ಕಿಂಗ್‌ಸ್ಟನ್: ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಆಗಾಗ ದುರಂತಗಳ ಸದ್ದು ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಕಾರಣ ಅಲ್ಲಿ ಬಳಸುವ ಅತ್ಯಂತ ಗಟ್ಟಿಯಾದ ಚರ್ಮದ ಚೆಂಡು. ಆ ಚೆಂಡಿನೇಟಿಗೆ ಸಿಕ್ಕಿ ಸಮೀಪದರಲ್ಲಿ ವಿಂಡೀಸ್‌ನ ಖ್ಯಾತ ಆಲ್‌ರೌಂಡರ್ ಆಂಡ್ರೆ ರಸೆಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ನಡೆದಿದ್ದು ವೆಸ್ಟ್ ಇಂಡೀಸ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ. ಈ ಘಟನೆ ಆರಂಭಿಕ ಹಂತದಲ್ಲಿ 2014ರಲ್ಲಿ ಮೃತಪಟ್ಟ ಆಸ್ಟ್ರೇಲಿಯದ ಫಿಲಿಪ್ ಹ್ಯೂಸ್ ನೆನಪನ್ನು ಬರಿಸಿತ್ತು!
ಆಗಿದ್ದೇನು?: ಜಮೈಕಾ ತಲ್ಲವಾಸ್ ಹಾಗೂ ಸೈಂಟ್ ಲೂಸಿಯ ಜೂಕ್ಸ್ ತಂಡದ ನಡುವೆ ಸಿಪಿಎಲ್ ಟಿ20 ಪಂದ್ಯ ಗುರುವಾರ ನಡೆಯುತ್ತಿತ್ತು. ಜಮೈಕಾ ಪರ ಆಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದರು. ಅವರಿನ್ನೂ ಖಾತೆ ತೆರೆದಿರಲಿಲ್ಲ. ಸೈಂಟ್ ಲೂಸಿಯ ತಂಡದ ಹಾರ್ಡಸ್ ವಿಲೊjàನ್ 14ನೆ ಓವರ್ ಎಸೆಯುತ್ತಿದ್ದರು.
ವಿಲೊjàನ್ ಎಸೆದ ವೇಗದ ಅರೆ ಪಿಚ್ ಎಸೆತವೊಂದು ರಸೆಲ್‌ರನ್ನು ವಂಚಿಸಿ ಅವರ ಹೆಲ್ಮೆಟ್‌ಗೆ ಬಲವಾಗಿ ಬಡಿಯಿತು. ನಂತರ ಅದು ಅವರ ಬಲಗಿವಿ ಬಳಿ ಹೆಲ್ಮೆಟ್‌ನಲ್ಲಿ ಸಿಕ್ಕಿಕೊಂಡಿತು. ಕೂಡಲೇ ರಸೆಲ್ ಕುಸಿದುಬಿದ್ದರು. ನಂತರ ಇತರೆ ಆಟಗಾರರು ಬಂದಾಗ ರಸೆಲ್ ಎದ್ದು ನಿಲ್ಲಲು ಯಶಸ್ವಿಯಾದರು. ಆದರೆ ಅವರನ್ನು ಮೈದಾನದ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ಹೊರ ಸಾಗಿಸಿದರು. ಕೂಡಲೇ ಸಿಟಿ ಸ್ಕ್ಯಾನ್ ಮಾಡಿಸಲಾಯಿತು. ಅಲ್ಲಿನ ವರದಿಗಳ ಪ್ರಕಾರ ಗಂಭೀರವಾದ ಯಾವುದೇ ಅಪಾಯಗಳಿಲ್ಲದೇ ರಸೆಲ್ ಪಾರಾಗಿದ್ದರು. ಆದರೆ ರಸೆಲ್ ಪಂದ್ಯವಾಡದೇ ಹೊಟೇಲ್‌ನಲ್ಲಿ ವಿಶ್ರಾಂತಿ ಪಡೆದರು. ಅವರು ಸದ್ಯ ಯಾವಾಗ ಕ್ರೀಸ್‌ಗೆ ಮರಳುತ್ತಾರೆಂದು ಕಾದು ನೋಡಬೇಕು.
ಏನದು ಫಿಲಿಪ್ ಹ್ಯೂಸ್ ದುರಂತ?
ಫಿಲಿಪ್ ಹ್ಯೂಸ್ ಆಸ್ಟ್ರೇಲಿಯದ ಖ್ಯಾತ ಎಡಗೈ ಆಟಗಾರ. 2014ರ ನವೆಂಬರ್ 25ರಂದು ಅವರು ಶೆಫೀಲ್ಡ್ ಶೀಲ್ಡ್‌ನಲ್ಲಿ ಸೌಥ್ ಆಸ್ಟ್ರೇಲಿಯ ಪರ ಆಡುತ್ತಿದ್ದರು. ನ್ಯೂಸೌತ್ ವೇಲ್ಸ್ ಬೌಲರ್ ಶಾನ್ ಅಬೊಟ್ ಎಸೆತವೊಂದು ಅವರ ಕುತ್ತಿಗೆ ಬಳಿ ಬಲವಾಗಿ ಬಡಿಯಿತು. ಕೂಡಲೇ ಅವರು ಕುಸಿದುಬಿದ್ದರು. ಪಂದ್ಯವನ್ನು ತಕ್ಷಣ ನಿಲ್ಲಿಸಲಾಯಿತು. ಶೆಫೀಲ್ಡ್ ಶೀಲ್ಡ್‌ನ ಇತರೆ ಪಂದ್ಯಗಳೂ ನಿಂತುಹೋದವು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ಮೆದುಳಿನ ಸ್ತಂಭನ ಸಂಭವಿಸಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನ.27ರ ಬೆಳಗ್ಗೆ ಮೃತಪಟ್ಟರು.
ಹ್ಯೂಸ್‌ರನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ, ಅವರು ಧರಿಸಿದ್ದ ಹೆಲ್ಮೆಟ್ ಮೇಲುತಲೆಗೆ ಮಾತ್ರ ರಕ್ಷಣೆ ನೀಡುವ ರೀತಿಯಲ್ಲಿತ್ತು. ಚೆಂಡು ಬಡಿದಿದ್ದು ಹೆಲ್ಮೆಟ್‌ನ ರಕ್ಷಣೆಯಿಲ್ಲದ ಎಡಗಿವಿಗೆ.