ವಿಜಯವಾಡ : ವಿಭಜಿತ ಆಂಧ್ರ ಪ್ರದೇಶದ ಎರಡನೇ ಮುಖ್ಯಮಂತ್ರಿಯಾಗಿ ಎಸ್ ಜಗನ್ ಮೋಹನ್ ರೆಡ್ಡಿ ಅವರು ಇಂದು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ತತ್‌ಕ್ಷಣವೇ ರಾಜ್ಯದ ಹಿರಿಯ ನಾಗರಿಕರಿಗೆ ತಿಂಗಳಿಗೆ 3,000 ರೂ. ಪಿಂಚಣಿಯನ್ನು ಘೋಷಿಸಿದರು.
ರಾಜ್ಯ ಹಿರಿಯ ನಾಗರಿಕರಿಗಾಗಿರುವ ಈ ಪಿಂಚಣಿ ಯೋಜನೆಯ ಆರಂಭದಲ್ಲಿ ತಿಂಗಳಿಗೆ 2,250 ರೂ. ನೀಡಲಾಗುವುದು, ಮೂರು ವರ್ಷದೊಳಗೆ ಅದನ್ನು 3,000 ರೂ.ಗಳಿಗೆ ಏರಿಸಲಾಗುವುದು ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದರು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ತಾನು ಮೊತ್ತ ಮೊದಲು ಸಹಿ ಹಾಕುವ ಯೋಜನೆಯೇ ರಾಜ್ಯದ ಹಿರಿಯ ನಾಗರಿಕ ಪಿಂಚಣಿ ಯೋಜನೆಯಾಗಿರುತ್ತದೆ ಎಂದವರು ಪ್ರಕಟಿಸಿದರು.
ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ಜಗನ್ ಮೋಹನ್ ರೆಡ್ಡಿ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು.
Related Articles
ಇಂದಿರಾ ಗಾಂಧಿ ಮುನಿಸಿಪಾಲಿಟಿ ಸ್ಟೇಡಿಯಂ ನಲ್ಲಿ ಇಂದು ಗುರುವಾರ ನಡೆದ ಈ ಕಾಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜಗನ್ ಅವರ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಮತ್ತು ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಗಣ್ಯ ಅತಿಥಿಗಳಾಗಿದ್ದರು.