ಆಂಧ್ರಪ್ರದೇಶ: ಮಾರಣಾಂತಿಕ ಕೋವಿಡ್ 19 ಸೋಂಕು ತಗುಲಿ ಸಾಯಬಹುದು ಎಂಬ ಭಯದಿಂದ ಸುಮಾರು 15 ತಿಂಗಳು ಕಾಲ ಟೆಂಟ್ ಮನೆಯೊಳಗೆ ಇದ್ದು, ಅಸ್ವಸ್ಥಗೊಂಡಿರುವ ಕುಟುಂಬ ಸದಸ್ಯರನ್ನು ಪೊಲೀಸರು ರಕ್ಷಿಸಿರುವ ಘಟನೆ ಆಂಧ್ರಪ್ರದೇಶದ ಕಡಾಲಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ನನಗಿನ್ನೂ 15 ವರ್ಷ ಅವಕಾಶವಿದೆ, ರಾಜ್ಯವಾಳುವ ಆಸೆಯಿದೆ: ಉಮೇಶ್ ಕತ್ತಿ
ಕಡಾಲಿ ಗ್ರಾಮದ ಮುಖ್ಯಸ್ಥ ಚೊಪ್ಪಾಲಾ ಗುರುನಾಥ್ ಅವರ ಪ್ರಕಾರ, ನೆರೆಮನೆಯವರೊಬ್ಬರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ಘಟನೆ ಬಳಿಕ ರುತಮ್ಮಾ(50ವರ್ಷ), ಕಾಂತಮಣಿ (32) ಮತ್ತು ರಾಣಿ (30ವರ್ಷ) ಸುಮಾರು 15 ತಿಂಗಳ ಕಾಲ ಮನೆಯಿಂದ ಹೊರ ಬಾರದೆ ಗೃಹಬಂಧನದಲ್ಲಿದ್ದರು ಎಂದು ತಿಳಿಸಿದ್ದಾರೆ.
ಸರ್ಕಾರದ ಯೋಜನೆಯಡಿ ಈ ಕುಟುಂಬಕ್ಕೆ ಮನೆ ನಿವೇಶನ ಮಂಜೂರಾಗಿದ್ದು, ಅದಕ್ಕಾಗಿ ಗ್ರಾಮದ ಸದಸ್ಯರೊಬ್ಬರು ಸಹಿ ಪಡೆಯಲು ಹೋದಾಗ ಈ ಘಟನೆ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ. ಕಡಾಲಿ ಗ್ರಾಮದಲ್ಲಿ ಕಳೆದ 15 ತಿಂಗಳಿನಿಂದ ಮೂವರು ಟೆಂಟ್ ಮನೆಯೊಳಗಿದ್ದು ಯಾರನ್ನೂ ಭೇಟಿಯಾಗುತ್ತಿಲ್ಲ ಎಂದು ಗ್ರಾಮದ ಸದಸ್ಯರು ಅಧಿಕಾರಿಗಳಿಗೆ, ಗ್ರಾಮದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು.
ಚುಟ್ಟುಗಲ್ಲಾ ಬೆನ್ನಿ ಅವರ ಪತ್ನಿ ರುತಮ್ಮಾ ಹಾಗೂ ಅವರ ಇಬ್ಬರು ಮಕ್ಕಳು ಟೆಂಟ್ ಮನೆಯಲ್ಲಿ ಕೋವಿಡ್ ನಿಂದ ಸಾಯಬಹುದು ಎಂಬ ಭಯದಿಂದ 15 ತಿಂಗಳ ಕಾಲ ಹೊರಗೆ ಬಂದಿಲ್ಲ. ಯಾವುದೇ ಆಶಾ ಕಾರ್ಯಕರ್ತೆಯರು ಮನೆ ಬಳಿ ಹೋದಾಗ ಯಾವ ಪ್ರತಿಕ್ರಿಯೆಯೂ ಇರುತ್ತಿರಲಿಲ್ಲವಾಗಿತ್ತು. ಇತ್ತೀಚೆಗೆ ಅವರ ಕೆಲವು ಸಂಬಂಧಿಕರು ಈ ಬಗ್ಗೆ ಮಾಹಿತಿ ನೀಡಿ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವುದಾಗಿ ತಿಳಿಸಿರುವುದಾಗಿ ಗುರುನಾಥ್ ಅವರು ಎಎನ್ ಐ ಜತೆ ಮಾತನಾಡುತ್ತ ವಿವರ ನೀಡಿದ್ದಾರೆ.
ನಂತರ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ವಿಷಯ ತಿಳಿದ ರಜೋಲೆ ಸಬ್ ಇನ್ಸ್ ಪೆಕ್ಟರ್ ಕೃಷ್ಣಮಾಚಾರಿ ಮತ್ತು ಅವರ ತಂಡ ಕುಟುಂಬ ಸದಸ್ಯರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ತಲೆಗೂದಲು ನೆರದಿದ್ದು, ತೀರಾ ಕೃಶಕಾಯರಾಗಿದ್ದರು. ಇದೀಗ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.