ಆಂಧ್ರಪ್ರದೇಶ: ಇಂದು ಬೆಳಿಗ್ಗೆ ಆಂಧ್ರಪ್ರದೇಶದ ವಿಜಯವಾಡದ ಕೋವಿಡ್ -19 ಕೇರ್ ಸೆಂಟರ್ ಹೊಟೇಲ್ ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು 7 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. 30 ಜನರನ್ನು ರಕ್ಷಿಸಲಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ.
ಹೊಟೇಲ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ವಾಹನಗಳು ಸೇರಿದಂತೆ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಅನೇಕ ಮಂದಿ ಹೋಟೆಲ್ ನಲ್ಲಿಯೇ ಸಿಲುಕಿರುವ ಮಾಹಿತಿ ಇದ್ದು, ರಕ್ಷಿಸಲ್ಪಟ್ಟವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಸ್ವರ್ಣ ಪ್ಯಾಲೆಸ್ ಹೊಟೇಲ್ ನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ವಿಜಯವಾಡ ನಗರ ಪಾಲಿಕೆ ಪಡೆದುಕೊಂಡಿತ್ತು. ಇಲ್ಲಿ ರಮೇಶ್ ಆಸ್ಪತ್ರೆಯ ಸುಮಾರು 30 ಕೋವಿಡ್ ಸೊಂಕಿಗೆ ತುತ್ತಾದವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಯ ಪಿಪಿಇ ಕಿಟ್ ಗೆ ಮೊದಲು ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅವರು ಭಯದಿಂದ ಓಡಿದ ಪರಿಣಾಮ ಎಲ್ಲಾ ವಾರ್ಡ್ ಗೆ ಬೆಂಕಿ ತಗುಲಿದೆ. ಇದು ಸುಮಾರು 50 ಬೆಡ್ ಗಳಿರುವ ಕೋವಿಡ್ ಕೇರ್ ಸೆಂಟರ್ ಆಗಿತ್ತು ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನೆಯ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಅವಘಢದ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ಗುರುವಾರ ಅಹಮದಾಬಾದ್‌ನ ಖಾಸಗಿ ಕೋವಿಡ್ -19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಸಂಭವಿಸಿದ ಅಗ್ನಿ ಅವಘಢದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದರು.