ಕ್ರೈಸ್ಟ್ ಚರ್ಚ್: ಹಲವು ರಾಷ್ಟ್ರೀಯ ತಂಡಗಳಲ್ಲಿ ನಾಯಕತ್ವ ಬದಲಾವಣೆಯಾಗುತ್ತಿದೆ. ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ತಂಡದ ನಾಯಕ ಆ್ಯರೋನ್ ಫಿಂಚ್ ಅವರು ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 2019ರ ಏಕದಿನ ವಿಶ್ವಕಪ್ ನಲ್ಲಿ ಆಡಿದ್ದ ಹತ್ತು ನಾಯಕರಲ್ಲಿ ಇದೀಗ ಕೇನ್ ವಿಲಿಯಮ್ಸನ್ ಮಾತ್ರ ತಮ್ಮ ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆದರೆ ಇದೀಗ ನ್ಯೂಜಿಲ್ಯಾಂಡ್ ನಲ್ಲೂ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ನಡೆಯುತ್ತಿದೆ. ಕೇನ್ ವಿಲಿಯಮ್ಸನ್ ಅವರಿಗೆ ನಾಯಕತ್ವ ಹೊರೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ನ್ಯೂಜಿಲ್ಯಾಂಡ್ ತಂಡವು ಹೊಸ ನಾಯಕನ ಬಗ್ಗೆ ಯೋಚಿಸುವ ಸಮಯ ಬಂದಿದೆ. ಕೇನ್ ವಿಲಿಯಮ್ಸನ್ ಅವರು ಬ್ಯಾಟಿಂಗ್ ನತ್ತ ಹೆಚ್ಚಿನ ಗಮನ ಹರಿಸಲಿ ಎಂದು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಆಂಡ್ರೆ ಆಡಮ್ಸ್ ಹೇಳಿಕೆ ನೀಡಿದ್ದಾರೆ.
ಕೇನ್ ವಿಲಿಯಮ್ಸನ್ ಅವರು ನ್ಯೂಜಿಲೆಂಡ್ ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ಕಳೆದ ಕೆಲವು ಸಮಯದಿಂದ ಗಾಯಗಳಿಂದ ಬಳಲುತ್ತಿದ್ದಾರೆ. ಅಲ್ಲದೆ ಅವರ ಫಾರ್ಮ್ ಕೂಡ ಉತ್ತಮವಾಗಿಲ್ಲ.
“ವಿಲಿಯಮ್ಸನ್ ನೀವು ನಿರೀಕ್ಷಿಸುವಷ್ಟು ರನ್ ಗಳಿಸಿಲ್ಲ. ಅವರು ಕಳೆದ 12 ರಿಂದ 18 ತಿಂಗಳುಗಳಿಂದ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ” ಎಂದು ಆಡಮ್ಸ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಏಷ್ಯಾಕಪ್ ಪಂದ್ಯದಲ್ಲಿ ಭಾರತದ ಧ್ವಜ ಬೀಸಿದ ಶಾಹಿದ್ ಅಫ್ರಿದಿ ಮಗಳು!: ಅಫ್ರಿದಿ ಹೇಳಿದ್ದೇನು?
ಯುವ ಆಟಗಾರನಾಗಿದ್ದಾಗ ನೀವು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಬಹುದು, ಪ್ರಪಂಚದ ಮೂಲೆ ಮೂಲೆ ಪಯಣಿಸಬಹುದು. ಯಾವುದೇ ತೊಂದರೆಯಿಲ್ಲ. ಆದರೆ ಸದ್ಯ ಬಹುಶಃ ನ್ಯೂಜಿಲ್ಯಾಂಡ್ ಹೊಸ ನಾಯಕನನ್ನು ನೇಮಿಸಿವುದು ಮತ್ತು ಕೇನ್ ವಿಲಿಯಮ್ಸನ್ ಗೆ ಬ್ಯಾಟ್ ಮಾಡಲು ಅವಕಾಶ ನೀಡುವುದು ಉತ್ತಮ. ಈ ವಿಚಾರದಲ್ಲಿ ಕೇನ್ ಗೆ ಅಹಂಕಾರವಿದೆ ಎಂದು ನಾನು ಭಾವಿಸುವುದಿಲ್ಲ, ಅವರು ತಂಡಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ ಎಂದು ಆ್ಯಡಮ್ಸ್ ಹೇಳಿದ್ದಾರೆ.