Advertisement

Anegondi ವಾಲೀಕಿಲ್ಲಾ,ಹೇಮಗುಡ್ಡ ದಸರಾಕ್ಕಿದೆ ಕುಮ್ಮಟದುರ್ಗದ ಇತಿಹಾಸದ ಮೆರಗು

07:20 PM Oct 15, 2023 | Team Udayavani |

ಗಂಗಾವತಿ: ನಾಡ ಹಬ್ಬ ದಸರಾ ನವರಾತ್ರಿ ಹಬ್ಬ ತಾಲೂಕಿನ ಆನೆಗೊಂದಿ ವಾಲೀಕಿಲ್ಲಾ, ಹೇಮಗುಡ್ಡ ಸೇರಿ ನಗರ ಮತ್ತು ತಾಲೂಕಿನ ವಿವಿಧೆಡೆ 9 ದಿನಗಳ ಕಾಲ ದೇವಿಯ ಆರಾಧನೆ 10ನೇ ದಿನದಂದು ವಿಜಯದಶಮಿ ಆಚರಣೆಗೆ ರವಿವಾರದಂದು ಘಟಸ್ಥಾಪನೆ ಮೂಲಕ ಚಾಲನೆ ದೊರಕಿದೆ.

Advertisement

ಪ್ರಸ್ತುತ ಮೈಸೂರಿನ ನಾಡ ಹಬ್ಬ ದಸರಾದ ಮೂಲ ತಾಲೂಕಿನ ಕುಮ್ಮಟದುರ್ಗ, ಹೇಮಗುಡ್ಡ ಹಾಗೂ ಆನೆಗೊಂದಿಯಾಗಿದ್ದು ಕಾಲಾಂತರದಲ್ಲಿ ವಿಜಯನಗರ ಸಾಮ್ರಾಜ್ಯ ಪಥನವಾದ ನಂತರ ಮೈಸೂರಿನ ಅರಸರು ದಸರಾವನ್ನು ಆಚರಿಸಿಕೊಂಡು ಬಂದಿದ್ದು ಏಕೀಕರಣದ ನಂತರ ರಾಜ್ಯ ಸರಕಾರ ದಸರಾವನ್ನು ನಾಡ ಹಬ್ಬವೆಂದು ಮೈಸೂರಿನಲ್ಲಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಿ 10 ನೇ ದಿನ ಆನೆ ಅಂಬಾರಿಯಲ್ಲಿ ನಾಡದೇವತೆ ಚಾಮುಂಡಿ ತಾಯಿಯ ವಿಗ್ರಹವನ್ನು ಮೆರವಣಿಗೆ ಮಾಡಿ ವಿಜಯೋತ್ಸವದ ಮೂಲಕ ಬನ್ನಿ ಮುಡಿಯಲಾಗುತ್ತದೆ.

ಮೊದಲು ದಸರಾ ಹಬ್ಬವನ್ನು ಕುಮ್ಮಟದುರ್ಗ ಅರಸರು ಆಚರಣೆಗೆ ತಂದರು. ಶತ್ರುಗಳ ವಿರುದ್ಧ ದಸರಾ ಸಂದರ್ಭದಲ್ಲಿ ದೊರೆತ ವಿಜಯವನ್ನು ವಿಜಯದಶಮಿ ಎಂದು ಆಚರಿಸುವ ಮೂಲಕ ಆರಂಭವಾದ ನವರಾತ್ರಿ ಹಬ್ಬ ಪ್ರಸ್ತುತ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾಗಿದೆ.

ತಾಲೂಕಿನ ಆನೆಗೊಂದಿಯ ವಾಲೀಕಿಲ್ಲಾ ದೇವಾಲಯ, ಪಂಪಾಸರೋವರದಲ್ಲಿ 9 ದಿನಗಳ ಕಾಲ ದೇವಿ ಪುರಾಣ, ಹೋಮ ಹವನ ಸೇರಿ ಹಲವು ಕಾರ್ಯಕ್ರಮಗಳು ನಡೆಯತ್ತವೆ. ಕುಮ್ಮಟದುರ್ಗ ಅರಸರ ದೈವ ಜಟ್ಟಂಗಿ ರಾಮೇಶ್ವರ ಮತ್ತು ದುರ್ಗಾಪರಮೇಶ್ವರಿಯಾಗಿದ್ದರು. ಪ್ರಸ್ತುತ ಹೇಮಗುಡ್ಡದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯವನ್ನು 35 ವರ್ಷಗಳ ಹಿಂದೆ ಮಾಜಿ ಸಂಸದ ಎಚ್.ಜಿ.ರಾಮುಲು ಜೀರ್ಣೋದ್ಧಾರ ಮಾಡಿದ ನಂತರ ಸತತವಾಗಿ ನವರಾತ್ರಿ ದಸರಾ ಹಬ್ಬವನ್ನು ಅವರ ಕುಟುಂಬದವರು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನೇತೃತ್ವದಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ. ಕೊನೆಯ ದಿನ ಉಚಿತ ಸಾಮೂಹಿಕ ಮದುವೆಗಳು ಹಾಗೂ ಆನೆ ಅಂಬಾರಿಯಲ್ಲಿ ದುರ್ಗಾ ಪರಮೇಶ್ವರಿಯ ಮೂರ್ತಿಯನ್ನಿರಿಸಿ ಜಂಬೂ ಸವಾರಿ ಜರುಗುತ್ತದೆ. ನಾಡಿನ ವಿವಿಧ ಭಾಗದಿಂದ ಸಂಸ್ಕೃತಿಕ ಕಲಾ ತಂಡಗಳು ಆಗಮಿಸಿ ಅಂಬಾರಿ ಮೆರವಣಿಗೆಗೆ ಶೋಭೆ ತರುತ್ತವೆ. 9 ದಿನಗಳ ಕಾಲ ಅನ್ನದಾಸೋಹದ ವ್ಯವಸ್ಥೆಯನ್ನು ಎಚ್‌ಆರ್‌ಜಿ ಕುಟುಂಬದವರು ಮಾಡುತ್ತಾರೆ.

ಗಂಗಾವತಿ ನಗರದ ವೆಂಕಟೇಶ್ವರ ದೇವಾಲಯ, ಇಸ್ಲಾಂಪೂರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇಗುಲ, ಜುಲೈನಗರದ ಉದ್ಭಲ ಮಹಾಲಕ್ಷ್ಮಿ ದೇಗುಲ, ಪ್ರಶಾಂತನಗರ, ಅಂಗಡಿ ಸಂಗಣ್ಣ ಕ್ಯಾಂಪ್ ಬನಶಂಕರಿ ದೇಗುಲ, ಹಿರೇಜಂತಗಲ್ ದ್ಯಾಮಮ್ಮ ದೇಗುಲ, ನೀಲಕಂಠೇಶ್ವರ ಕ್ಯಾಂಪಿನ ಬನ್ನಿಮಹಾಂಕಾಳಿ ದೇಗುಲ, ಬನ್ನಿಗಿಡದ ಕ್ಯಾಂಪಿನ ಬನ್ನಿಮಹಾಂಕಾಳಿ ದೇಗುಲಗಳಲ್ಲಿ 9 ದಿನಗಳ ಕಾಲ ದೇವಿಯ ಆರಾಧನೆ ಮತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಮತ್ತು ನಿತ್ಯ ಅನ್ನಸಂತರ್ಪಣೆ ಜರುಗುತ್ತದೆ.

Advertisement

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next