ಮೂಡಬಿದಿರೆ: ರಾಜನಾಗಿ ಹುಟ್ಟುವುದಕ್ಕಿಂತ ರಾಜನಾಗಿ ಬದುಕುವುದು ಮುಖ್ಯ. ಬದುಕಿನಲ್ಲಿ ಬದಲಾವಣೆ ಅನುಸರಿಸಿಕೊಂಡು ಬದಲಾದರೆ ಯಶಸ್ಸು ಸಿಗುವುದು. ಬದಲಾವಣೆ ಸಾಧ್ಯವಾಗಿಸಿದರೆ ಸಾಧನೆ ಸಾಧ್ಯ. ತುಂಬಿದ ಜೇಬು ನೂರು ಚಟ ಕಲಿಸಿದರೆ ಖಾಲಿ ಜೇಬು ಪಾಠ ವೊಂದನ್ನು ಕಲಿಸುತ್ತದೆ ಎನ್ನುವುದಕ್ಕೆ ಸಾಧಕ ಉದ್ಯಮಿ ಡಾ| ಜಿ. ರಾಮಕೃಷ್ಣ ಆಚಾರ್ ನಿದರ್ಶನ ಎಂದು ಶ್ರೀ ಮತ್ ಜದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಪರಮ ಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಮೂಡಬಿದಿರೆ ಪೌರ ಸಮ್ಮಾನ ಸಮಿತಿ ವತಿಯಿಂದ ಮೂಡಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಎ.2ರಂದು ನಡೆದ ಗೌರವ ಡಾಕ್ಟರೆಟ್ ಪುರಸ್ಕೃತ ಡಾ| ಜಿ. ರಾಮಕೃಷ್ಣ ಆಚಾರ್ ಅವರ ಮೂಡಿಬಿದಿರೆಯ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕಷ್ಟಗಳನ್ನೆಲ್ಲ ಎದುರಿಸಿ ಬದುಕುವ ಕಲೆ ಆಚಾರ್‌ರಿಗೆ ಹುಟ್ಟಿನಿಂದಲೇ ಒಲಿದಿದೆ ಎಂದರು.
ಮೂಡಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು, ಶೈಕ್ಷಣಿಕ ಕ್ಷೇತ್ರದ ಸಾಧಕ ಡಾ| ಮೋಹನ್ ಆಳ್ವ ಹಾಗೂ ಉದ್ಯಮಿ ಡಾ| ಜಿ. ರಾಮಕೃಷ್ಣ ಆಚಾರ್ ಇಬ್ಬರು ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಬದಲಾಯಿಸುವ ಶಕ್ತಿಗಳು. ಇಬ್ಬರಿಗೂ ಪದ್ಮಶ್ರೀ ಪ್ರಶಸ್ತಿ ದೊರಕುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಡಾ| ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ| ಜಿ. ರಾಮಕೃಷ್ಣ ಹಾಗೂ ನಾನು ಕಷ್ಟ-ಸುಖ ಗಳನ್ನು ಹಂಚಿಕೊಂಡು ಜತೆ ಯಾಗಿ ಬೆಳೆದವರು. ಅವರ ಸೃಜನಶೀಲತೆ, ಅಹಂರಹಿತ ವ್ಯಕ್ತಿತ್ವ. ಸೋಲು ಗೆಲುವು ಎರಡನ್ನೂ ಎದುರಿಸಿ ನಡೆಯುವ ಛಲ. ಕೌಶಲ ಭರಿತ ಶ್ರಮ ಎಲ್ಲವೂ ಅವರನ್ನು ಮೇರು ಮಟ್ಟಕ್ಕೆ ಬೆಳೆಸಿದೆ ಎಂದು ಹೇಳಿದರು.
ಮಂಗಳೂರು ಅಖೀಲ ಭಾರತ ಲೆಕ್ಕಪರಿಶೋಧಕ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ.ಎ ಎಸ್.ಎಸ್ ನಾಯಕ್, ಮೂಡಬಿದಿರೆ ಬಾಲಾಜಿ ಸಮೂಹ ಸಂಸ್ಥೆಗಳ ವಿಶ್ವನಾಥ ಪ್ರಭು, ಮೂಡಬಿದಿರೆ ನಿಶ್ಮಿತಾ ಸಮೂಹ ಸಂಸ್ಥೆಗಳ ನಾರಾಯಣ ಪಿ.ಎಂ., ಕೈಗಾರಿಕೋದ್ಯಮಿ ಭದ್ರಾವತಿಯ ಎಚ್ ನಾಗೇಶ್, ಮೂಡಬಿದಿರೆ ಧನಲಕ್ಷಿ$¾à ಕ್ಯಾಶ್ಯೂ ಎರ್ಕ್ಸ್ಪೋಟ್ಸ್‌ನ ಕೆ. ಶ್ರೀಪತಿ ಭಟ್, ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟ ಅಧ್ಯಕ್ಷ ಮಧು ಆಚಾರ್ಯ, ಕಾಳಿಕಾಂಬಾ ದೇಗುಲದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.
ಅರವಿಂದ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಡಾ.|ಜಿ. ರಾಮಕೃಷ್ಣ ಆಚಾರ್‌ರವರ ಸಾಧನೆಗಳ ಅವಲೋಕನದ ಕಿರು ಸಾಕ್ಷಚಿತ್ರ ಪ್ರದರ್ಶಿಸಲಾಯಿತು. ಪೌರ ಸಮ್ಮಾನ ಸಮಿತಿ ಕಾರ್ಯದರ್ಶಿ ಸೀತಾರಾಮ ಆಚಾರ್ ಸ್ವಾಗತಿಸಿ, ವೇಣುಗೋಪಾಲ ಶೆಟ್ಟಿ ವಂದಿಸಿ, ನಿರೂಪಿಸಿದರು.
ಪ್ರಭುಗಳೇ ನನಗೆ ರೋಲ್ ಮಾಡೆಲ್
ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಜಿ. ರಾಮಕೃಷ್ಣ ಆಚಾರ್, ಮನುಷ್ಯನ ಹೊಟ್ಟೆಗೆ ಬೆಂಕಿ ಬಿದ್ದಂತಾಗಿ, ಅವಮಾನಕ್ಕೆ ಒಳಗಾದರಷ್ಟೆ ಜೀವನದಲ್ಲಿ ಸಾಧನೆ ಸಾಧ್ಯ. ನನ್ನ ಜೀವನದಲ್ಲೂ ಇದೇ ಆಯಿತು. ಇದುವೇ ನನ್ನ ಸಾಧನೆಗೂ ದಾರಿ ತೋರಿಸಿತು. 500 ರೂ. ಬಿಡಿ 5 ರೂಪಾಯಿಗೂ ಬಡತನ ಇದ್ದ ದಿನಗಳಲ್ಲಿ ನನಗೆ ಕೆಲಸ ಕೊಟ್ಟು, ಸಹಾಯ ಮಾಡಿದ ಬಾಲಾಜಿ ಸಂಸ್ಥೆಯ ವಿಶ್ವನಾಥ ಪ್ರಭುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರೇ ನನ್ನ ರೋಲ್ ಮಾಡೆಲ್ ನನಗೆ ಡಾಕ್ಟರೆಟ್ ಸಿಕ್ಕಿದ್ದು ದೇವರ ಕೊಡುಗೆ. ಕಾಲಕ್ಕೆ ತಕ್ಕಂತೆ ತಾಂತ್ರಿಕತೆ, ಮಾರುಕಟ್ಟೆ ಕ್ಷೇತ್ರದಲ್ಲಿ ಬದಲಾವಣೆ ಮಾಡುತ್ತ ಮುಂದುವರೆಯಬೇಕಿದೆ ಎಂದರು.