“ಸೋಡಾಬುಡ್ಡಿ’ ಚಿತ್ರದ ಮೂಲಕ ನಾಯಕ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಹುಡುಗಿ ಅನುಷಾ ರಂಗನಾಥ್. “ಸೋಡಾಬುಡ್ಡಿ’ ಚಿತ್ರಕ್ಕೆ ಚಿತ್ರರಂಗದಿಂದ ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ಚಿತ್ರದ ಪಾತ್ರ ಅನುಷಾ ಅವರನ್ನು ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸುವಂತೆ ಮಾಡಲು ಯಶಸ್ವಿಯಾಯಿತು. ಸದ್ಯ ಚಿತ್ರರಂಗಕ್ಕೆ ಕಾಲಿಟ್ಟ ಮೂರು ವರ್ಷಗಳಲ್ಲಿ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಅನುಷಾ ಈಗ ನಾಲ್ಕನೇ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ.
ಈ ನಡುವೆಯೇ ಅವರ ನಟನೆಯ “ಅಂದವಾದ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅ.25ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ಮೇಲೆ ಅನುಷಾ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವ ಅನುಷಾ, “ಇದರಲ್ಲಿ ಜಾಸ್ತಿ ಮಾತನಾಡುವ, ಹೀರೋಗೆ ತುಂಬಾ ಸುಳ್ಳು ಹೇಳಿ ಅವನನ್ನು ನಂಬಿಸುವ ಹುಡುಗಿಯ ಪಾತ್ರವನ್ನು ಮಾಡಿದ್ದೇನೆ. ಇವಳು ಹೇಳ್ಳೋದು ಸುಳ್ಳು ಅಂತ ಗೊತ್ತಿದ್ರೂ ಅವನು ಅದನ್ನ ನಂಬುತ್ತಿರುತ್ತಾನೆ.
ನಾನ್ಯಾಕೆ ಆ ಥರ ಸುಳ್ಳು ಹೇಳ್ತೀನಿ. ಆ ಥರದ ಸುಳ್ಳಿಗೆ ಕಾರಣವೇನು ಅನ್ನೋದು ಚಿತ್ರದ ಕೊನೆಗೆ ಗೊತ್ತಾಗುತ್ತದೆ. ಇದರಲ್ಲೊಂದು ಕ್ಯೂಟ್ ಲವ್ ಸ್ಟೋರಿ ಇದೆ. ಮೆಲೋಡಿ ಮ್ಯೂಸಿಕ್ ಇದೆ. ಬ್ಯೂಟಿಫುಲ್ ಲೊಕೇಶನ್ಸ್ ಇದೆ. ಈಗಾಗಲೇ ಈ ಚಿತ್ರದ ಟ್ರೇಲರ್, ಸಾಂಗ್ಸ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ನನಗೂ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಾರೆ. ಈ ನಡುವೆಯೇ ಅನುಷಾ, ವಿನಯ್ ರಾಜ್‌ಕುಮಾರ್ ಅವರ “ಟೆನ್’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.
ಟೆನ್’ ಒಂದು ಆ್ಯಕ್ಷನ್ ಬೇಸ್ಡ್ ಸಬ್ಜೆಕ್ಟ್ ಇರುವ ಚಿತ್ರ. ಒಬ್ಬ ಬಾಕ್ಸರ್ ಲೈಫ್ನಲ್ಲಿ ಏನೇನು ಏಳು-ಬೀಳುಗಳಾಗುತ್ತವೆ. ಅವನ ಜೊತೆಯಿರುವ ಹುಡುಗಿಯ ಜೀವನದಲ್ಲಿ ಅದರ ಪರಿಣಾಮಗಳೇನಾಗುತ್ತದೆ ಅನ್ನೋದು ನನ್ನ ಪಾತ್ರ. ಇದರಲ್ಲಿ ನಾನು ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಮೆಚೂರ್ಡ್ ಹುಡುಗಿಯ ಪಾತ್ರ. ನಮ್ಮ ಸುತ್ತಮುತ್ತ ನೋಡುವಂಥ, ತುಂಬಾ ನ್ಯಾಚುರಲ್ ಆಗಿ ಇರುವಂಥ ಹುಡುಗಿಯ ಥರನೇ ಇಲ್ಲೂ ಕಾಣುತ್ತೇನೆ’ ಎನ್ನುತ್ತಾರೆ.