Advertisement

ನಕ್ಸಲ್‌ ದಾಳಿ: ಶಾಸಕನ ಹತ್ಯೆ

02:02 PM Sep 24, 2018 | Team Udayavani |

ಅಮರಾವತಿ: ಹಲವು ವರ್ಷಗಳ ಬಳಿಕ ಮತ್ತೆ ಸಕ್ರಿಯರಾಗಿರುವ ಮಾವೋವಾದಿಗಳು, ಆಂಧ್ರಪ್ರದೇಶದಲ್ಲಿ ಹಾಡಹಗಲೇ ರಕ್ತ ಹರಿಸಿದ್ದಾರೆ. ರವಿವಾರ ಟಿಡಿಪಿ ಶಾಸಕ ಕಿದರಿ ಸರ್ವೇಶ್ವರ ರಾವ್‌ ಮತ್ತು ಟಿಡಿಪಿ ನಾಯಕ ಸಿವೇರಿ ಸೋಮ ಎಂಬುವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ವಿಶಾಖಪಟ್ಟಣ ಜಿಲ್ಲೆಯ ಲಿಪ್ಪಿಟಿಪುಟ್ಟ ಗ್ರಾಮದಲ್ಲಿ ರವಿವಾರ ‘ಗ್ರಾಮ ದರ್ಶಿನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ. ಸುಮಾರು 60ಕ್ಕೂ ಹೆಚ್ಚು ಮಾವೋವಾದಿಗಳು (ಈ ಪೈಕಿ ಹೆಚ್ಚಿನವರು ಮಹಿಳೆಯರು ಮತ್ತು ಗ್ರಾಮಸ್ಥರು) ಹತ್ಯಾಕಾಂಡದಲ್ಲಿ ಭಾಗವಹಿಸಿದ್ದರು ಎನ್ನಲಾಗಿದ್ದು, ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ವಿಶಾಖಪಟ್ಟಣ ವಲಯದ ಡಿಜಿಪಿ ಸಿಎಚ್‌ ಶ್ರೀಕಾಂತ್‌ ಹೇಳಿದ್ದಾರೆ.

Advertisement

‘ಶಾಸಕರ ಕಾರನ್ನು ಮಾವೋವಾದಿಗಳ ಗುಂಪು ಸುತ್ತುವರಿಯಿತು. ಕಿದರಿ ಸರ್ವೇಶ್ವರ ರಾವ್‌ ಅವರ ಭದ್ರತಾ ಸಿಬಂದಿ ಕಾರಿನಿಂದ ಇಳಿದು ಏನಾಯಿತು ಎಂದು ಪರಿಶೀಲಿಸುವಷ್ಟರಲ್ಲಿ ಅವರ ಕೈಯ್ಯಲ್ಲಿದ್ದ ಎ.ಕೆ.47 ರೈಫ‌ಲ್‌ ಕಸಿದುಕೊಳ್ಳಲಾಯಿತು. ಈ ವೇಳೆ ಶಾಸಕ ಮತ್ತು ಟಿಡಿಪಿ ನಾಯಕ ಕಾರಿನಿಂದ ಇಳಿದರು. ತಕ್ಷಣವೇ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು’ ಎಂದು ಡಿಜಿಪಿ ಹೇಳಿದ್ದಾರೆ. ಬಹಳ ವರ್ಷಗಳ ಬಳಿಕ ಆಂಧ್ರದಲ್ಲಿ ಮಾವೋವಾದಿಗಳಿಂದ ರಾಜಕೀಯ ನಾಯಕರ ಮೇಲೆ ದಾಳಿ ನಡೆದಿದೆ.


ಮಾವೋವಾದಿಗಳ ಆಂಧ್ರ-ಒಡಿಶಾ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಶ್ರೀಕಾಂತ್‌ ಹೇಳಿದ್ದಾರೆ. ಅಸುನೀಗಿದ ಶಾಸಕ ಸರ್ವೇಶ್ವರ ರಾವ್‌ 2014ರ ಚುನಾವಣೆಯಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅರಕು ಮೀಸಲು ಕ್ಷೇತ್ರದಿಂದ ಗೆದ್ದಿದ್ದರು. ನಂತರ 2016ರಲ್ಲಿ ಟಿಡಿಪಿಗೆ ಸೇರ್ಪಡೆಯಾಗಿದ್ದರು. ಪಕ್ಷದ ಶಾಸಕ ಮತ್ತು ನಾಯಕನ ಹತ್ಯೆ ಕುರಿತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಖಂಡನೆ ವ್ಯಕ್ತಪಡಿಸಿದ್ದಾರೆ. ಸದ್ಯ ಅವರು ನ್ಯೂಯಾರ್ಕ್‌ ಪ್ರವಾಸದಲ್ಲಿದ್ದಾರೆ.

ಟಿಡಿಪಿ ಶಾಸಕ ಸರ್ವೇಶ್ವರ ರಾವ್‌ ಮತ್ತು ಸಿವೇರಿ ಸೋಮ ಅವರಿಗೆ ಮಾವೋವಾದಿಗಳಿಂದ ಹಲವು ಬಾರಿ ಬೆದರಿಕೆ ಕರೆ ಬಂದಿತ್ತು ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಜುಲೈನಲ್ಲಿ ಗುಡ ಎಂಬ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ನಿಮಿತ್ತ ಭಾವನ ಹೆಸರಲ್ಲಿ ಶಾಸಕ ಪರವಾನಗಿ ಪಡೆದಿದ್ದರು ಎಂದು ಹೇಳಲಾಗಿತ್ತು. ಅದಕ್ಕಾಗಿ ಸ್ಥಳೀಯರಿಂದ ವ್ಯಾಪಕ ಪ್ರತಿಭಟನೆಯೂ ಎದುರಾಗಿತ್ತು. 2016ರ ಅ.24ರಂದು ಆಂಧ್ರ-ಒಡಿಶಾ ಗಡಿಯಲ್ಲಿ ನಡೆದ ಎನ್‌ಕೌಂಟರ್‌ ವೇಳೆ 27 ಮಂದಿ ನಕ್ಸಲೀಯರನ್ನು ಹತ್ಯೆಗೈಯಲಾಗಿತ್ತು. ತದನಂತರ ಆಂಧ್ರದಲ್ಲಿ ಮಾವೋವಾದಿಗಳ ಅಟ್ಟಹಾಸ ಇಳಿದಿತ್ತು.

ವಿದೇಶಿ ನಿರ್ಮಿತ ಟೆಲಿಸ್ಕೋಪ್‌ ವಶಕ್ಕೆ
ಇದೇ ವೇಳೆ ಛತ್ತೀಸ್‌ಗಢ ಪೊಲೀಸರು ನಾರಾಯಣಪುರ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲರು ಬಳಕೆ ಮಾಡುವ ವಿದೇಶಿ ನಿರ್ಮಿತ ಟೆಲಿಸ್ಕೋಪ್‌ ವಶಕ್ಕೆ ಪಡೆದಿದ್ದಾರೆ. ನಕ್ಸಲರ ಜತೆಗಿನ ಎನ್‌ಕೌಂಟರ್‌ ಬಳಿಕ ನಡೆಸಲಾದ ಶೋಧದ ವೇಳೆ ಇದು ಪತ್ತೆಯಾಗಿದೆ. ನಕ್ಸಲರ ಬಳಿ ಅತ್ಯಾಧುನಿಕವಾಗಿರುವ ಟೆಲಿಸ್ಕೋಪ್‌ ಹೇಗೆ ಸೇರಿತು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

Advertisement

ಹತ್ಯೆ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು 
ಶಾಸಕ ಮತ್ತು ಪಕ್ಷದ ನಾಯಕನ ಹತ್ಯೆಯಿಂದ ರೊಚ್ಚಿಗೆದ್ದಿರುವ ಟಿಡಿಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಭಾರೀ ದಾಂಧಲೆ ನಡೆಸಿದ್ದಾರೆ. ವಿಶಾಖಪಟ್ಟಣ ಜಿಲ್ಲೆಯ ದುಂಬ್ರಿಗುಡ ಮತ್ತು ಅರಕು ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ. ಠಾಣೆಯೊಳಗಿದ್ದ ಪೀಠೊಪಕರಣಗಳು ಹಾಗೂ ಇತರೆ ವಸ್ತುಗಳಿಗೆ ಹಾನಿ ಮಾಡಿದ್ದಾರೆ. 2 ಠಾಣೆಗಳಿಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳು, ಟೇಬಲ್‌, ಕುರ್ಚಿಗಳನ್ನು ಹೊರಕ್ಕೆ ಎಸೆದು, ಬೆಂಕಿ ಹಚ್ಚುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇಬ್ಬರು ನಾಯಕರಿಗೆ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿರಲಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಮೃತ ನಾಯಕರು ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಒಡಿಶಾ ಗಡಿ ಸಮೀಪದ ದುಂಬ್ರಿಗುಡ ಮಂಡಲ್‌ಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next