Advertisement

ಶೂನ್ಯ ಬಂಡವಾಳ ಕೃಷಿಗೆ ಆಂಧ್ರ ಮಾದರಿ​​​​​​​

06:00 AM Jun 30, 2018 | Team Udayavani |

ಹುಬ್ಬಳ್ಳಿ: “ವಿಷಮುಕ್ತ ಕೃಷಿ’ ಉದ್ದೇಶದಿಂದ ಆಂಧ್ರಪ್ರದೇಶ ಸರ್ಕಾರ ಕೈಗೊಂಡಿರುವ “ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ(ಝಡ್‌ಬಿಎನ್‌ಎಫ್)’ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸಾಧಕ-ಬಾಧಕಗಳ ಅಧ್ಯಯನಕ್ಕೆ ಕೃಷಿ ತಜ್ಞರು ಹಾಗೂ  ವಿಜ್ಞಾನಿಗಳ ತಂಡವೊಂದನ್ನು ಆಂಧ್ರಕ್ಕೆ ಕಳುಹಿಸಲು ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ.

Advertisement

ಆಂಧ್ರ ಪ್ರದೇಶ ನೈಸರ್ಗಿಕ ಕೃಷಿ ನೀತಿ ಅಳವಡಿಸಿಕೊಂಡ ಮೊದಲ ರಾಜ್ಯವಾಗಿದ್ದು, 2024ರ ವೇಳೆಗೆ ಅಂದಾಜು 6 ಮಿಲಿಯನ್‌ ರೈತರು ಹಾಗೂ ಸುಮಾರು 8ಲಕ್ಷ ಮಿಲಿಯನ್‌ ಹೆಕ್ಟೇರ್‌ ಭೂಮಿಯಲ್ಲಿ ಈ ಮಾದರಿ ಅನುಷ್ಠಾನಕ್ಕೆ ಯೋಜಿಸಿದೆ. ರಾಜ್ಯದಲ್ಲಿಯೂ ಇದೇ ಮಾದರಿ ಅನುಷ್ಠಾನಕ್ಕೆ ಸಿಎಂ ಕುಮಾರಸ್ವಾಮಿ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. 

ಬೆಂಗಳೂರಿನಲ್ಲಿ ಕಳೆದ ವಾರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಶ್ರಾಂತ ಕುಲಪತಿಗಳು, ಕೃವಿವಿಗಳ ವಿಜ್ಞಾನಿಗಳು ಪಾಲ್ಗೊಂಡಿದ್ದರು. ಅದೇ ಕಾರಣಕ್ಕಾಗಿ, ಆಂಧ್ರಕ್ಕೆ ತಂಡವನ್ನು ಅಧ್ಯಯನಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ತಂಡ ನೀಡುವ ವರದಿಯನ್ವಯ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಝಡ್‌ಬಿಎನ್‌ಎಫ್ ಮಾದರಿ ಅನುಷ್ಠಾನಕ್ಕೆ ಯೋಜಿಸಲಾಗಿದೆ.

ಏನಿದು ಝಡ್‌ಬಿಎನ್‌ಎಫ್ ಮಾದರಿ?:
ಜಪಾನಿನ ಫ‌ುಕವೋಕಾ ಹಾಗೂ ಮಹಾರಾಷ್ಟ್ರದ ಸುಭಾಸ ಪಾಳೇಕಾರ ಅವರು ನೈಸರ್ಗಿಕ ಕೃಷಿಗೆ ತಮ್ಮದೇ ಮಾದರಿ ಹೊಂದಿದ್ದಾರೆ. ಟ್ರ್ಯಾಕ್ಟರ್‌ ಸೇರಿ ಇನ್ನಿತರ ಯಂತ್ರೋಪಕರಣ, ಕ್ರಿಮಿನಾಶಕ, ರಸಗೊಬ್ಬರ ಬಳಸದೇ ನೈಸರ್ಗಿಕವಾಗಿ ಕೃಷಿ ಕೈಗೊಳ್ಳಬೇಕು ಎಂಬುದು ಇವರ ವಾದ. ಸುಭಾಸ ಪಾಳೇಕಾರ ಅವರ ಪದ್ಧತಿಯನ್ನೇ ಮಾದರಿಯಾಗಿಟ್ಟಿಕೊಂಡು, ಆಂಧ್ರಪ್ರದೇಶ ಸರ್ಕಾರ ರಸಗೊಬ್ಬರ ಹಾಗೂ ಕ್ರಿಮಿನಾಶ ಮುಕ್ತ, ಮಿತ ನೀರು ಬಳಕೆಯ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಗೆ ಮುಂದಡಿ ಇರಿಸಿದೆ. 

ಭೂಮಿಯ ಫ‌ಲವತ್ತತೆ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ನೈಸರ್ಗಿಕ ಕೃಷಿ ಪದ್ಧತಿಗೆ ವಿಶ್ವಸಂಸ್ಥೆಯ ಪರಿಸರ ವಿಭಾಗದಿಂದಲೂ ಪ್ರೋತ್ಸಾಹ ಸಿಕ್ಕಿದೆ. ಈಗ ಝಡ್‌ಬಿಎನ್‌ಎಫ್ನಿಂದ ಭೂಮಿಯ ಫ‌ಲವತ್ತತೆ, ಮಣ್ಣಿನ ಜೀವವೈವಿಧ್ಯತೆ ಸಂರಕ್ಷಣೆ ಜತೆಗೆ, ಸಣ್ಣ ಹಿಡುವಳಿದಾರರಿಗೆ ಲಾಭದಾಯಕ ಹಾಗೂ ಉತ್ಪಾದನೆ ಹೆಚ್ಚಳದ ಉದ್ದೇಶದೊಂದಿಗೆ ಈ ಯೋಜನೆಗೆ ಚಿಂತನೆ ನಡೆದಿದೆ.

Advertisement

ರಾಯಲಸೀಮೆಯಲ್ಲಿ ಪ್ರಯೋಗ:
ಆಂಧ್ರಪ್ರದೇಶ ಸರ್ಕಾರ ಜೂ.2ರಂದು ಝಡ್‌ಬಿಎನ್‌ಎಫ್ ಯೋಜನೆ ಅನುಷ್ಠಾನವನ್ನು ಅಧಿಕೃತವಾಗಿ ಘೋಷಣೆ ಮಾಡಿದೆಯಾದರೂ ಈಗಾಗಲೇ ಪ್ರಾಯೋಗಿಕವಾಗಿ ಇದನ್ನು ಕೈಗೊಂಡಿದೆ. ಬರಪೀಡಿತ ರಾಯಲಸೀಮೆ ಪ್ರದೇಶ ಇನ್ನಿತರ ಕಡೆಗಳಲ್ಲಿ 2016ರಲ್ಲಿ ಸುಮಾರು 700ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂದಾಜು 48 ಸಾವಿರ ರೈತರ ಜಮೀನಿನಲ್ಲಿ ಝಡ್‌ಬಿಎನ್‌ಎಫ್ ಮಾದರಿಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗಿತ್ತು. ಇದರಲ್ಲಿ ಸುಮಾರು 10 ಸಾವಿರ ರೈತರು ಯಶಸ್ವಿಯಾಗಿ ಇದನ್ನು ಕೈಗೊಂಡರೆ, ಉಳಿದವರು ಭಾಗಶಃ ಈ ಮಾದರಿ ಕೈಗೊಂಡಿದ್ದರು.

ಯೋಜನೆ ಉಸ್ತುವಾರಿ ಹಾಗೂ ನಿರ್ವಹಣೆಗೆ ಆಂಧ್ರಪ್ರದೇಶ ಸರ್ಕಾರ “ರೈತು ಸ್ವಾಧಿಕಾರ ಸಂಸ್ಥಾ’ ರಚನೆ ಮಾಡಿದ್ದು, ಪ್ರಾಯೋಗಿಕವಾಗಿ ಕೈಗೊಂಡ ಯೋಜನೆಯಲ್ಲಿ ಝಡ್‌ಬಿಎನ್‌ಎಫ್ ಮಾದರಿಯಲ್ಲಿ ಬೆಳೆದ ಶೇಂಗಾ ಇಳುವರಿ ಸಾಮಾನ್ಯ ಕೃಷಿಗೆ ಹೋಲಿಸಿದರೆ ಶೇ.23ರಷ್ಟು ಹಾಗೂ ಭತ್ತದಲ್ಲಿ ಶೇ.6ರಷ್ಟು ಇಳುವರಿ ಹೆಚ್ಚಿಗೆ ಬಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಆಂಧ್ರಪ್ರದೇಶ 2024ರ ವೇಳೆಗೆ ಝಡ್‌ಬಿಎನ್‌ಎಫ್ ಮಾದರಿಯಡಿ ಸುಸ್ಥಿರ ಕೃಷಿಯನ್ನು ಸಾಮೂಹಿಕವಾಗಿ ಸುಮಾರು 8 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ ಕೈಗೊಳ್ಳಲು ಯೋಜಿಸಿದ್ದು, 2018-19ನೇ ಆರ್ಥಿಕ ವರ್ಷದಲ್ಲಿ ಸುಮಾರು 1.25ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈ ಮಾದರಿ ಅನುಷ್ಠಾನಕ್ಕೆ ಗುರಿ ಹೊಂದಿದೆ. ಆಂಧ್ರಪ್ರದೇಶದ ಈ ಯತ್ನಕ್ಕೆ ಸುಸ್ಥಿರ ಭಾರತ ಆರ್ಥಿಕ ಸಹಾಯ ಸಂಸ್ಥೆ(ಎಸ್‌ಐಎಫ್ಎಫ್) ಕೈ ಜೋಡಿಸಿದೆ.

ಸ್ಪಷ್ಟತೆ ಅವಶ್ಯ:
ನೈಸರ್ಗಿಕ ಪದ್ಧತಿ ಎಂದರೆ ಹೇಗೆ? ಬೆಳೆಗಳಿಗೆ ಯಾವುದೇ ಪೋಷಕಾಂಶಗಳನ್ನು ಬಾಹ್ಯವಾಗಿ ನೀಡಬಾರದೋ ಅಥವಾ ಸಾವಯವ ಪದ್ಧತಿಯ ಪೋಷಕಾಂಶಗಳನ್ನು ನೀಡಬೇಕೋ ಎಂಬುದರ ಬಗ್ಗೆಯೂ ಸ್ಪಷ್ಟತೆ ಬೇಕಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕ ರೀತಿ ಆಹಾರ ಧಾನ್ಯಗಳ ಇಳುವರಿ ಹೆಚ್ಚಳ ಅಗತ್ಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಅನೇಕ ರೈತರು ಸಾವಯವ ಹಾಗೂ ನೈಸಗಿರ್ಕ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಕಬ್ಬು, ಭತ್ತ ಇನ್ನಿತರ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಿದ್ದಾರೆ. ಬೆಳೆಗಳಿಗೆ ಬರುವ ಕೀಟ, ರೋಗ ನಿಯಂತ್ರಣಕ್ಕೆ ಝಡ್‌ಬಿಎನ್‌ಎಫ್ ಮಾದರಿಯಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದರ ಸಮಗ್ರ ಮಾಹಿತಿ ಸಂಗ್ರಹ ಆಗಬೇಕಿದೆ ಎನ್ನುವುದು ಕೃಷಿ ತಜ್ಞರ ಅಭಿಮತ.

ಮಿತಿ ಮೀರಿದ ರಸಗೊಬ್ಬರ, ಕ್ರಿಮಿನಾಶಕ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ನೀರು ಬಳಕೆಯಿಂದಾಗಿ ಭೂಮಿಯಲ್ಲಿನ ಸಾವಯವ ಇಂಗಾಲ ಕಡಿಮೆಯಾಗಿ ಫ‌ಲವತ್ತತೆ ಇಲ್ಲವಾಗುತ್ತಿದೆ. ಸಾವಯವ ಇಂಗಾಲ ಹೆಚ್ಚಿಸಲು ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಕೃಷಿ ದೊಡ್ಡ ಗಂಡಾಂತರ ಎದುರಿಸಲಿದೆ.
– ಡಾ.ವಿ.ಐ.ಬೆಣಗಿ, ಕುಲಪತಿ, ಕೃವಿವಿ ಧಾರವಾಡ

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next