Advertisement

Andhra Pradesh: ಅಧಿಕಾರಕ್ಕೆ ಲಗ್ಗೆ ಹಾಕುವವರು ಯಾರು?ನೆಲೆಗಾಗಿ ಕೈ-ಬಿಜೆಪಿ ಹೋರಾಟ

03:47 PM May 13, 2024 | Nagendra Trasi |

ದೇಶದ ದಕ್ಷಿಣ ಭಾಗದಲ್ಲಿ ಇರುವ ಪ್ರಧಾನ ರಾಜ್ಯವೆಂದರೆ ಆಂಧ್ರಪ್ರದೇಶ. 2014ರಲ್ಲಿ ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯ ರಚನೆ ಆದರೂ ಕೂಡ ದೇಶದ ರಾಜಕೀಯ ಭೂಪಟದಲ್ಲಿ ತನ್ನದೇ ಆದ ವಿಶೇಷ ಹಿರಿಮೆಯನ್ನು ಗಳಿಸಿಕೊಂಡಿದೆ ಈ ರಾಜ್ಯ. ಈ ಬಾರಿ ಲೋಕಸಭೆ ಚುನಾವಣೆಯ ಜತೆಗೆ ರಾಜ್ಯ ವಿಧಾನಸಭೆಗೆ ಕೂಡ ರಾಜ್ಯದ ಜನರು ತಮ್ಮ ಹಕ್ಕನ್ನು ಸೋಮವಾರ (ಮೇ 13) ಚಲಾಯಿಸುತ್ತಿದ್ದಾರೆ. ಒಂದು ಕಾಲದಲ್ಲಿ ತೆಲಂಗಾಣವನ್ನೂ ಸೇರಿಸಿಕೊಂಡು ಇದ್ದ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಬಲ ವಾಗಿತ್ತು. ಆದರೆ, ಸ್ವಯಂಕೃತಾಪರಾಧದಿಂದ ಕಾಂಗ್ರೆಸ್‌ ತನ್ನ ಪ್ರಭಾವವನ್ನು ಕಳೆದುಕೊಂಡಿದೆ ಎನ್ನುವುದು ಆ ಪಕ್ಷದ ಮುಖಂಡರೇ ಹೇಳಿಕೊಳ್ಳುತ್ತಿದ್ದಾರೆ.

Advertisement

ಹಾಲಿ ವಿಧಾನಸಭೆಯಲ್ಲಿ ಸಿಎಂ ವೈ,ಎಸ್‌. ಜಗನ್ಮೋಹನ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತು ಕಾಂಗ್ರೆಸ್‌ ಪಕ್ಷ (ವೈ ಎಸ್‌ ಆರ್‌ ಸಿಪಿ) ಅಧಿಕಾರದಲ್ಲಿ ಇದೆ. 2019ರಲ್ಲಿ ನಡೆದಿದ್ದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಜಗನ್ಮೋಹನ ರೆಡ್ಡಿ ನೇತೃತ್ವದ ಪಕ್ಷ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿತ್ತು. ಅದೇ ಗುಂಗಿನಲ್ಲಿ ಇರುವ ದಿ.ವೈ.ಎಸ್‌.ರಾಜಶೇಖರ ರೆಡ್ಡಿ ಪುತ್ರ 2ನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿಯುವ ಇರಾದೆ ಹೊಂದಿದ್ದಾರೆ.

2019ರ ವಿಧಾನಸಭೆ ಚುನಾವಣೆಯಲ್ಲಿ ವೈ ಎಸ್‌ ಆರ್‌ ಸಿಪಿ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗಾಗಿಸಿ 175 ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಅಧಿಕಾರದಲ್ಲಿ ಇದ್ದ ಟಿಡಿಪಿ ಕೇವಲ 23 ಕ್ಷೇತ್ರಗಳಲ್ಲಿ ದಯನೀಯ ಸ್ಥಿತಿ ತಲುಪಿತ್ತು. ನಟ ಕೆ. ಪವನ್‌ ಕಲ್ಯಾಣ್‌ ರ ಜನಸೇನಾ ಪಕ್ಷ 137 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 1 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್‌, ಬಿಜೆಪಿ, ಸಿಪಿಐ, ಸಿಪಿಎಂ ಧೂಳೀಪಟವಾಗಿದ್ದವು.

ರಾಜಕೀಯ ಲೆಕ್ಕಾಚಾರ: ಬಾರಿಯ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆ ವಿಚಾರದಲ್ಲಿಯೇ ಹೆಚ್ಚು ಸುದ್ದಿ ಯಾಗುತ್ತಿದೆ. ನೆಲೆ ಕಳೆದು ಕೊಂಡಿ ರುವ ಕಾಂಗ್ರೆಸ್‌, ನೆಲೆ ಹುಡುಕುತ್ತಿರುವ ಬಿಜೆಪಿ, ಬಲ ಕಳೆದು ಕೊಂಡಿರುವ ಕಾಂಗ್ರೆಸ್‌ ಗೆ ಮತ್ತೆ ಪ್ರವರ್ಧಮಾನಕ್ಕೆ ಬರಲು ಪ್ರಧಾನ ಅವ ಕಾಶವಾಗಿದೆ. ನರೇಂದ್ರ ಮೋದಿಯವರ ವಿರುದ್ಧ ಸಿಡಿದು ನಿಂತು ಎನ್‌ ಡಿಎಯಿಂದ 2019ರ ಚುನಾವಣೆಯಲ್ಲಿ ಹೊರ ಬಂದಿದ್ದ ಚಂದ್ರಬಾಬು ನಾಯ್ಡು ಮತ್ತೆ ಅತ್ತೂ ಕರೆದು ಮೈತ್ರಿಕೂಟ ಸೇರ್ಪಡೆಗೊಂಡಿದ್ದಾರೆ.

25 ಲೋಕಸಭಾ ಕ್ಷೇತ್ರಗಳ ಪೈಕಿ 17ರಲ್ಲಿ ಟಿಡಿಪಿ, 6ರಲ್ಲಿ ಬಿಜೆಪಿ, ಜನಸೇನಾ ಪಕ್ಷಕ್ಕೆ 2 ಕ್ಷೇತ್ರ ಗಳನ್ನು ಬಿಟ್ಟುಕೊಡಲಾಗಿದೆ. ಇನ್ನು ಕಾಂಗ್ರೆಸ್‌ ವಿಚಾರಕ್ಕೆ ಬರುವುದಾದರೆ ಪಕ್ಷದ ಪ್ರಬಲ ನಾಯಕನಾಗಿದ್ದ ದಿ.ವೈ.ಎಸ್‌.ರಾಜಶೇಖರ ರೆಡ್ಡಿ ಪುತ್ರಿ ವೈ,ಎಸ್‌.
ಶರ್ಮಿಳಾರನ್ನು ಮರಳಿ ಪಕ್ಷಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದೆ. ಅವರಿಗೆ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನವನ್ನು ನೀಡಿ ರಾಜಶೇಖರ ರೆಡ್ಡಿ ಅವಧಿಯ ವೈಭವ ಕಾಣಲು ಕಾಂಗ್ರೆಸ್‌ ಮುಂದಾಗಿದೆ. ಜತೆಗೆ ಕಡಪಾ ಲೋಕಸಭಾ ಕ್ಷೇತ್ರದಿಂದ ವೈ,ಎಸ್‌.ಶರ್ಮಿಳಾ ಅವರೇ ಸ್ಪರ್ಧಿಸುತ್ತಿದ್ದಾರೆ. ಒಂದರ್ಥದಲ್ಲಿ ಕಾಂಗ್ರೆಸ್‌ ವರಿಷ್ಠರು ವೈ.ಎಸ್‌ ಆರ್‌ ಕುಟುಂಬದ ನಡುವೆಯೇ ಸ್ಪರ್ಧೆ ತಂದಿಟ್ಟಿದ್ದಾರೆ. ಇನ್ನು ಆಡಳಿತಾರೂಢ ವೈ.ಎಸ್‌ .ಆರ್‌. ಕಾಂಗ್ರೆಸ್‌ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರ ಜಾರಿಗೆ
ತಂದಿರುವ ಜನ ಮರುಳು ಯೋಜನೆಗಳ ಯಶಸ್ಸಿನ ಗುಂಗಿನಲ್ಲಿಯೇ ಇದೆ. ಜತೆಗೆ ಈ ಬಾರಿಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ನವರತ್ನ ಯೋಜನೆಯನ್ನೇ ಅವಲಂಬಿಸಿದೆ. ರೈತ ಭರವಸೆ ಯೋಜನೆಯಡಿ 13500 ರೂ. ಇರುವ ಮೊತ್ತವನ್ನು 16000 ರೂ. ಗೆ, ತಾಯಂದಿರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರೋತ್ಸಾಹ ಧನವನ್ನು 15000 ರೂ. ಗಳಿಂದ 17000 ರೂ.ಗಳಿಗೆ ಏರಿಸುವ ಭರವಸೆ ನೀಡಿದ್ದಾರೆ.

Advertisement

ಹಿಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಮಂಡಳಿ ಯಲ್ಲಿ ನಡೆದಿದೆ ಎಂದು ಆರೋಪಿಸ ಲಾಗಿರುವ ಪ್ರಕರಣದಲ್ಲಿ ನಾಯ್ಡು ಬಂಧನವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದೆ. ಕಳೆದ ವರ್ಷ‌ದ ಸೆಪ್ಟೆಂಬರ್‌ ನಲ್ಲಿ ಅವರನ್ನು ಬಂಧಿಸಿದ್ದಾಗ ಟಿಡಿಪಿ ಆಂಧ್ರಪ್ರದೇಶದಾದ್ಯಂತ ಬೀದಿ ಗಿಳಿದು ಪ್ರತಿಭಟನೆ ನಡೆಸಿತ್ತು. ಇದರ ಜತೆಗೆ ಮುಸ್ಲಿಂ ಸಮುದಾಯಕ್ಕೆ ಶೇ.4 ಮೀಸಲು ನೀಡುವ ವಿಚಾರವೂ ಆಗಾಗ ಸದ್ದು ಮಾಡಿದೆ. ಬಿಜೆಪಿ ಮಿತ್ರ ಪಕ್ಷ ಟಿಡಿಪಿಯಂತೂ ಶೇ.4 ಮುಸ್ಲಿಂ ಮೀಸಲು ಜಾರಿಯಲ್ಲಿ ಇರಲಿದೆ ಎಂದಿದೆ.

ಇದರ ಜತೆಗೆ 71 ವರ್ಷದ ಚಂದ್ರ ಬಾಬು ನಾಯ್ಡು ಇದು ನನ್ನ ಕೊನೆಯ ಚುನಾವಣೆ ಎನ್ನುವ ಮೂಲಕ ಭಾವನಾತ್ಮಕ ಬಾಣ ಎಸೆಯಲು ಮುಂದಾಗಿದ್ದಾರೆ. ಇದರ ಜತೆಗೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಕ್ಕೆ ಎಂದು 3 ರಾಜಧಾನಿಗಳ ಅಭಿವೃದ್ಧಿ ವಿಚಾರವೂ ಚರ್ಚೆಯಲ್ಲಿದೆ.

ಜಾತಿ ಲೆಕ್ಕಾಚಾರ: ಆಂಧ್ರಪ್ರದೇಶ 4.98 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಈ ಪೈಕಿ ಹಿಂದುಳಿದ ವರ್ಗದವರ ಪ್ರಮಾಣವೇ ಶೇ.37 ಮಂದಿ ಇದ್ದಾರೆ. ಕಮ್ಮ ಸಮುದಾಯ ಶೇ,5, ರೆಡ್ಡಿಗಳು ಶೇ.5, ಮುಸ್ಲಿಂ ಸಮುದಾಯದವರು ಶೇ.7 ಮಂದಿ ಇದ್ದಾರೆ, ವಿಧಾನಸಭೆ ಚುನಾವಣೆಯಲ್ಲಿ ಜಗನ್‌ ಪಕ್ಷ 49 ರೆಡ್ಡಿಗಳಿಗೆ, ಎನ್‌ಡಿಎ 39 ಕಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಿದೆ.ಇದರ ಜತೆಗೆ 41 ಮಂದಿ ಹಿಂದುಳಿದ ವರ್ಗಕ್ಕೆ, 7 ಮಂದಿ ಮುಸ್ಲಿಮರಿಗೆ ವೈಎಸ್‌ಆರ್‌ಸಿಪಿ ಟಿಕೆಟ್‌ ನೀಡಿದೆ.

ಚುನಾವಣಾ ವಿಚಾರ
1)ಮುಸ್ಲಿಂ ಸಮುದಾಯಕ್ಕೆ ಶೇ.4 ಮೀಸಲು ವಿಚಾರಕ್ಕೆ ಬಿಜೆಪಿ ವಿರೋಧ. ಆದರೆ, ಬಿಜೆಪಿ ಮಿತ್ರಪಕ್ಷ ಟಿಡಿಪಿ, ವೈ ಎಸ್‌ ಆರ್‌ ಕಾಂಗ್ರೆಸ್‌ನಿಂದ ಅದನ್ನು ಮುಂದುವರಿಸುವ ವಾಗ್ಧಾನ.

2)ಚಂದ್ರಬಾಬು ನಾಯ್ಡು ಬಂಧನದ ವಿಚಾರವನ್ನು ಈ ಚುನಾವಣೆಯಲ್ಲಿ ಪ್ರಮುಖ ವಸ್ತುವನ್ನಾಗಿಸಿಕೊಳ್ಳಲು ಟಿಡಿಪಿ ಮತ್ತು ವೈಎಸ್‌ಆರ್‌ ಪಕ್ಷದಿಂದ ಪ್ರಯತ್ನ.

3)ಕಾಂಗ್ರೆಸ್‌ನಿಂದ ಆಂಧ್ರಪ್ರದೇಶಕ್ಕೆ ನೀಡಬೇಕಾಗಿರುವ ವಿಶೇಷ ಸ್ಥಾನಮಾನದ ಭರವಸೆಯ ಬಗ್ಗೆ ಪ್ರಸ್ತಾಪ. ಜತೆಗೆ ಅದನ್ನು
ಪಡೆದುಕೊಳ್ಳುವಲ್ಲಿ ಜಗನ್ಮೋಹನ ರೆಡ್ಡಿ ಸರ್ಕಾರ ವಿಫಲವಾಗಿದೆ ಎಂದು ಆರೋಪ.

4)ಮತ ಸೆಳೆಯುವ ಯೋಜನೆಗಳ ಜಾರಿಗಳ ಕುರಿತು ವೈ ಎಸ್‌ ಆರ್‌ ಕಾಂಗ್ರೆಸ್‌ ಪ್ರತಿಪಾದಿಸಿದರೆ, ಸರ್ಕಾರದ ವೈಫ‌ಲ್ಯಗಳ ಕುರಿತು
ಪ್ರತಿಪಕ್ಷಗಳು ಪ್ರಮುಖವಾಗಿ ಪ್ರಸ್ತಾಪಿಸುತ್ತಿವೆ.

*ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next