ಅಮರಾವತಿ: ನೆರೆಯ ತೆಲಂಗಾಣದ ಕೆ.ಚಂದ್ರಶೇಖರ ರಾವ್ ಸಂಪುಟದಲ್ಲಿ ಪುತ್ರ ಕೆ.ಟಿ.ರಾಮರಾವ್ ಸಚಿವರಾಗಿರುವಂತೆಯೇ ಆಂಧ್ರಪ್ರದೇಶದ ಸಂಪುಟದಲ್ಲಿಯೂ ಕೂಡ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ನರಾ ಲೋಕೇಶ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರೊಂದಿಗೆ 28ರ ಹರೆಯದ ಅಖೀಲಾ ಪ್ರಿಯಾ ತಮ್ಮ ಹುಟ್ಟಿದ ದಿನದಂದೇ ಸಚಿವೆಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಅವರು ಆಂಧ್ರಪ್ರದೇಶದ ಅತ್ಯಂತ ಕಿರಿಯ ಸಚಿವೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ನಡುವೆ ಟಿಡಿಪಿ ತೆಕ್ಕೆಗೆ ಬಂದ ವೈಎಸ್‌ಆರ್ ಕಾಂಗ್ರೆಸ್‌ನ ನಾಲ್ವರು ಶಾಸಕರಿಗೂ ಸಚಿವ ಸ್ಥಾನ ಕಲ್ಪಿಸಲಾಗಿದೆ. ಅದಕ್ಕಾಗಿ ಹಾಲಿ ಸಂಪುಟದಲ್ಲಿರುವ ಐವರು ಸಚಿವರನ್ನು ಕೈಬಿಡಲಾಗಿದೆ. ಈ ಬೆಳವಣಿಗೆಯಿಂದ ಬೇಸತ್ತಿರುವ ಮಾಜಿ ಸಚಿವ ಬೊಜ್ಜಾಲ ಗೋಪಾಲಕೃಷ್ಣ ರೆಡ್ಡಿ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದು, ಟಿಡಿಪಿ ವಲಯದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.