Advertisement

ಆನೆಕೆರೆ ದಡದ ಅಸುರಕ್ಷತೆ ಆಪತ್ತಿಗೆ ಆಹ್ವಾನ : ಮೈದಾನದಂತಿದೆ ಮೇಲ್ಮೈ

03:08 PM Sep 03, 2022 | Team Udayavani |

ಕಾರ್ಕಳ : ಒಡಲಲ್ಲಿ ಜಲರಾಶಿ, ಮೇಲ್ಮೈನಲ್ಲಿ ಹಸುರು ಸಿರಿ. ನಡುವೆ ಸುಂದರ ಆನೆಕೆರೆ. ಇಲ್ಲಿ ಕೆರೆ ಸಮೀಪಕ್ಕೆ ತೆರಳಿ, ಕೆರೆಗೆ ಇಳಿಯುವ ಸಹವಾಸವನ್ನು ಅಪ್ಪಿತಪ್ಪಿ ಯಾರಾದರೂ ಮಾಡಿದರೆ ಅವರ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

Advertisement

ನಗರದ ಹೃದಯ ಭಾಗದಲ್ಲಿ ಈ ಬೃಹತ್‌ ಆನೆಕೆರೆಯಿದೆ. ಈ ಭಾಗದಲ್ಲಿ ಸುರಿದ ಮಳೆಗೆ ಕೆರೆ ಈಗ ಪೂರ್ತಿ ತುಂಬಿಕೊಂಡಿದೆ. ಕೆರೆಯ ಅಡಿಯಲ್ಲಿ ಸಮೃದ್ಧ ನೀರಿದ್ದರೂ ಅಷ್ಟೇ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು ಹೂಳು ಎತ್ತದೆ ಅನೇಕ ವರ್ಷಗಳಾಗಿವೆ.

ಕೆರೆಯ ನೀರಿನ ಮೇಲ್ಮೈಯಲ್ಲಿ ಹಸುರು ಸಾಲ್ವೇನಿಯ ಬೆಳೆದು ಹುಲ್ಲಿನ ಮೈದಾನದಂತೆ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಕೆರೆಯ ದಡದಲ್ಲಿ ರಸ್ತೆ ಹಾದುಹೋಗಿದೆ. ಮೂರು ಮಾರ್ಗದಿಂದ ಇದೇ ಕೆರೆ ದಡದ ಮೂಲಕ ಹಾದು ಹೋದ ರಸ್ತೆ ಮುಂದಕ್ಕೆ ಅದು ಹಿರಿಯಂಗಡಿ, ಪುಲ್ಕೇರಿ, ಮಂಗಳೂರು ಕಡೆಗೆ ತೆರಳುವುದಕ್ಕೆ ಅನುಕೂಲವಾಗಿದೆ. ಜಾನುವಾರಿಗೂ ಅಪಾಯ ಕೆರೆ ಬದಿಯ ದಡದ ರಸ್ತೆಯಲ್ಲಿ ಘನ, ಲಘು, ದ್ವಿಚಕ್ರ ವಾಹನಗಳು ನಿತ್ಯ ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ. ಮಕ್ಕಳು ಮಹಿಳೆಯರು, ವೃದ್ಧರು ಕಾಲ್ನಡಿಗೆಯಲ್ಲಿ ಕೆರೆಯ ಪಕ್ಕದಲ್ಲೇ ತೆರಳುತ್ತಿರುತ್ತಾರೆ. ಕಾಲ್ನಡಿಗೆಯಲ್ಲಿ ತೆರಳುವವರು ಅಪ್ಪಿತಪ್ಪಿ ಕೆರೆಯಹತ್ತಿರಕ್ಕೆ ಹೋದರೆ ಕೆರೆಗೆ ಕಾಲು ಜಾರಿ ಬಿದ್ದು ಪ್ರಾಣಕ್ಕೆ ಆಪತ್ತು ತಂದುಕೊಳ್ಳುವ ಅಪಾಯವಿದೆ. ನಾಗರಿಕರಲ್ಲದೆ ಜಾನುವಾರುಗಳಿಗೂ ಅಪಾಯವಿದೆ.

ತಡೆಬೇಲಿ ಅಗತ್ಯ
ಕೆರೆಯ ದಡದಲ್ಲಿ ವಾಕಿಂಗ್‌ ಪಥ ಕಾಮಗಾರಿ ನಡೆಸಲಾಗಿದೆ. ಈ ವೇಳೆ ಕೆರೆಯಿದ್ದ ರಸ್ತೆ ಬದಿ ಅಗೆದಿರಿಸಿದ ಗೋಡೆ ಸ್ವಲ್ಪ ಮಟ್ಟಿಗೆ ಸಾರ್ವಜನಿಕರಿಗೆ ಸುರಕ್ಷತೆ ಒದಗಿಸಿದ್ದರೂ, ಕೆರೆ ಹತ್ತಿರಕ್ಕೆ ಇಳಿದು ಹೋಗುವುದಕ್ಕೆ ಯಾವ ತಡೆಯೂ ಇಲ್ಲ. ಕೆರೆಯ ದಡದಲ್ಲಿ ಎಚ್ಚರಿಕೆ ವಹಿಸುವ ಯಾವುದೇ ಸೂಚನಾ ಫ‌ಲಕಗಳು ಕೆರೆಯ ಸುತ್ತಲೂ ಇಲ್ಲ. ಸ್ಥಳೀಯರಿಗೆ ಕೆರೆಯ ಆಳ,
ವಿಸ್ತಾರದ ಪ್ರಮಾಣ ಇತ್ಯಾದಿ ಕುರಿತ ಅರಿವಿದೆ. ಅಪರಿಚಿತರು, ಪ್ರವಾಸಿ ಗರಿಗೆ ಮೇಲ್ನೋಟಕ್ಕೆ ಮೈದಾನ ದಂತೆ ಕಾಣುವ ಕೆರೆಯ ಸಮೀಪಕ್ಕೆ ಹೋಗಿ ಇಳಿಯುವ ಸಾಧ್ಯತೆ ಇವೆ. ಕೆರೆಯಲ್ಲಿ ಸುಮಾರು 9 ಅಡಿ ಹೂಳು ತುಂಬಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರವಾಸಿ ಕೇಂದ್ರವಾಗಿಸಲು ಬೇಡಿಕೆ
ಆನೆಕೆರೆಯನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಬೇಕು ಎಂಬ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಯೋಜನೆಯೂ ಸಿದ್ಧವಾಗಿದೆ. ಕೆರೆ ಮಧ್ಯೆ ಕಾರಂಜಿ, ಮೆಟ್ಟಿಲುಗಳು, ಬೋಟ್‌, ಹೀಗೆ ಆಕರ್ಷಕ ಕೇಂದ್ರವಾಗಿ ನಿರ್ಮಾಣಗೊಳಿಸಲಾಗುತ್ತಿದೆ.

Advertisement

ಕಾರ್ಕಳ ನಗರ ಕೇಂದ್ರದಲ್ಲಿ 25 ಎಕ್ರೆ ಪ್ರದೇಶ ದಲ್ಲಿ ವಿಸ್ತರಿಸಿರುವ ಜಿಲ್ಲೆಯ ಆಕರ್ಷಣೀಯ ಕೆರೆಯಾಗಿದೆ. ಕೆರೆಯ ಮಧ್ಯದಲ್ಲಿ ಬಸದಿಯಿದ್ದು ಕೆರೆಯ ಅಂದವನ್ನು ಹೆಚ್ಚಿಸಿದೆ. ಬಸದಿಯ ಪುನರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಆನೆಕೆರೆ ಕಳೆದ ಕೆಲವು ವರ್ಷಗಳಿಂದ ಸಾಲ್ವೇನಿಯಾ ಎಂಬ ಕಳೆಯಿಂದ ತುಂಬಿ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಕೆರೆಯಿಂದ ಸುತ್ತಮುತ್ತಲಿನ ಸುಮಾರು ಒಂದು ಕಿ.ಮೀ. ವರೆಗಿನ ಬಾವಿಗಳಲ್ಲಿ ನೀರಿನ ಒರತೆಯಿತ್ತು. ಆದರೆ ಈಗ ಕೆರೆ ಪೂರ್ತಿ ಮತ್ತೆ ಹೂಳು ತುಂಬಿ ಒರತೆ ಕಡಿಮೆಯಾಗಿದೆ ಎಂದು ಪರಿಸರದವರು ಹೇಳುತ್ತಾರೆ.

ಮುನ್ನೆಚ್ಚರಿಕೆ ಅಗತ್ಯ
ಕೆರೆಯ ಎದುರಿನ ಮಾರ್ಗದಲ್ಲಿ ವಾಹನ ಸವಾರರು ನಿಧಾನವಾಗಿ ತೆರಳಬೇಕು. ಈ ಹಿಂದೆ ಅತೀ ವೇಗದಿಂದ ಸಂಚರಿಸಿ ವಾಹನಗಳು ಕೆರೆಗೆ ಬಿದ್ದು ಅಪಾಯ ಸಂಭವಿದ ಉದಾಹರಣೆ ಹಲವು ಇವೆ. ಇತ್ತೀಚೆಗಷ್ಟೆ ವಿದ್ಯಾರ್ಥಿಗಳು ಪ್ರಯಾಣಿಸುತಿದ್ದ ಕಾರು ಕೆರೆಗೆ ಬಿದ್ದಿತ್ತು. ಬಹುಮುಖ್ಯವಾಗಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರೂ ಇಲ್ಲಿ ತೆರಳುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಅಗತ್ಯ ಕ್ರಮ
ಕೆರೆ ದಡದಲ್ಲಿ ವಾಕಿಂಗ್‌ ಟ್ರ್ಯಾಕ್‌ ಕಾಮಗಾರಿ ನಡೆದಿದೆ. ಈ ಸ್ಥಳದಲ್ಲಿ ಸುರಕ್ಷತೆ ಇರುವುದು ಗಮನಕ್ಕೆ ಬಂದಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುತ್ತೇವೆ. -ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next