ಅಖಂಡ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ರಾಜ್ಯ ರೂಪುಗೊಂಡ ಬಳಿಕ ಉಳಿದುಕೊಂಡಿರುವ ಹಳೆಯ ಆಂಧ್ರಪ್ರದೇಶ ವಿಧಾನಸಭೆಗೆ ಇದು ಎರಡನೇ ವಿಧಾನಸಭೆ ಚುನಾವಣೆ.
2014ರಲ್ಲಿ ಹೊಸ ರಾಜ್ಯ ರಚನೆ, ಕಾಂಗ್ರೆಸ್‌ನಲ್ಲಿ ಸೂಕ್ತ ನಾಯಕರು ಇಲ್ಲದೇ ಇದ್ದದ್ದು ಟಿಡಿಪಿಗೆ ಧನಾತ್ಮಕವಾಗಿ ಪರಿಣಮಿಸಿತ್ತು. ಇದರ ಜತೆಗೆ ತೆಲುಗು ದೇಶಂ ಪಕ್ಷ “ಬ್ರಿಂಗ್ ಬ್ಯಾಕ್ ಬಾಬು’ ಅಥವಾ ಮತ್ತೂಮ್ಮೆ ನಾಯ್ಡು ಅವರನ್ನು ಗೆಲ್ಲಿಸಿ ಎಂಬ ಧ್ಯೇಯ ವಾಕ್ಯದ ಜತೆಗೆ ಯೋಜನಾತ್ಮಕವಾಗಿ ಪ್ರಚಾರ ನಡೆಸಿದ್ದು ಗೆಲ್ಲಲು ಅನುಕೂಲವಾಗಿ ಪರಿಣಮಿಸಿತ್ತು. ಆದರೆ ಆ ಹಿತಾನುಭವ ಈಗ ಇಲ್ಲವಾಗಿದೆ ಎಂಬ ಅಂಬೋಣ ವ್ಯಕ್ತವಾಗುತ್ತಿದೆ.
ಸದ್ಯ ಪ್ರತಿಪಕ್ಷ ನಾಯಕ ವೈ.ಎಸ್.ಜಗನ್ಮೋಹನ ರೆಡ್ಡಿ ಕೂಡ ಪ್ರಬಲವಾಗಿಯೇ ಬೆಳೆದಿದ್ದಾರೆ. 2014ರ ನಂತರದ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕರು ಕಾಣುತ್ತಿಲ್ಲ. ಹೀಗಾಗಿ, ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಪುತ್ರ ವೈ.ಎಸ್.ಜಗನ್ಮೋಹನ ರೆಡ್ಡಿ ಕಾಂಗ್ರೆಸ್‌ನಿಂದ ಸಿಡಿದು 2009ರಲ್ಲಿ ಹೊಸ ಪಕ್ಷ ರಚಿಸಿದ್ದರು. ಹತ್ತು ವರ್ಷಗಳ ಅವಧಿ ಯಲ್ಲಿ ಜಗನ್‌ರೆಡ್ಡಿ ಎಲ್ಲಾ ಪಕ್ಷಗಳಿಗೆ ಸವಾಲು ಹಾಕುವ ರೀತಿಯಲ್ಲಿ ಬೆಳೆದದ್ದು ಸಾಧನೆಯೇ. ಏಕೆಂದರೆ ಆಂಧ್ರಪ್ರದೇಶದ ರಾಜಕೀಯ ಮತ್ತು ಸಿನಿಮಾ ಕ್ಷೇತ್ರಕ್ಕೆ ಬಿಡಲಾಗದ ಬಾಂಧವ್ಯ. ಆ ನೆರಳಿನಲ್ಲಿಯೇ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಸ್ಥಾಪನೆ ಮಾಡಿದರೂ, ಮತ್ತೂಬ್ಬ ಎನ್‌ಟಿಆರ್ ಆಗಲಿಲ್ಲ. ಹೀಗಾಗಿ, 2009ರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಸ್ಥಾಪಿಸಿ, 70 ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿದ್ದು ಹಾಲಿ ರಾಜಕೀಯದ ಪಡಸಾಲೆಯಲ್ಲಿ ಸಾಧನೆ ಎಂದೇ ಪರಿಗಣಿಸಬೇಕಾಗುತ್ತದೆ. ಹೀಗಾಗಿ, ಆಂಧ್ರಪ್ರದೇಶದಲ್ಲಿ ಏನಿದ್ದರೂ ಚಂದ್ರಬಾಬು ನಾಯ್ಡು ವರ್ಸಸ್ ಜಗನ್ಮೋಹನ ರೆಡ್ಡಿ. ಇಷ್ಟು ಮಾತ್ರವಲ್ಲ ಆಡಳಿತಾರೂಢ ಟಿಡಿಪಿಗೆ ಹಿನ್ನಡೆ ಎಂಬಂತೆ ಒಂಗೋಲ್, ಗುಂಟೂರು, ವಿಶಾಖಪಟ್ಟಣ, ಎಲೂರು ಜಿಲ್ಲೆ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಂದ 1,100 ಮಂದಿ ನಾಯಕರು ವೈ.ಎಸ್.ಆರ್.ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಚುನಾವಣೆ ವೇಳೆ ಇಂಥ ಪಕ್ಷಾಂತರ ಸಾಮಾನ್ಯವಾದರೂ, ಕಾಂಗ್ರೆಸ್ ಅಥವಾ ಬಿಜೆಪಿಗೆ ಸೇರ್ಪಡೆಯಾಗದೆ, ರಾಜಶೇಖರ ರೆಡ್ಡಿ ಪುತ್ರನ ಪಕ್ಷದತ್ತ ಆಕರ್ಷಣೆಯಾದದ್ದು ಪ್ರಧಾನ ಅಂಶ.
ಆಂಧ್ರಪ್ರದೇಶ ವಿಭಜನೆಯಾಗಿ ಐದು ವರ್ಷಗಳು ಕಳೆಯುತ್ತಿದ್ದರೂ, ಈ ಲೋಕಸಭೆ ಮತ್ತು ವಿಧಾನಸಭೆಗೆ ಅದು ಪ್ರಧಾನವಾಗಿರುವ ಅಂಶ. ಟಿಡಿಪಿ ಅಧ್ಯಕ್ಷ ನರಾ ಚಂದ್ರಬಾಬು ನಾಯ್ಡು “ಆಂಧ್ರಪ್ರದೇಶಕ್ಕೆ ಎನ್‌ಡಿಎ ಸರ್ಕಾರ ವಿಶೇಷ ಸ್ಥಾನಮಾನ ನೀಡಿಲ್ಲ’, “ನವದೆಹಲಿಗೆ ಹಲವಾರು ಬಾರಿ ಹೋಗಿದ್ದರೂ ಪ್ರಧಾನಿ ಸೇರಿದಂತೆ ಯಾರೂ ಬೇಡಿಕೆಗೆ ಸ್ಪಂದಿಸಲಿಲ್ಲ’ ಎಂದು ಆರೋಪಿಸಿ ಎನ್‌ಡಿಎ ತೊರೆಯುವ ನಿರ್ಧಾರ ಮಾಡಿದ್ದರು. ನಾಯ್ಡು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜಗನ್ಮೋಹನ್ ರೆಡ್ಡಿ ಆರೋಪಿಸುತ್ತಿದ್ದಾರೆ. ರಾಜ್ಯ ವಿಭಜನೆ ವಿಚಾರದ ಜತೆಗೆ ಟಿಡಿಪಿಗೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಮತ್ತೂಬ್ಬ ಪ್ರತಿಸ್ಪರ್ಧಿ. ಹೇಗೆಂದರೆ, ತೆಲುಗು ಭಾಷೆ ಮಾತನಾಡುವವರನ್ನು ರಕ್ಷಿಸುವ ಏಕೈಕ ರಾಜ್ಯ ಆಂಧ್ರಪ್ರದೇಶ. ತೆಲುಗು ಸಂಸ್ಕೃತಿ ರಕ್ಷಣೆ ಟಿಡಿಪಿಯಿಂದಲೇ ಸಾಧ್ಯ ಎಂದು ಬಿಂಬಿಸುತ್ತಾ ಬರುತ್ತಿದೆ. ತಮಾಷೆಯೆಂದರೆ ಆಂಧ್ರಪ್ರದೇಶದ ಬಿರಿಯಾನಿ, ಹುರುಳಿಕಾಳಿನಿಂದ ತಯಾರಿಸುವ ಸೂಪ್ “ಉಲ್ವಲಚಾರು’ ಗೂ ತೆಲಂಗಾಣ ಧಕ್ಕೆ ತರುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ನಾಯ್ಡು ಮತ್ತು ಜಗನ್ಮೋಹನ ರೆಡ್ಡಿ ಬಾರಿ ಆಂಧ್ರಪ್ರದೇಶವನ್ನು ಸುತ್ತಿ “ನಮ್ಮ ಪಕ್ಷಕ್ಕೇ ಮತ ನೀಡಬೇಕು’ ಎಂದು ಕೇಳಿಕೊಂಡಿದ್ದಾರೆ.
ಆರಂಭದಲ್ಲಿ ಮಿತ್ರರಾಗಿದ್ದ ಟಿಡಿಪಿ-ಬಿಜೆಪಿ ಈಗ ರಾಜಕೀಯವಾಗಿ ಪ್ರತ್ಯೇಕ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಟಿಡಿಪಿಗೆ 15, ಬಿಜೆಪಿಗೆ 2, ವೈ.ಎಸ್.ಆರ್.ಕಾಂಗ್ರೆಸ್‌ಗೆ 8 ಸ್ಥಾನಗಳು ಸಿಕ್ಕಿವೆ. ಏ.11ರಂದು ಲೋಕಸಭೆ, ವಿಧಾನಸಭೆಗೆ ಮತದಾನ ನಡೆದರೂ, ಮೇ 23ರ ವರೆಗೆ ಫಲಿತಾಂಶಕ್ಕಾಗಿ ಕಾಯಬೇಕು.
ಪೂರ್ವ ಗೋದಾವರಿಯೇ ಪ್ರಮುಖ
ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ ಕುತೂಹಲಕರ ವಿಚಾರವೊಂದಿದೆ. ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಯಾವ ಪಕ್ಷ ಹೆಚ್ಚಿನ ಸ್ಥಾನ ಗಳಿಸುತ್ತದೆಯೋ ಅದು ಅಧಿಕಾರ ಗದ್ದುಗೆ ಏರುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಅದಕ್ಕೆ ಪೂರಕವೆಂಬಂತೆ 1983ರಲ್ಲಿ ಎನ್.ಟಿ.ರಾಮ ರಾವ್ ತೆಲುಗು ದೇಶಂ ಪಕ್ಷ ಸ್ಥಾಪಿಸಿ ಚುನಾವಣೆ ಎದುರಿಸಿದ್ದ ಸಂದರ್ಭದಲ್ಲಿ 294 ಸ್ಥಾನಗಳ ಪೈಕಿ 201 ಸ್ಥಾನಗಳನ್ನು ಗೆದ್ದಿದ್ದರು. ಈ ಪೈಕಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿಯೇ 21 ಸ್ಥಾನಗಳ ಪೈಕಿ 19ರಲ್ಲಿ ಪಕ್ಷವನ್ನು ಗೆಲ್ಲಿಸಿದ್ದರು. 1985ರ ಚುನಾವಣೆಯಲ್ಲಿ ಅದನ್ನು 20ಕ್ಕೆ ವೃದ್ಧಿಸಿಕೊಂಡಿದ್ದರು. 1989ರಲ್ಲಿ ಕಾಂಗ್ರೆಸ್ ಚುನಾವಣೆ ಗೆದ್ದಾಗ 18, 1994ರಲ್ಲಿ ಟಿಡಿಪಿ 19, 1999ರಲ್ಲಿ 18 ಸ್ಥಾನಗಳನ್ನು ಗೆದ್ದುಕೊಂಡಿದ್ದವು. 2009ರಲ್ಲಿ ಮಾಜಿ ಸಚಿವ ಚಿರಂಜೀವಿ ಪ್ರಜಾರಾಜ್ಯಂ ಸ್ಥಾಪಿಸಿದ್ದರೂ, ಅದು ಹೆಚ್ಚಿನ ಫಲ ಬೀರಲಿಲ್ಲ.