ಆಂಧ್ರ ಪ್ರದೇಶ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸ್ವಾಮೀಜಿಯೊಬ್ಬರನ್ನು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ವಿಶಾಖಪಟ್ಟಣದ ವೆಂಕೋಜಿಯಲ್ಲಿರುವ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಪೂರ್ಣಾನಂದ ಸರಸ್ವತಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಅಪ್ಪ – ಅಮ್ಮನನ್ನು ಕಳೆದುಕೊಂಡ 15 ವರ್ಷದ ಅಪ್ರಾಪ್ತೆಯನ್ನು ಆಕೆಯ ಸಂಬಂಧಿಕರು ಜ್ಞಾನಾನಂದ ಆಶ್ರಮದಲ್ಲಿ ಎರಡು ವರ್ಷದ ಹಿಂದೆ ಬಿಟ್ಟು ಹೋಗಿದ್ದರು. ಬಾಲಕಿಗೆ ಸ್ವಾಮೀಜಿ ಕಿರುಕುಳವನ್ನು ನೀಡಿ ಆಕೆ ಮೇಲೆ ನಿರಂತರವಾಗಿ ದೈಹಿಕ ದೌರ್ಜನ್ಯವೆಸಗಿದ್ದಾರೆ. ಸ್ವಾಮೀಜಿಯ ಕಿರುಕುಳವನ್ನು ಸಹಿಸದೆ ಬಾಲಕಿ ಅಲ್ಲಿಂದ ವಿಜಯವಾಡಕ್ಕೆ ಓಡಿ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ಘಟನೆ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಬಾಲಕಿ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ್ದು, ಪೂರ್ಣಾನಂದ ಸರಸ್ವತಿ ಅವರನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡು, ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿ ವಿವೇಕಾನಂದ ತಿಳಿಸಿದ್ದಾರೆ.
“ಪೂರ್ಣಾನಂದ ಸರಸ್ವತಿ ಅವರು ಕಳೆದ ಹಲವು ತಿಂಗಳುಗಳಿಂದ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿಗೆ ಪೋಷಕರಿಲ್ಲದ ಕಾರಣ ಆಕೆಯ ಪರಿಸ್ಥಿತಿಯನ್ನು ಲಾಭವಾಗಿಸಿಕೊಂಡು ಈ ಕೃತ್ಯವನ್ನು ಎಸೆಯಲಾಗಿದೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಶೀಘ್ರದಲ್ಲೇ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.