗೆ ದೇಶ, ಪಕ್ಷ ಮುಖ್ಯ. ಇಬ್ಬರು ಮುಖಂಡರಲ್ಲಿರುವ ಭಿನ್ನಾಭಿಪ್ರಾಯ ಶೀಘ್ರ ಶಮನಗೊಳಿಸಿ ಬಿಜೆಪಿಯ ಪ್ರತಿ ಕಾರ್ಯದಲ್ಲಿ ಇಬ್ಬರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿರಿ. ಆದಷ್ಟು ಬೇಗೆ ಇಬ್ಬರನ್ನು ಒಂದೇ ವೇದಿಕೆಯಲ್ಲಿ ಕರೆತನ್ನಿ ಎಂದು ಒತ್ತಾಯಿಸಿದರು.
ಕಾರ್ಯಕರ್ತರ ಒತ್ತಡಕ್ಕೆ ಮಣಿದ ಸುರೇಶ ಅಂಗಡಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಾತುಕತೆಯಾಗಿ ಇಬ್ಬರು ಒಂದಾದರೆ ಒಬ್ಬರನ್ನು ಎಂಎಲ್‌ಎ, ಇನ್ನೊಬ್ಬರನ್ನು ಎಂಎಲ್‌ಸಿ ಮಾಡುತ್ತೇವೆ ಅಂತಾ ಮಾತುಕತೆಯಾಗಿತ್ತು. ಇಬ್ಬರೂ ಒಪ್ಪಲಿಲ್ಲ. ಈಗ ಗಂಡಾ ಹೆಂಡತಿ ಜಗಳದಾಗ ಕೂಸ ಬಡವಾಯ್ತು ಅಂತಾರಲ್ಲ ಹಂಗಾಗಿದೆ ನನ್ನ ಪರಿಸ್ಥಿತಿ. ಇದಕ್ಕೆ ನನ್ನ ಮೇಲೆ ಆರೋಪ ಹೊರಿಸಬೇಡಿ ಎಂದು ಸ್ಪಷ್ಟ ಪಡಿಸಿದರು.
ಇನ್ನೂ ಕೇವಲ ನಾಕು ಸ್ಥಾನ ಬಂದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿತ್ತು. ಲಕ್ಷ್ಮಣ ಸವದಿ, ಸಂಜಯ ಪಾಟೀಲ, ವಿಶ್ವನಾಥ ಪಾಟೀಲ ಆರಿಸಿ ಬರುವವರ ಪಟ್ಟಿಯಲ್ಲಿದ್ದರು. ರಾಜು ಕಾಗೆ ಒಬ್ಬರದೇ ಸಂಶಯವಿತ್ತು. ಎಲ್ಲರೂ ಒಂದಾಗಿರಿ ಎಂದು ಸುರೇಶ ಅಂಗಡಿ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಡಾ| ವಿಶ್ವನಾಥ ಪಾಟೀಲ ಮಾತನಾಡಿ, ದೇಶದ ಸುಭದ್ರತೆಗೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಿದೆ.
ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು. ಚೌಕಿದಾರರಾಗಿ ಕೆಲಸ ಮಾಡಬೇಕು. ಇಬ್ಬರು ಮುಖಂಡರು ಸೇರಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು. ವಿದ್ಯಾಭಾರತಿ, ಅಶೋಕ ಶಿಂತ್ರಿ, ಯಲ್ಲಪ್ಪ ದೇವರಹುಬ್ಬಳ್ಳಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಕಾರ್ಯಕರ್ತರು ಉಪಸ್ಥಿತರಿದ್ದರು.
ಬೈಲಹೊಂಗಲಕ್ಕೆ ಇಂದು ಬಿಎಸ್‌ವೈ
ಬೈಲಹೊಂಗಲ ಪಟ್ಟಣದ ಎಂಸ್ಸೆಸ್ಸೆಆರ್ ಪ್ರೌಢಶಾಲೆ ಆವರಣದಲ್ಲಿ ಏ.13ರಂದು ಬೆಳಗ್ಗೆ 11ಕ್ಕೆ ಬೆಳಗಾವಿ ಲೋಕಸಭಾ ಚುನಾವಣೆ ಪ್ರಚಾರಾರ್ಥ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆ. ರಾಜ್ಯ, ಜಿಲ್ಲೆ, ತಾಲೂಕಿನ ಎಲ್ಲ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ