Advertisement

ಆಂಧ್ರಪ್ರದೇಶ : ಬಸ್ಸು ಕಾಲುವೆಗೆ ಉರುಳಿ 10 ಸಾವು, ಅನೇಕರಿಗೆ ಗಾಯ

10:52 AM Feb 28, 2017 | Team Udayavani |

ವಿಜಯವಾಡ : ಹೈದರಾಬಾದ್‌ಗೆ ಹೋಗುತ್ತಿದ್ದ  ದಿವಾಕರ್‌ ಟ್ರಾವಲ್‌ ಏಜನ್ಸಿಯ ಬಸ್ಸು ಇಂದು ಬೆಳಗ್ಗೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮುಲ್ಲುಪಾಡು ಎಂಬ ಗ್ರಾಮಕ್ಕೆ ಸಮೀಪದ ಎರಡು ಫ್ಲೈ ಓವರ್‌ಗಳ ನಡುವೆ ಸಾಗುತ್ತಿದ್ದಾಗ ಕಾಲುವೆಗೆ ಉರುಳಿ ಬಿದ್ದ ಪರಿಣಾಮವಾಗಿ ಕನಿಷ್ಠ 10 ಜನರು ಮಡಿದು  ಇತರ ಹಲವರು ಗಾಯಗೊಂಡ ಘಟನೆ ವರದಿಯಾಗಿದೆ.

Advertisement

ಭುವನೇಶ್ವರದಿಂದ ಬರುತ್ತಿದ್ದ ಈ ನತದೃಷ್ಟ ಬಸ್ಸಿನಲ್ಲಿ 38 ಪ್ರಯಾಣಿಕರಿದ್ದರು. ವಿಶಾಖಪಟ್ಟಣದಲ್ಲಿ ಸ್ವಲ್ಪ ಹೊತ್ತು ನಿಂತು ಈ ಬಸ್ಸು ಅನಂತರ ತನ್ನ ಪ್ರಯಾಣವನ್ನು ಮುಂದುವರಿಸಿತ್ತು. 

ಕಾಲುವೆಗೆ ಉರುಳಿ ಬಿದ್ದಿರುವ ಬಸ್ಸಿನ ಮುಂಭಾಗ ತೀವ್ರವಾಗಿ ನಜ್ಜುಗುಜ್ಜಾಗಿದ್ದು ಬಸ್ಸಿನೊಳಗೆ ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ಪ್ರಯಾಣಿಕರನ್ನು ವಿಜಯವಾಡ ಮತ್ತು ನಂದಿಗಾಮಾದ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ಬಸ್ಸು   ಫ್ಲೈ ಓವರ್‌ನ ಉಕ್ಕಿನ ಬೇಲಿಯನ್ನು ಭೇದಿಸಿ ಮುನ್ನುಗ್ಗಿ ಕಾಲುವೆಗೆ ಅಡಿ ಮೇಲಾಗಿ ಧುಮುಕಿರುವುದರಿಂದ ಅನೇಕರಿಗೆ ತಲೆಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಮೂಳೆ ಮುರಿತ ಉಂಟಾಗಿದೆ. 

ವಿಜಯವಾಡದಲ್ಲಿನ ಆಂಧ್ರ ಆಸ್ಪತ್ರೆಗೆ ದಾಖಲಾಗಿರುವ ಓರ್ವ ಗಾಯಾಳು, “ಬಸ್ಸಿನ ಚಾಲಕನು ತೀವ್ರ ನಿದ್ದೆಗಣ್ಣಿನಲ್ಲಿದ್ದುದನ್ನು ತಾನು ಕಂಡಿದ್ದೇನೆ’ ಎಂದು ಪೊಲೀಸರಿಗೆ ತಿಳಿಸಿದ್ದಾರೆ. 

Advertisement

ಉಪ ಮುಖ್ಯಮಂತ್ರಿ (ಗೃಹ) ಎನ್‌ ಚಿನ್ನ ರಾಜಪ್ಪ ಅವರು ತ್ವರಿತ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಕೃಷ್ಣಾ ಜಿಲ್ಲೆಯ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. 

ಬಸ್ಸಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ವಿಶಾಖಪಟ್ಟಣ, ಭುವನೇಶ್ವರ, ಶ್ರೀಕಾಕುಳಂ ಮತ್ತು ಹೈದರಾಬಾದಿನವರಾಗಿದ್ದಾರೆ. ತೆಲುಗು ದೇಶಂ ಪಕ್ಷದ ಅನಂತಪುರ ಸಂಸದ ಜೆ ಸಿ ದಿವಾಕರ ರೆಡ್ಡಿ ಒಡೆತನದ ದಿವಾಕರ ಟ್ರಾವೆಲ್‌ ಏಜನ್ಸಿಯ ಬಸ್ಸು ಭೀಕರ ಅಪಘಾತಕ್ಕೆ ಗುರಿಯಾಗಿರುವ ಎರಡನೇ ಪ್ರಕರಣ ಇದಾಗಿದೆ. 

2013ರ ಅಕ್ಟೋಬರ್‌ನಲ್ಲಿ ಜಬ್ಟಾರ್‌ ಟ್ರಾವೆಲ್ಸ್‌ ಸಂಸ್ಥೆಯಿಂದ ಲೀಸಿಗೆ ಪಡೆಯಲಾಗಿದ್ದ ದಿವಾಕರ್‌ ಟ್ರಾವೆಲ್ಸ್‌ ಸಂಸ್ಥೆಯ ಮಲ್ಟಿ ಆ್ಯಕ್ಸೆಲ್‌ ವೋಲ್‌ವೋ ಬಸ್ಸು ಬೆಂಗಳೂರಿನಿಂದ ಹೈದರಾಬಾದಿಗೆ ಬರುತ್ತಿದ್ದಾಗ ಮೆಹಬೂಬ್‌ನಗರ ಜಿಲ್ಲೆಯ ಕೋಥಕೋಟ ಎಂಬಲ್ಲಿ  ಬೆಂಕಿಗೆ ಆಹುತಿಯಾದ ದುರ್ಘ‌ಟನೆಯಲ್ಲಿ 45 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next