Advertisement
ಅವರ ಈ ಕಾರ್ಯಕ್ಕೆ ಸೋಮವಾರಪೇಟೆಯ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ನಗರ ಗೌಡ ಒಕ್ಕೂಟದ ಸದಸ್ಯರು ಕೈ ಜೋಡಿಸಿದ್ದಾರೆ. ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ರವೀಂದ್ರ, ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವದರಿಂದ ಕೆರೆಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ. ಈ ನಿಟ್ಟಿನಲ್ಲಿ ತಾನು ತನ್ನ ಸ್ವಂತ ದುಡಿಮೆಯಿಂದ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಹಣ ವಿನಿಯೋಗಿಸುತ್ತಿದ್ದೇನೆ. ಈಗಾಗಲೇ ಯಡೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯ ಮುಕ್ತಾಯಗೊಂಡಿದ್ದು, ಮುಂದಿನ ದಿನಗಳಲ್ಲಿ ಅಬ್ಬೂರುಕಟ್ಟೆ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತಲಾಗುವದು ಎಂದರು.
ಒಂದು ಹಿಟಾಚಿ ಯಂತ್ರದ ಮೂಲಕ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ನಾಲ್ಕು ಟಿಪ್ಪರ್‌ಗಳ ಮೂಲಕ ಹೂಳನ್ನು ಹೊರಭಾಗಕ್ಕೆ ಸಾಗಿಸಲಾಗುತ್ತಿದೆ. ಸುಮಾರು 7 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಮುಂದಿನ 10 ದಿನಗಳಲ್ಲಿ ಮುಕ್ತಾಯವಾಗಲಿದೆ ಎಂದು ರವೀಂದ್ರ ತಿಳಿಸಿದರು. ಮೋಟಾರು ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ ಮಾತನಾಡಿ, ಅನೆಕೆರೆಗೆ ಕಾಯಕಲ್ಪ ನೀಡುವದು ಈ ಭಾಗದ ಸಾರ್ವಜನಿಕರ ದಶಕಗಳ ಬೇಡಿಕೆಯಾಗಿತ್ತು. ಅದನ್ನು ರವೀಂದ್ರ ಅವರು ಈಡೇರಿಸಿದ್ದಾರೆ. ಇವರ ಸಮಾಜಮುಖೀ ಕಾರ್ಯಕ್ಕೆ ಮೋಟಾರ್ ಯೂನಿಯನ್ ಸಂಪೂರ್ಣ ಬೆಂಬಲ ನೀಡಲಿದ್ದು, ಆನೆಕೆರೆಯಲ್ಲಿ ಈಗಾಗಲೇ ಸಂಘದಿಂದ ಶುಚಿತ್ವ ಕಾರ್ಯ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಯಾರೂ ಸಹ ಇಲ್ಲಿಗೆ ತ್ಯಾಜ್ಯಗಳನ್ನು ಸುರಿಯಬಾರದು ಎಂದು ಮನವಿ ಮಾಡಿದರು. ಈ ಸಂದರ್ಭ ನಗರ ಗೌಡ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಬನ್ನಳ್ಳಿ ಗೋಪಾಲ್, ಮೋಟಾರ್ ಯೂನಿಯನ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಪದಾಧಿಕಾರಿಗಳಾದ ಖಾದರ್, ಪರಮೇಶ್, ಹಾಲಪ್ಪ, ಶೇಷಪ್ಪ, ಚೌಡ್ಲು ವಿಎಸ್‌ಎಸ್‌ಎನ್ ನಿರ್ದೇಶಕಿ ಜಾನಕಿ ವೆಂಕಟೇಶ್, ಆಟೋ ಯೂನಿಯನ್ ಅಧ್ಯಕ್ಷ ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.