ಚಿತ್ರದುರ್ಗ: ಜಂತುಹುಳು ಭಾದೆಯಿಂದ ರಕ್ತಹೀನತೆ, ಅಪೌಷ್ಟಿಕತೆ ಉಂಟಾಗಿ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗಿ ರಕ್ತಹೀನತೆ ಕಡಿಮೆ ಮಾಡಲು ಆಲ್ ಬೆಂಡಜೋಲ್ ಮಾತ್ರೆ ವಿತರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ| ಕೆ.ನಂದಿನಿದೇವಿ ಹೇಳಿದರು.
ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ (ಎನ್‌ಡಿಡಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಯಾವುದೇ ರೀತಿಯ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಣೆ ಮಾತ್ರೆ ನೀಡಲಾಗುತ್ತಿದೆ.
ಮಕ್ಕಳು ಆರೋಗ್ಯವಂತಾಗಿರಲು ಈ ಮಾತ್ರೆ ಪಡೆಯಬೇಕು ಎಂದರು. ಡಿಎಚ್‌ಒ ಡಾ| ಸಿ.ಎಲ್. ಪಾಲಾಕ್ಷ ಮಾತನಾಡಿ, ಕಳೆದ 8 ವರ್ಷದಿಂದ ಆಲ್ ಬೆಂಡಜೋಲ್ ಮಾತ್ರೆಯನ್ನು ಮಕ್ಕಳಿಗೆ ವರ್ಷದಲ್ಲಿ 2 ಬಾರಿ ನೀಡಲಾಗುತ್ತದೆ.
ಏ. 16 ರಿಂದ 30 ರವರೆಗೆ ಪ್ರತಿ ದಿನ ಪ್ರತಿ ಮನೆ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಜಂತುಹುಳು ಮಾತ್ರೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ 1 ರಿಂದ 19 ವರ್ಷದ 427866 ಮಕ್ಕಳಿದ್ದಾರೆ. 1 ರಿಂದ 2 ವರ್ಷದ ಮಕ್ಕಳಿಗೆ ಅಲ್‌ಬೆಂಡಜೋಲ್ ಅರ್ಧ ಮಾತ್ರೆ ನೀಡಲಾಗುತ್ತದೆ. 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆ ನೀಡಲಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾತ್ರೆ ವಿತರಿಸುವ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶ ಮಾಡದೇ ಮನೆಯಿಂದ ಹೊರಗೆ ಕರೆದು ಮಾತ್ರೆ ವಿತರಿಸಬೇಕು. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರದಿಂದ ಮಾತ್ರೆ ವಿತರಿಸಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸಲಹೆ ನೀಡಿದರು. ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿ ಕಾರಿ ಡಾ. ಕುಮಾರಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿ ಕಾರಿ ಡಾ. ರೇಣುಪ್ರಸಾದ್, ಬುದ್ಧ ನಗರ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರ ಪ್ರಭಾರೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ತಾಲೂಕು ಆರೋಗ್ಯ ಶಿಕ್ಷಣಾ ಧಿಕಾರಿ ಎನ್.ಎಸ್. ಮಂಜುನಾಥ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಹನುಮಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾ ಧಿಕಾರಿ ಬಿ. ಜಾನಕಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.