ವಿಶಾಖಪಟ್ಟಣಂ: ಇಲ್ಲಿನ ಆರ್.ಆರ್. ವೆಂಕಟಪುರಂ ಗ್ರಾಮದಲ್ಲಿರುವ ಎಲ್.ಜಿ. ಪಾಲಿಮರ್ಸ್ ಘಟಕದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಡೆಡ್ಲಿ ಸ್ಟೈರಿನ್ ಅನಿಲ ಸೋರಿಕೆಯುಂಟಾಗಿ ಆ ಪರಿಸರದಲ್ಲಿನ ಜನರ ಮೇಲೆ ಹಾಗೂ ಪ್ರಾಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಸುಮಾರು 11 ಜನರು ಮೃತಪಟ್ಟರೆ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದ್ದಕ್ಕಿದ್ದಂತೆ ಪರಿಸರದಲ್ಲಿ ಕೆಟ್ಟ ಅನಿಲದ ವಾಸನೆ ಹರಡಿ ಜನರಿಗೆ ಉಸಿರಾಡಲು ಕಷ್ಟಕರವಾದ ಮತ್ತು ಕಣ್ಣುರಿ, ಮೈ ತುರಿಕೆಯಂತಹ ಪ್ರಕರಣಗಳು ಕಾಣಿಸಿಕೊಳ್ಳತೊಡಗುತ್ತಿದ್ದಂತೆ ಜನರೆಲ್ಲಾ ನಿದ್ದಗಣ್ಣಿನಲ್ಲೇ ತಮ್ಮ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ, ಉಸಿರಾಟ ನಡೆಸಲಾಗದವರು ರಸ್ತೆ ರಸ್ತೆಯಲ್ಲೇ ಕುಸಿದುಬಿದ್ದಿದ್ದಾರೆ.
ಈ ನಡುವೆ ಸಂಕಷ್ಟಗೊಳಗಾದ ಜನರಿಗೆ ಸೂಕ್ತ ಸುರಕ್ಷತಾ ಕ್ರಮಗಳ ಮಾಹಿತಿಯನ್ನು ನೀಡಲು ಆಂಧ್ರಪ್ರದೇಶ ಪೊಲೀಸರು ಕೆಲವೊಂದು ಟಿಪ್ಸ್ ಗಳನ್ನು ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಪ್ರಕಟಿಸಿದರು. ಈ ವಿಧಾನ ಇದೀಗ ‘ಮಿಲ್ಸ್ ಆ್ಯಂಡ್ ಬನಾನ’ ಫಾರ್ಮುಲ ಎಂದೇ ಕರೆಯಲ್ಪುಡುತ್ತಿದೆ.
ಹಾಲು, ಬಾಳೆಹಣ್ಣು ಹಾಗೂ ಬೆಲ್ಲ ಸೇವನೆಯು ವಿಷಾನಿಲದ ಪ್ರಭಾವವನ್ನು ದೇಹದಲ್ಲಿ ಕಡಿಮೆಗೊಳಿಸುತ್ತದೆ. ಈ ಸಂದರ್ಭದಲ್ಲಿ ಮನೆಯ ಒಳಗೂ ಮಾಸ್ಕ್ ಗಳನ್ನು ಧರಿಸಿಕೊಳ್ಳುವಂತೆ ಪೊಲೀಸರು ವಿನಂತಿಸಿಕೊಂಡಿದ್ದಾರೆ.