ಬೆಂಗಳೂರು: ಆಂಧ್ರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಷಾಶ್ರೀ ಚರಣ್ ಅವರು, ಶನಿವಾರ ಕೆಎಂಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಹಾಲು ಒಕ್ಕೂಟಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ವೈಎಸ್‌ಆರ್ ಸಂಪೂರ್ಣ ಪೋಷಣ ಅಡಿಯಲ್ಲಿ ಮಾಹೆಯಾನ 1 ಕೋಟಿ ಲೀಟರ್ ಹಾಲನ್ನು ಆಂಧ್ರಪ್ರದೇಶಕ್ಕೆ ಸರಬರಾಜು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸರಬರಾಜು ಮಾಡುವುದು ಸೇರಿ ಹಾಲು ಒಕ್ಕೂಟಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಆಂಧ್ರಪ್ರದೇಶ ಸರ್ಕಾರ ಪ್ರತಿಷ್ಠಿತ ವೈಎಸ್‌ಆರ್ ಸಂಪೂರ್ಣ ಪೋಷಣ ಯೋಜನೆಯಡಿ 2016ರ ನವೆಂಬರ್ ತಿಂಗಳಲ್ಲಿ 13 ಲಕ್ಷ ಲೀಟರ್ ಹಾಲು ಖರೀದಿಸುವುದರೊಂದಿಗೆ ಆರಂಭಿಕ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇದೀಗ ಅದು ಮಾಹೆಯಾನ ಅಂದಾಜು 1 ಕೋಟಿ ಲೀಟರ್ ಹಾಲಿಗೆ ಬಂದು ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ 13 ಜಿಲ್ಲೆಗಳನ್ನೊಳಗೊಂಡ 26 ಲಕ್ಷ ಫಲಾನುಭವಿಗನ್ನಳೊಂಡ 55,600 ಅಂಗನವಾಡಿ ಕೇಂದ್ರಗಳಿಗೆ ವೈಎಸ್‌ಆರ್ ಸಂಪೂರ್ಣ ಪೋಷಣ ಯೋಜನೆಯಡಿಯಲ್ಲಿ ನಂದಿನಿ ಯುಹೆಚ್‌ಟಿ ಹಾಲನ್ನು ಕೆಎಂಎಫ್ ಆಂಧ್ರಪ್ರದೇಶಕ್ಕೆ ಸರಬರಾಜು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
200,500 ಹಾಗೂ 1000 ಮಿ.ಲಿ. ಪೊಟ್ಟಣಗಳಲ್ಲಿ ಟೆಟ್ರಾಪ್ಯಾಕ್ ಹಾಗೂ 200, 500 ಮಿ.ಲಿ. ಫ್ಲೆಕ್ಲಿ ಪೊಟ್ಟಣಗಳಲ್ಲಿ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ಕೆಎಂಎಫ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.