Advertisement

TB Dam ಕಳಚಿಬಿದ್ದ ಟಿಬಿ ಡ್ಯಾಂ ಗೇಟ್‌: ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್‌ ತುಂಡು

01:08 AM Aug 12, 2024 | Team Udayavani |

ಕೊಪ್ಪಳ: ಬಯಲು ಸೀಮೆಯ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ(ಟಿಬಿ ಡ್ಯಾಂ)ದ 19ನೇ ಕ್ರಸ್ಟ್‌ಗೇಟ್‌ನ ಚೈನ್‌ ಕಡಿದುಹೋಗಿ ಇಡೀ ಗೇಟ್‌ ಮುರಿದು ಬಿದ್ದು ಭಾರೀ ಅನಾಹುತ ಸಂಭವಿಸಿದೆ. ತುಂಬಿ ತುಳುಕುತ್ತಿರುವ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಉಕ್ಕಿಹರಿಯುತ್ತಿದ್ದು, ಅಪಾಯ ಎದುರಾಗಿದೆ. ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್‌, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರವಿವಾರ ಸ್ಥಳಕ್ಕೆ ದೌಡಾಯಿಸಿ ತಜ್ಞರ ಜತೆ ಸಭೆ ನಡೆಸಿದ್ದು, ಹೊಸ ಗೇಟ್‌ ಸಿದ್ಧಪಡಿಸುವಂತೆ ಆದೇಶಿಸಿದ್ದಾರೆ.

Advertisement

ಶನಿವಾರ ತಡರಾತ್ರಿ 11 ಗಂಟೆ ವೇಳೆಗೆ ಡ್ಯಾಂನ 19ನೇ ಗೇಟ್‌ನ ಸರಪಳಿ ಕಡಿದು ಗೇಟ್‌ ಸಂಪೂರ್ಣ ಕಿತ್ತು ಹೋಗಿದೆ. ಪರಿಣಾಮವಾಗಿ ಜಲಾಶಯವೇ ಅಪಾಯಕ್ಕೆ ಸಿಲುಕಿದೆ. ಜಲಾಶಯದ ನೀರನ್ನು ಅವಲಂಬಿಸಿರುವ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಬೃಹತ್‌ ರೈತ ಸಮೂಹದಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ತುಂಗಭದ್ರಾ ಜಲಾಶಯ ಒಟ್ಟು 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ 33 ಟಿಎಂಸಿಯಷ್ಟು ಹೂಳು ತುಂಬಿರುವ ಕಾರಣ ಪ್ರಸ್ತುತ 100 ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹ ಸಾಮರ್ಥ್ಯವಿದೆ.

ಮಲೆನಾಡು ಭಾಗದಲ್ಲಿ ಮುಂಗಾರು
ಮಳೆ ಭರ್ಜರಿಯಾಗಿ ಸುರಿದ ಪರಿ ಣಾಮ ತುಂಗಭದ್ರೆಗೆ ಕೇವಲ ಒಂದೇ ವಾರದಲ್ಲಿ ಅಪಾರ ಪ್ರಮಾಣದ ನೀರುಹರಿದು ಬಂದು ಜಲಾಶಯ ಭರ್ತಿ ಯಾಗಿತ್ತು. ಅಲ್ಲದೇ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿತ್ತು.

ಏನಾಯಿತು? ಆಂಧ್ರ, ತೆಲಂಗಾಣ, ಕರ್ನಾಟಕ ರಾಜ್ಯಗಳ ವ್ಯಾಪ್ತಿಯ ಜನರಿಗೆ ನೀರೊದಗಿಸುವ ಟಿಬಿ ಡ್ಯಾಂನಲ್ಲಿ ಶನಿವಾರ ರಾತ್ರಿ 11 ಗಂಟೆ ವೇಳೆಗೆ ಏಕಾಏಕಿ ಚೈನ್‌ ತುಂಡಾದ ಸದ್ದು ಕೇಳಿಸಿತ್ತು. ಇದನ್ನು ಗಮನಿಸಿದ ಅಲ್ಲಿನ ಸಿಬಂದಿ ಕ್ರಸ್ಟ್‌ ಗೇಟ್‌ಗಳನ್ನು ಪರಿಶೀಲಿಸಿದರು. ಆಗ 19ನೇ ಗೇಟ್‌ನಲ್ಲಿ ಚೈನ್‌ ತುಂಡಾಗಿರುವುದು ಗಮನಕ್ಕೆ ಬಂತು. ತತ್‌ಕ್ಷಣ ಅವರು ಜಲಾಶಯ ನಿರ್ವಹಣೆಯ ಹೊಣೆ ಹೊತ್ತಿರುವ ತುಂಗಭದ್ರಾ ಬೋರ್ಡ್‌ಗೆ ಮಾಹಿತಿ ನೀಡಿದರು.

Advertisement

ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಸಚಿವ ಶಿವರಾಜ ತಂಗಡಗಿ ಸಹಿತ ಸರಕಾರದ ಹಿರಿಯ ಅಧಿ ಕಾರಿಗಳಿಗೆ ಮಾಹಿತಿ ರವಾನಿಸಿದರು.

ಅಧಿಕಾರಿಗಳ ಮಾಹಿತಿ ಬೆನ್ನಲ್ಲೇ ರಾತ್ರಿ 12.30ರ ಸುಮಾರಿಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ರಾತ್ರಿ 3 ಗಂಟೆಗೆ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಥಳಕ್ಕೆ ಆಗಮಿಸಿ ಡ್ಯಾಂ ಗೇಟ್‌ ಮುರಿದು ಅಪಾಯಕರ ಸ್ಥಿತಿ ಏರ್ಪಟ್ಟಿರುವುದನ್ನು ಗಮನಿಸಿದರು. ತತ್‌ಕ್ಷಣ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಬೋರ್ಡ್‌ನ ಕಾರ್ಯದರ್ಶಿ, ಹಿರಿಯ ಅಧಿ ಕಾರಿಗಳು ಹಾಗೂ ಡ್ಯಾಂ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದರು. ನದಿ ಪಾತ್ರದ ಕೆಳ ಭಾಗದ ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಡಂಗುರ ಸಾರಿಸಲು ಸೂಚನೆ ನೀಡಿದರು.

ರಾತೋರಾತ್ರಿ ನದಿಗೆ ನೀರು
ಮುರಿದ 19ನೇ ಗೇಟ್‌ನಿಂದ 35 ಸಾವಿರ ಸಾವಿರ ಕ್ಯುಸೆಕ್‌ನಷ್ಟು ನೀರು ನದಿ ಸೇರುತ್ತಿದ್ದು, ಈ ಗೇಟ್‌ಗೆ ಅತಿಯಾದ ಒತ್ತಡ ಬಿದ್ದ ಕಾರಣ ಇಡೀ ಅಣೆಕಟ್ಟಿಗೆ ಅಪಾಯ ಎದುರಾಗಿದೆ. ಹೀಗಾಗಿ ತತ್‌ಕ್ಷಣ ಎಲ್ಲ 32 ಗೇಟ್‌ಗಳ ಮೂಲಕ ನದಿ ಪಾತ್ರಕ್ಕೆ ಒಂದು ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿಬಿಡಲು ನಿರ್ಧರಿಸಲಾಗಿದೆ. ಇತರ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಿ 19ನೇ ಗೇಟ್‌ನ ಒತ್ತಡ ನಿಯಂತ್ರಣಕ್ಕೆ ಸಾಹಸ ಪಟ್ಟಿದ್ದಾರೆ.

ಡಿಸಿಎಂ ದೌಡು,
ತಜ್ಞರ ಜತೆ ಚರ್ಚೆ
ಡಿಸಿಎಂ ಡಿ.ಕೆ. ಶಿವಕುಮಾರ್‌ ಅಣೆಕಟ್ಟಿನ ವಸ್ತುಸ್ಥಿತಿ ಅರಿಯಲು ರವಿವಾರ ತಮ್ಮೆಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸ್ಥಳಕ್ಕೆ ದೌಡಾಯಿಸಿ 19ನೇ ಗೇಟ್‌ ಮುರಿದಿರುವ ಸ್ಥಿತಿಯನ್ನು ಅವಲೋಕಿಸಿದರು. ಹೈದರಾಬಾದ್‌, ಮುಂಬಯಿ ಮತ್ತು ಬೆಂಗಳೂರಿನ ಅನುಭವಿ ತಜ್ಞರು ಹಾಗೂ ಬೋರ್ಡ್‌ ನ ಹಿರಿಯ ಅಧಿ ಕಾರಿಗಳ ಜತೆ ಸಮಾಲೋಚಿಸಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದಾರೆ.

ಏನೇನು ಕ್ರಮ?
-ಟಿಬಿ ಅಣೆಕಟ್ಟಿನ ಎಲ್ಲ 33 ಗೇಟ್‌ಗಳ ಮೂಲಕ 1 ಲಕ್ಷ ಕ್ಯುಸೆಕ್‌ ನೀರು ಹೊರಗೆ
– ಇಂದು ಹೈದರಾಬಾದ್‌, ಮುಂಬಯಿಯಿಂದ ಪರಿಣತರ ತಂಡ ಆಗಮನ
– ಹೊಸ ಗೇಟ್‌ ಸಿದ್ಧಪಡಿಸಲು ಸರಕಾರ ಆದೇಶ. ಅಳವಡಿಕೆಗೆ ಬೇಕು 2 ದಿನ
– ಹೊಸ ಗೇಟ್‌ ಅಳವಡಿಸಬೇಕಾದರೆ 60 ಅಡಿ ನೀರು ಹೊರಹಾಕಬೇಕಾದ ಅನಿವಾರ್ಯ
– ನಾರಾಯಣ ಎಂಜಿನಿಯರ್ಸ್‌ ಸಂಸ್ಥೆಗೆ ಹೊಸ ಗೇಟ್‌ ಅಳವಡಿಕೆ ಹೊಣೆ

ಗೇಟ್‌ ಮುರಿಯಲು ಕಾರಣ ಏನು?
ಅಣೆಕಟ್ಟಿನ 33 ಕ್ರಸ್ಟ್‌ಗೇಟ್‌ಗಳನ್ನು ಪ್ರತೀ ವರ್ಷ ಜಲಾಶಯಕ್ಕೆ ನೀರು ಬರುವ ಪೂರ್ವದಲ್ಲಿ ತಜ್ಞರ ತಂಡ ಪರೀಕ್ಷಿಸುತ್ತದೆ. ಗೇಟ್‌ಗಳಿಗೆ ಗ್ರೀಸಿಂಗ್‌ ಮಾಡಲಾಗುತ್ತದೆ. ಆದರೆ ಅಣೆಕಟ್ಟು ನಿರ್ಮಿಸಿ 69 ವರ್ಷಕ್ಕೂ ಅಧಿಕ ಕಾಲ ಗತಿಸಿದ್ದು, ಚೈನ್‌ಗಳ ಶಕ್ತಿ ಕುಗ್ಗಿದೆ. ಇದರಿಂದ ನೀರಿನ ಒತ್ತಡ ತಡೆಯುವ ಸಾಮರ್ಥ್ಯ ಕ್ಷೀಣವಾಗಿ ಚೈನ್‌ ತುಂಡಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಜಲಾಶಯ ನಿರ್ಮಾಣಗೊಂಡ ಬಳಿಕ ಈವರೆಗೆ ಚೈನ್‌ಗಳನ್ನು ಬದಲಾವಣೆ ಮಾಡಿಲ್ಲ. ಹೀಗಾಗಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ 100ಕ್ಕೂ ಅಧಿಕ ಟಿಎಂಸಿ ನೀರಿನ ಒತ್ತಡ ತಡೆಯಲಾಗದೆ ಚೈನ್‌ ತುಂಡಾಗಿ ಗೇಟ್‌ ಮುರಿದಿದೆ ಎನ್ನಲಾಗಿದೆ. ಇದರಲ್ಲಿ ಅಧಿ ಕಾರಿಗಳು ಹಾಗೂ ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ತುಂಗಭದ್ರಾಜಲಾಶಯದ 19ನೇ ಗೇಟ್‌ ಸಹಿತ ಜಲಾಶಯದ ಎಲ್ಲ ಗೇಟ್‌ಗಳ ದುರಸ್ತಿಗಾಗಿ ನಾರಾಯಣ ಎಂಜಿನಿಯರ್ಸ್‌, ಜೆಎಸ್‌ಡಬ್ಲ್ಯು ಸಹಿತ ಪರಿಣತರನ್ನು ಸಂಪರ್ಕಿಸಲಾಗಿದೆ. ಹಳೆಯ ಮಾದರಿ ರೂಪಿಸಿದವರೂ ಆಗಮಿಸಲಿ ದ್ದಾರೆ. ನೀರಾವರಿ ಇಲಾಖೆಯ ಪರಿಣತರ ತಂಡವೂ ಆಗಮಿಸಲಿದೆ. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ.
-ಡಿ.ಕೆ. ಶಿವಕುಮಾರ್‌,
ಡಿಸಿಎಂ, ಜಲಸಂಪನ್ಮೂಲ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next