ತಿರುಪತಿ (ಆಂಧ್ರಪ್ರದೇಶ): ಲಡ್ಡು ಅಪವಿತ್ರವಾದ ಬಳಿಕ 11 ದಿನಗಳ ಉಪವಾಸ ವ್ರತ ಕೈಗೊಂಡಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬುಧವಾರ(ಅ1) ತಮ್ಮ ಪುತ್ರಿಯೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರು.
ತಮ್ಮ ಭೇಟಿಯ ಸಂದರ್ಭದಲ್ಲಿ ಪವನ್ ಕಲ್ಯಾಣ್ ತಮ್ಮೊಂದಿಗೆ ‘ ವಾರಾಹಿ ಘೋಷಣೆ’ಯನ್ನು ದೇವರಿಗೆ ಕೊಂಡೊಯ್ದರು, ಅವರು ಗುರುವಾರ ತಿರುಪತಿಯಲ್ಲಿ ನಡೆಯುವ ಬೃಹತ್ ಸಭೆಯಲ್ಲಿ ಅದನ್ನು ಘೋಷಿಸಲಿದ್ದಾರೆ.
ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಇಂದು ತಿರುಮಲ ಶ್ರೀವಾರಿ ದರ್ಶನವನ್ನು ಪಡೆದರು. ಪವನ್ ಕಲ್ಯಾಣ್ ತಮ್ಮೊಂದಿಗೆ ವಾರಾಹಿ ಘೋಷಣೆಯ ಕಡತವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಜನಸೇನಾ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪ್ರಸ್ತುತ, ಕಲ್ಯಾಣ್ ಅವರು ತಿರುಮಲದಲ್ಲಿ ಹಿಂದಿನ YSRCP ಆಡಳಿತವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತಕ್ಕಾಗಿ 11 ದಿನಗಳ ವ್ರತದ ಭಾಗವಾಗಿ ದೇವಾಲಯಕ್ಕೆ ಮೂರು ದಿನಗಳ ಭೇಟಿಯಲ್ಲಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು, ಕಲ್ಯಾಣ್ ಅವರ ಕಿರಿಯ ಮಗಳು ಪಾಲಿನಾ ಅಂಜನಿ ಕೊನಿಡೇಲಾ ಅವರು ತಿರುಮಲ ದೇವಸ್ಥಾನದಲ್ಲಿ ”ವೆಂಕಟೇಶ್ವರನ ಮೇಲೆ ನಂಬಿಕೆಯನ್ನು ಹೊಂದಿದ್ದೇನೆ” ಎಂದು ಘೋಷಿಸಿದರು.
ಪಾಲಿನಾ ಅಂಜನಿ ಕೊನಿಡೆಲಾ ಅವರು ಹಿಂದೂಯೇತರ ನಂಬಿಕೆಯವರಾಗಿದ್ದು, ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಪಾಲಕ ನಿಯಮಗಳ ಪ್ರಕಾರ ಹಿಂದೂಯೇತರರು ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ದೇವರಲ್ಲಿ ತಮ್ಮ ನಂಬಿಕೆಯನ್ನು ಘೋಷಿಸಬೇಕು.
“ಪಾಲಿನಾ ಅಂಜನಿ ಕೊನಿಡೇಲಾ ಅವರು ಟಿಟಿಡಿ ಸಿಬಂದಿ ನೀಡಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಪಲೀನಾ ಅಂಜನಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಪವನ್ ಕಲ್ಯಾಣ್ ಕೂಡ ದಾಖಲೆಗಳನ್ನು ಅನುಮೋದಿಸಿದ್ದಾರೆ ಎಂದು ಜನಸೇನಾ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕ್ರಿಶ್ಚಿಯನ್ನರಾಗಿರುವ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಇದೇ ರೀತಿಯ ಘೋಷಣೆಯನ್ನು ಹೊರಡಿಸಬೇಕು ಎಂದು ಬಿಜೆಪಿ ನಾಯಕರು ಮತ್ತು ಹಲವಾರು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದರಿಂದ ಈ ಘೋಷಣೆ ಮಹತ್ವದ್ದಾಗಿದೆ.
ಕಲ್ಯಾಣ್ ಅವರು 2013 ರ ಸೆಪ್ಟೆಂಬರ್ ನಲ್ಲಿ ಹೈದರಾಬಾದ್‌ನಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ರಷ್ಯಾದ ಪ್ರಜೆ ಕ್ರಿಶ್ಚಿಯನ್ನರಾಗಿರುವ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಪಲೀನಾ ಅಂಜನಿ ಕೊನಿಡೇಲಾ ಮತ್ತು ಮಾರ್ಕ್ ಶಂಕರ್ ಪವನೋವಿಕ್ ಎಂಬ ಮಗನೂ ಇದ್ದಾರೆ.