Advertisement

ಪೌಷ್ಟಿಕಾಂಶ ಕೊರತೆಯಿಂದ ಉಂಟಾಗುವ ರಕ್ತಹೀನತೆ

05:21 PM Feb 05, 2022 | Team Udayavani |

ಭಾರತವು 2008ರಿಂದ ಈಚೆಗೆ ಪ್ರತೀ ವರ್ಷ ಜನವರಿ ತಿಂಗಳ 24ನ್ನು ಹೆಣ್ಣುಮಗುವಿನ ದಿನವನ್ನಾಗಿ ಆಚರಿಸುತ್ತಿದೆ. ಹೆಣ್ಣುಮಗುವಿನ ಸ್ಥಿತಿಗತಿಯನ್ನು ಉತ್ತಮಪಡಿಸುವುದು, ಲಿಂಗ ಅಸಮಾನತೆಯನ್ನು ತೊಡೆದುಹಾಕುವುದು ಮತ್ತು ಹೆಣ್ಣು ಮಕ್ಕಳು, ಹೆಣ್ಣು ಶಿಶುಗಳ ಬಗ್ಗೆ ಸಮಾಜ/ ಹಿಂದುಳಿದ ಸಮುದಾಯಗಳಲ್ಲಿ ಇರುವ ತಾರತಮ್ಯ ದೃಷ್ಟಿಯನ್ನು ದೂರಮಾಡುವತ್ತ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ಹುಡುಗಿಯರ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ಅರಿವು ಉಂಟು ಮಾಡುವುದು, ಲಿಂಗ ತಾರತಮ್ಯಗಳನ್ನು ನಿರ್ಮೂಲಗೊಳಿಸಿ ಅವರ ಸಮಗ್ರ ಕಲ್ಯಾಣಕ್ಕೆ ಬೆಂಬಲವಾಗುವುದು ಹಾಗೂ ಹೆಣ್ಣುಮಕ್ಕಳು ನಮ್ಮ ಸಮಾಜದ ಗೌರವಪೂರ್ಣ ಮತ್ತು ಮೌಲ್ಯಯುತ ಅಂಗವಾಗುವಂತೆ ಅವರ ಜನನ, ಬೆಳವಣಿಗೆ ಮತ್ತು ಅರಳುವಿಕೆಗೆ ತಕ್ಕ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಈ ದಿನಾಚರಣೆಯ ಉದ್ದೇಶ.

Advertisement

ನಮ್ಮ ದೇಶದಲ್ಲಿ ಹದಿಹರಯದ ಯುವತಿಯರು ಮತ್ತು ಮಹಿಳೆಯರಲ್ಲಿ ಅತೀ ಸಾಮಾನ್ಯವಾಗಿರುವ ಆರೋಗ್ಯ ಸಮಸ್ಯೆ ಎಂದರೆ ರಕ್ತಹೀನತೆ. ಭಾರತದಲ್ಲಿ, ಹದಿಹರಯದ ಯುವತಿಯರ ಪೈಕಿ ಶೇ. 56 ಮಂದಿ ರಕ್ತಹೀನತೆಯಿಂದ ಇದ್ದಾರೆ (ಅಂದಾಜು 64 ದಶಲಕ್ಷ ಮಂದಿ), ಕರ್ನಾಟಕದಲ್ಲಿ ಇದು ಶೇ. 41.1ರಷ್ಟಿದೆ.

ಹಿಮೋಗ್ಲೋಬಿನ್‌ ಎಂದರೇನು?
ಇದು ಕೆಂಪು ರಕ್ತಕಣಗಳಲ್ಲಿ ಇರುವ ಕಬ್ಬಿಣಾಂಶ ಸಹಿತ ಪ್ರೊಟೀನ್‌ ಆಗಿದ್ದು, ಶ್ವಾಸಕೋಶದಿಂದ ಆಮ್ಲಜನಕವನ್ನು ದೇಹದ ಎಲ್ಲ ಅಂಗಾಂಶಗಳಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತದೆ.

ಹಿಮೋಗ್ಲೋಬಿನ್‌ನ ಕೆಲಸ
ಕಾರ್ಯಗಳೇನು?
ಮನುಷ್ಯ ದೇಹದಲ್ಲಿರುವ ಸರಬರಾಜುದಾರ ಪ್ರೊಟೀನ್‌ಗಳಲ್ಲಿ ಮುಖ್ಯವಾದುದು ಹಿಮೋಗ್ಲೋಬಿನ್‌. ಇದು ಈ ಕೆಳಗಿನವುಗಳನ್ನು ಸರಬರಾಜು ಮಾಡುತ್ತದೆ:
– ಶ್ವಾಸಕೋಶದಿಂದ ಎಲ್ಲ ಅಂಗಾಂಶಗಳಿಗೆ ಆಮ್ಲಜನಕ
– ಅಂಗಾಂಶಗಳಿಂದ ಇಂಗಾಲದ ಡೈಆಕ್ಸೆ„ಡನ್ನು ಶ್ವಾಸಕೋಶಗಳಿಗೆ
– ಹಿಮೋಗ್ಲೋಬಿನ್‌ ಬಫ‌ರ್‌ ಆಗಿಯೂ ಕೆಲಸ ಮಾಡುತ್ತದೆ

ಯುವ ಬಾಲಕಿಯರಲ್ಲಿ
ಹಿಮೋಗ್ಲೋಬಿನ್‌ನ ಪ್ರಮಾಣ
ಎಷ್ಟಿರಬೇಕು?
ಋತುಚಕ್ರ ಆರಂಭವಾದ ಬಾಲಕಿಯರಲ್ಲಿ ಸಹಜ ಎಚ್‌ಬಿ ಪ್ರಮಾಣ ಪ್ರತೀ ಲೀಟರ್‌ ರಕ್ತಕ್ಕೆ 12.0ಗ್ರಾಮ್‌ಗಳಿಂದ 16.0 ಗ್ರಾಂಗಳಷ್ಟಿರಬೇಕು.

Advertisement

ರಕ್ತಹೀನತೆ ಅಂದರೇನು?
ಕೆಂಪು ರಕ್ತಕಣಗಳು ಅಥವಾ ಅವುಗಳಲ್ಲಿ ಹಿಮೋಗ್ಲೋಬಿನ್‌ ಸಾಂದ್ರತೆಯು ಸಹಜಕ್ಕಿಂತ ಕಡಿಮೆಯಾಗುವ ಅನಾರೋಗ್ಯ ಸ್ಥಿತಿಯೇ ರಕ್ತಹೀನತೆ. ಇಂಗ್ಲಿಷ್‌ನಲ್ಲಿ ಇದನ್ನು ಅನೀಮಿಯಾ ಎನ್ನುತ್ತಾರೆ.

ಅನೀಮಿಯಾ ಗುರುತಿಸುವುದು ಹೇಗೆ?
– ಸರಳವಾದ ಹಿಮೊಗ್ಲೋಬಿನ್‌ ಪರೀಕ್ಷೆ ಮತ್ತು ಪೆರಿಫ‌ರಲ್‌ ಬ್ಲಿಡ್‌ ಸೆ¾ಯರ್‌ನಿಂದ ರಕ್ತಹೀನತೆಯನ್ನು ಗುರುತಿಸಬಹುದು.
– ಕಬ್ಬಿಣಾಂಶದ ಪ್ರೊಫೈಲ್‌ (ಸೀರಂ ಅಯರ್ನ್, ಟಾನ್ಸ್‌ಫೆರಿನ್‌ ಮತ್ತು ಟಿಐಬಿಸಿ) ಗಳಿಂದ ಕಬ್ಬಿಣಾಂಶ ಸ್ಥಿತಿಗತಿಯನ್ನು ಗುರುತಿಸಬಹುದು.
– ರಕ್ತಹೀನತೆಯ ಕಾರಣವನ್ನು ಪತ್ತೆ ಮಾಡಲು ಸೀರಂ ಫೋಲಿಕ್‌ ಆ್ಯಸಿಡ್‌ ಮತ್ತು ವಿಟಮಿನ್‌ ಬಿ 12 ಪ್ರಮಾಣವನ್ನೂ ಪರೀಕ್ಷಿಸಲಾಗುತ್ತದೆ.

ಹದಿಹರಯದ ಬಾಲಕಿಯರಲ್ಲಿ ರಕ್ತಹೀನತೆ ಉಂಟಾಗಲು
ಪ್ರಧಾನ ಕಾರಣಗಳು/ ಅಪಾಯಾಂಶಗಳು ಯಾವುವು?
– ಕಳಪೆ ಮತ್ತು ಅಸಮತೋಲಿತ ಆಹಾರ
– ಕಬ್ಬಿಣಾಂಶ ಮತ್ತು ವಿಟಮಿನ್‌ ಸಮೃದ್ಧ ಆಹಾರದ ಕೊರತೆ
– ಸಾಮಾಜಿಕ-ಆರ್ಥಿಕವಾಗಿ, ವಿದ್ಯೆಯಲ್ಲಿ ಹಿಂದುಳಿದಿರುವುದು.
– ಋತುಚಕ್ರದ ಅವಧಿಯಲ್ಲಿ ಅತಿಯಾದ ರಕ್ತಸ್ರಾವ/ ಋತುಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆಗಳು
– ಹೊಟ್ಟೆಹುಳುಗಳು ಹೆಚ್ಚುವುದು
(ಗಮನಿಸಿ: ಕೆಲವೊಮ್ಮೆ ರಕ್ತಹೀನತೆಯು ಕೆಲವು ಅಪರೂಪದ ಕಾರಣಗಳಿಂದಲೂ ಉಂಟಾಗಬಹುದಾಗಿದ್ದು, ಇದರ ಬಗ್ಗೆ ವೈದ್ಯರು ವಿವರವಾಗಿ ತಪಾಸಣೆ ನಡೆಸುವುದು ಅಗತ್ಯವಾಗಿರುತ್ತದೆ. ಪೌಷ್ಟಿಕಾಂಶ ಸಂಬಂಧಿ ಕಾರಣಗಳು ಬಹುತೇಕ ರಕ್ತಹೀನತೆ ಪ್ರಕರಣಗಳಿಗೆ ಕಾರಣವಾಗಿರುತ್ತವೆ, ಆದರೆ ಎಲ್ಲವಕ್ಕೂ ಅಲ್ಲ)

ದೀರ್ಘ‌ಕಾಲಿಕ ರಕ್ತಹೀನತೆಯಿಂದ ದುಷ್ಪರಿಣಾಮಗಳೇನು?
– ಬೆಳವಣಿಗೆ ಮತ್ತು ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ
– ಸ್ಮರಣಶಕ್ತಿ, ಏಕಾಗ್ರತೆಯನ್ನು ಬಾಧಿಸುತ್ತದೆ
– ದಣಿವು, ಕಂಗಾಲುತನ, ಕಳೆಗೆಡುವುದು, ಆಸಕ್ತಿಯ ಕೊರತೆ, ಆಲಸ್ಯ, ನಿಶ್ಶಕ್ತಿ, ತಲೆತಿರುಗುವಿಕೆ ಉಂಟುಮಾಡುತ್ತದೆ
– ವಯಸ್ಸಿಗೆ ಬರುವುದು ನಿಧಾನವಾಗುತ್ತದೆ
– ಋತುಚಕ್ರವನ್ನು ಬಾಧಿಸುತ್ತದೆ (ಹೆಚ್ಚು ರಕ್ತಸ್ರಾವ, ಅನಿಯಮಿತ ಋತುಚಕ್ರ, ತೀವ್ರತರಹದ ರಕ್ತಹೀನತೆಯಿಂದ ಋತುಚಕ್ರ ನಿಲ್ಲಬಹುದು)
– ರೋಗ ನಿರೋಧಕ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ವೃದ್ಧಿಸುತ್ತದೆ
– ಗರ್ಭ ಧಾರಣೆಯ ಸಂದರ್ಭದಲ್ಲಿ ರಕ್ತಹೀನತೆಯು ಸಮಸ್ಯೆಗಳಿಗೆ ಕಾರಣವಾಗಬಹುದು, ಅದರಿಂದ ಗರ್ಭಪಾತ, ಅವಧಿಪೂರ್ವ ಶಿಶು ಜನಿಸುವ ಅಪಾಯ ಹೆಚ್ಚುತ್ತದೆ.

ಪೌಷ್ಟಿಕಾಂಶ ಸಂಬಂಧಿ ರಕ್ತಹೀನತೆ: ಪ್ರಮುಖ ವಿಧಗಳು ಯಾವುವು?
ರಕ್ತಹೀನತೆಯ ಪ್ರಮುಖ ಸ್ವರೂಪ ಅಪೌಷ್ಟಿಕತೆಗೆ ಸಂಬಂಧಿಸಿದ್ದು. ಪೌಷ್ಟಿಕಾಂಶ ಕೊರತೆಯಿಂದ ಉಂಟಾಗುವ  ಮೂರು ಪ್ರಮುಖ ಕಾರಣಗಳಿವೆ:
– ಫೊಲೇಟ್‌ ಕೊರತೆಯ ರಕ್ತಹೀನತೆ
– ವಿಟಮಿನ್‌ ಬಿ 12 ಕೊರತೆಯ ರಕ್ತಹೀನತೆ
– ಕಬ್ಬಿಣಾಂಶ ಕೊರತೆಯ ರಕ್ತಹೀನತೆ

ಫೋಲಿಕ್‌ ಆ್ಯಸಿಡ್‌ನ‌ ಪಾತ್ರ
– “ಎಲೆ’ ಎಂಬ ಅರ್ಥವಿರುವ ಗ್ರೀಕ್‌ ಪದವಾದ “ಫೋಲಿಯಂ’ ಎಂಬ ಪದದಿಂದ ಫೋಲಿಕ್‌ ಆ್ಯಸಿಡ್‌ ಹುಟ್ಟಿಕೊಂಡಿದೆ. ಹಸುರು ಸೊಪ್ಪು ತರಕಾರಿಗಳಲ್ಲಿ ಫೋಲಿಕ್‌ ಆ್ಯಸಿಡ್‌ ಸಮೃದ್ಧವಾಗಿರುತ್ತದೆ.
– ಫೋಲಿಕ್‌ ಆ್ಯಸಿಡ್‌ ಹೆಮೆ (ಹಿಮೋಗ್ಲೋಬಿನ್‌ನ ಕಬ್ಬಿಣಾಂಶ ಸಹಿತ ಪಿಗೆ¾ಂಟ್‌) ರೂಪುಗೊಳ್ಳಲು ಅತ್ಯವಶ್ಯಕ.
– ಫೋಲಿಕ್‌ ಆ್ಯಸಿಡ್‌ ಕೊರತೆಯುಂಟಾದರೆ ಕೆಂಪು ರಕ್ತ ಕಣಗಳು ಸಂಪೂರ್ಣವಾಗುವುದಕ್ಕೆ ತೊಂದರೆಯಾಗುತ್ತದೆ, ಇದರಿಂದ ಮೆಗಾಲೊಬ್ಲಾಸ್ಟಿಕ್‌ ರಕ್ತಹೀನತೆ ಉಂಟಾಗುತ್ತದೆ.
– ಮೆಗಾಲೊಬ್ಲಾಸ್ಟಿಕ್‌ ರಕ್ತಹೀನತೆಯಲ್ಲಿ ಕೆಂಪು ರಕ್ತಕಣಗಳು ಅಸಂಪೂರ್ಣವಾಗಿದ್ದು, ದುಂಡಗಿರುತ್ತವೆ, ಸಂಖ್ಯೆಯಲ್ಲಿ ಕಡಿಮೆ ಇರುತ್ತವೆ, ಸಹಜಕ್ಕಿಂತ ದೊಡ್ಡದಾಗಿರುತ್ತವೆ, ಸಂಪೂರ್ಣವಾದ ಆರೋಗ್ಯಯುತ ಕೆಂಪು ರಕ್ತಕಣಗಳಿಗಿಂತ ಬೇಗನೆ ನಾಶವಾಗುತ್ತವೆ.

ವಿಟಮಿನ್‌ ಬಿ 12ನ ಪಾತ್ರ
– ಕೊಬಾಲಮಿನ್‌ ಎಂದೂ ಕರೆಯಲ್ಪಡುವ ವಿಟಮಿನ್‌ ಬಿ12 ಹಿಮೊಗ್ಲೋಬಿನ್‌ ಉತ್ಪಾದನೆಗೆ ಸಹಾಯ ಮಾಡುತ್ತದೆ.
– ಪ್ರಾಣಿಜನ್ಯ ಆಹಾರಗಳು ವಿಟಮಿನ್‌ ಬಿ 12ರ ಸಮೃದ್ಧ ಮೂಲಗಳಾಗಿವೆ. ಕಟ್ಟಾ ಸಸ್ಯಾಹಾರಿಗಳು (ಹೈನು ಉತ್ಪನ್ನಗಳನ್ನು ಕೂಡ ಸೇವಿಸದವರು) ವಿಟಮಿನ್‌ ಬಿ 12ನ್ನು ಫೋರ್ಟಿಫೈಡ್‌ ಆಹಾರೋತ್ಪನ್ನಗಳು ಅಥವಾ ಬಿ 12 ಸಪ್ಲಿಮೆಂಟ್‌ಗಳಿಂದ ಪಡೆಯಬೇಕು.
– ವಿಟಮಿನ್‌ ಬಿ 12 ಕೊರತೆ/ ಅಸಮರ್ಪಕ ಸೇವನೆಯಿಂದಾಗಿ ಕಿಣ್ವಗಳ ಸಂಯೋಜನೆ ಕಡಿಮೆ/ ಅಸಮರ್ಪಕವಾಗುತ್ತದೆ; ಇದರಿಂದಾಗಿ ಹೆಮೆ ಸಂಯೋಜನೆಯೂ ಕಡಿಮೆಯಾಗಿ ಮೆಗಾಲೊಬ್ಲಾಸ್ಟಿಕ್‌ ರಕ್ತಹೀನತೆಗೆ ಕಾರಣವಾಗುತ್ತದೆ.
– ಪರ್ನಿಶಿಯಸ್‌ ರಕ್ತಹೀನತೆ – ಇದು ಹೆಚ್ಚು ಸಾಮಾನ್ಯವಲ್ಲದ ವಿಶೇಷ ರೂಪದ ವಿಟಮಿನ್‌ ಬಿ 12 ಕೊರತೆಯ ಸ್ವರೂಪವಾಗಿದ್ದು, “ಇಂಟ್ರಿನ್ಸಿಕ್‌ ಫ್ಯಾಕ್ಟರ್‌’ ಎಂಬ ವಿಶೇಷ ಪ್ರೊಟೀನ್‌ನ ಕೊರತೆಯಿಂದ ತಲೆದೋರುತ್ತದೆ. ಈ ವಿಶೇಷ ಪ್ರೊಟೀನ್‌ ಆಹಾರದ ಮೂಲಕ ದೇಹ ಸೇರುವ ವಿಟಮಿನ್‌ ಬಿ 12 ಜತೆಗೆ ಸೇರಿ ಅದನ್ನು ದೇಹವು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪರ್ನಿಶಿಯಸ್‌ ರಕ್ತಹೀನತೆಯಲ್ಲಿ “ಇಂಟ್ರಿನ್ಸಿಕ್‌ ಫ್ಯಾಕ್ಟರ್‌’ನ ಕೊರತೆ ಇರುತ್ತದೆ.
– ವಿಟಮಿನ್‌ ಬಿ 12ರ ದೀರ್ಘ‌ಕಾಲಿಕ ಕೊರತೆಯು ನರಶಾಸ್ತ್ರೀಯ ಲಕ್ಷಣಗಳಿಗೂ ಕಾರಣವಾಗಬಹು ದಾಗಿದೆಯಲ್ಲದೆ ಶಾಶ್ವತ ನರ ಹಾನಿಯನ್ನು ಉಂಟುಮಾಡಬಲ್ಲುದು.

-ಮುಂದಿನ ವಾರಕ್ಕೆ

-ಮೊನಾಲಿಸಾ ಬಿಸ್ವಾಸ್‌
ಪಿಎಚ್‌ಡಿ ವಿದ್ಯಾರ್ಥಿನಿ,

-ಡಾ| ವಿಜೇತಾ ಶೆಣೈ ಬೆಳ್ಳೆ
ಅಸೋಸಿಯೇಟ್‌ ಪ್ರೊಫೆಸರ್‌, ಬಯೋಕೆಮೆಸ್ಟ್ರಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next