ಸುಬ್ರಹ್ಮಣ್ಯ: ಮಡಪ್ಪಾಡಿಯ ಕಿಲಾರ್‌ಮಲೆ ಮೀಸಲು ಅರಣ್ಯದೊಳಕ್ಕೆ ನಕ್ಸಲ್ ಶೋಧ ಕಾರ್ಯಾಚರಣೆಗೆ ತೆರಳಿದ್ದ ಎಎನ್‌ಎಫ್ ತಂಡದ ಯೋಧ ಭದ್ರಾವತಿ ಮೂಲದ ರಂಗಸ್ವಾಮಿ (40) ಕೋಟೆಗುಡ್ಡೆ ಕಾಡಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಜಯರಾಮ ಎಚ್.ಬಿ. ಅವರ ತೋಟದ ಮನೆ ಶೆಡ್‌ಗೆ ಗುರುವಾರ ರಾತ್ರಿ ಮೂವರು ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ವರದಿ ಹಿನ್ನೆಲೆಯುಲ್ಲಿ ಈ ಭಾಗದಲ್ಲಿ ಎಎನ್‌ಎಫ್ ಮತ್ತು ಎಎನ್‌ಎಸ್ ಪಡೆಯ 70 ಯೋಧರ ನಾಲ್ಕು ತಂಡ ಶೋಧ ಕಾರ್ಯಾಚರಣೆಗೆ ಇಳಿದಿತ್ತು.
ಕಾರ್ಕಳ ಮತ್ತು ಭಾಗಮಂಡಲ ಎಎನ್‌ಎಫ್ನ ಮೂರು ತಂಡ ಮತ್ತು ಎಎನ್‌ಎಸ್‌ನ ಒಂದು ತಂಡ ಕಾರ್ಯಾಚರಣೆ
ಯಲ್ಲಿ ತೊಡಗಿತ್ತು. ತಂಡ ಕಿಲಾರ್‌ಮಲೆ ಮೀಸಲು ಅರಣ್ಯದ ಒಂದು ಬದಿಯಾದ ಕೋಟೆಗುಡ್ಡೆ ಕಾಡಿಗೆ ಶನಿವಾರ ಬೆಳಗ್ಗೆ ತೆರಳಿ ಕಾರ್ಯಾಚರಣೆ ಆರಂಭಿಸಿತ್ತು. ಕಾಡು ಒಳಪ್ರವೇಶಿಸಿದ ತಂಡದಲ್ಲಿ ಇದ್ದ ಭದ್ರಾವತಿ ಮೂಲದ ರಂಗಸ್ವಾಮಿ ಕರ್ತವ್ಯ ದಲ್ಲಿ ಇರುವಾಗಲೇ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಕುಸಿದು ಬಿದ್ದರು.
ಕುಸಿದು ಬಿದ್ದ ರಂಗಸ್ವಾಮಿಗೆ ಜತೆಗಿದ್ದ ಯೋಧರು ಪ್ರಥಮ ಚಿಕಿತ್ಸೆ ಒದಗಿಸಿದರೂ ಫಲಕಾರಿಯಾಗಿಲ್ಲ. ಬಳಿಕ ನಕ್ಸಲ್ ನಿಗ್ರಹ ದಳದ ಕಮಾಡೆಂಟ್‌ಗೆ ತಿಳಿಸಿ, ರಂಗಸ್ವಾಮಿ ಅವರ ಪಾರ್ಥಿವವನ್ನು ಕೋಟೆಗುಡ್ಡೆಯಿಂದ ಸಮೀಪದ ಪುಟ್ಟಣ್ಣ ಗೌಡ ಅವರ ಮನೆ ತನಕ ಸುಮಾರು 2 ಕಿ. ಮೀ. ದೂರ ಯೋಧರು ಹೊತ್ತು ತಂದಿದ್ದು, ಅಲ್ಲಿಂದ ಪಿಕ್‌ಅಪ್ ವಾಹನದಲ್ಲಿ ಮಡಪ್ಪಾಡಿಗೆ ತಂದು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಎಎನ್‌ಎಫ್ ಪಡೆಯ ಎಸ್‌ಪಿ ಲಕ್ಷ್ಮೀ ಪ್ರಸಾದ್, ದಕ್ಷಿಣ ಕನ್ನಡ ಎಸ್‌ಪಿ ರವಿಕಾಂತೇಗೌಡ ಸಹಿತ ಉನ್ನತ ಅಧಿ ಕಾರಿಗಳು ಆಗಮಿಸಿದರು.
ಕಿಲಾರ್‌ಮಲೆ ದಟ್ಟ ಮೀಸಲು ಅರಣ್ಯವಾಗಿದ್ದು, 4,932 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ ತಂಡ ಶೋಧ ನಡೆಸುತ್ತ ಆರು ಮೈಲು ಕಾಡಿನೊಳಕ್ಕೆ ತಂಡ ತೆರಳಿತ್ತು. ಎಎನ್‌ಎಫ್ ತಂಡದಲ್ಲಿ ಈಗ ಶೋಕ ಮಡುಗಟ್ಟಿದೆ. ಪತ್ನಿ, ಪುತ್ರಿಯ ಅಗಲಿದ ರಂಗಸ್ವಾಮಿ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಅನ್ನು 1997ರಲ್ಲಿ ಸೇರಿದ್ದ ರಂಗಸ್ವಾಮಿ ಅವರು ಹೆಡ್‌ಕಾನ್‌ಸ್ಟೆಬಲ್ ಹುದ್ದೆಯಲ್ಲಿದ್ದರು. ಅವರು ಪತ್ನಿ ಭಾರತಿ ಮತ್ತು ಪುತ್ರಿ ಕುಸುಮಾ ಅವರನ್ನು ಅಗಲಿದ್ದಾರೆ.
ಭದ್ರಾವತಿ ನ್ಯೂಟೌನ್‌ನ ಗಣೇಶ ಕಾಲನಿಯ ನಿವಾಸಿಯಾಗಿದ್ದ ರಂಗಸ್ವಾಮಿ ಅವರು ನಕ್ಸಲ್ ನಿಗ್ರಹ ತಂಡದಲ್ಲಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಅಯ್ಯಕಣ್ಣ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ1971ರಲ್ಲಿ ಜನಿಸಿ ದ್ದ ರಂಗಸ್ವಾಮಿ 1997ರ ಮಾ. 15ರಂದು ಸೇವೆಗೆ ಸೇರಿದ್ದರು.
ಎಎನ್‌ಎಫ್ ತಂಡದ ರಂಗಸ್ವಾಮಿ ಅವರು ಕೂಂಬಿಂಗ್ ಕಾರ್ಯಾಚರಣೆಯಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ದುಃಖ ತಂದಿದೆ.
ರವಿಕಾಂತೇಗೌಡ ದ.ಕ. ಜಿಲ್ಲಾ ಎಸ್‌ಪಿ