ಅಜೆಕಾರು: ಅಂಡಾರು ಗ್ರಾಮದಲ್ಲಿ ಅಡಿಕೆ ಕೃಷಿ ಪ್ರಧಾನವಾದುದು. ಜತೆಗೆ ಹೈನುಗಾರಿಕೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಕಾರ್ಕಳ ತಾಲೂಕಿನ ತೀರಾ ಗ್ರಾಮೀಣ ಭಾಗವಾದ ಅಂಡಾರಿನಲ್ಲಿ ಮೂಲ ಸೌಕರ್ಯಗಳು ಇನ್ನಷ್ಟು ಬೇಕು ಎಂಬ ದನಿ ಕೇಳಿಬರುತ್ತಿದೆ.
ಗ್ರಾಮದಲ್ಲಿ 3 ವಾರ್ಡ್‌ಗಳಿವೆ. ಮಲ್ಲಡ್ಕ, ಪೈತಾಳ, ರಾಮಗುಡ್ಡೆ, ಕೊಂದಲಿಕೆ, ಮುಟ್ಲುಪಾಡಿ ಪ್ರಮುಖ ಪ್ರದೇಶಗಳು. ಒಟ್ಟು 6 ಮಂದಿ ಗ್ರಾ.ಪಂ. ಸದಸ್ಯರಿದ್ದಾರೆ. ಭತ್ತ ಪ್ರಮುಖ ಬೆಳೆಯಾಗಿದ್ದ ಪ್ರದೇಶವಿದು. ಈಗ ಅಡಿಕೆ ಆ ಸ್ಥಾನವನ್ನು ಆಕ್ರಮಿಸಿದೆ.
ಗ್ರಾಮದಲ್ಲಿ ಹಲವು ರಸ್ತೆಗಳು ಅಭಿವೃದ್ಧಿಗೊಂಡಿವೆ ಎಂಬುದು ಸಮಾಧಾನದ ಸಂಗತಿ. ಆದರೆ ತಾಲೂಕು ಕೇಂದ್ರ ಸಂಪರ್ಕಿಸುವ ಅಂಡಾರು ಕಾಡುಹೊಳೆ ರಸ್ತೆಗೆ 20 ವರ್ಷಗಳ ಹಿಂದೆ ಡಾಮರು ಕಂಡಿದ್ದು ಈಗ ಹಾಳಾಗಿದೆ. ಕೇವಲ ತೇಪೆ ಕಾರ್ಯ ನಡೆದಿದ್ದು, ಹಲವಾರು ಗುಂಡಿಗಳಿವೆ. ಕೊಡಮಣಿತ್ತಾಯ ದೈವಸ್ಥಾನಕ್ಕೆ ಹೋಗುವ ರಸ್ತೆ ಇದು. ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ ಪಡಿಸುವಂತೆ ನಾಗರಿಕರು ಮನವಿ ಮಾಡಿದರೂ ಈಡೇರಿಲ್ಲ. ಆ ರಸ್ತೆಯೀಗ ಆದ್ಯತೆ ಮೇಲೆ ಮರು ಡಾಮರು ಕಾಣಬೇಕಿದೆ.
ಕುಸಿಯುತ್ತಿರುವ ಸೇತುವೆ
ಗ್ರಾಮದ ಪ್ರಮುಖ ಸೇತುವೆಗಳಲ್ಲಿ ಒಂದಾದ ಕೋಲಿಬೆಟ್ಟು ಸೇತುವೆ ಸಂಪೂರ್ಣ ಶಿಥಿಲಗೊಂಡು ಕುಸಿಯುವ ಹಂತದಲ್ಲಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಈಡೇರಿಲ್ಲ. ಒಂದು ವೇಳೆ ಸೇತುವೆ ಕುಸಿತಗೊಂಡಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ.
ಅಂಡಾರು ಕಂದಾಯ ಗ್ರಾಮದಲ್ಲಿ ಶ್ಮಶಾನ ನಿರ್ಮಾಣ ಕ್ಕಾಗಿ ದಶಕಗಳ ಹಿಂದೆಯೇ ಜಾಗ ಕಾದಿರಿಸಲಾಗಿದೆ. ಆದರೂ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಕೇವಲ ಮೆಲ್ಛಾವಣಿ ಮಾತ್ರ ಪೂರ್ಣಗೊಂಡಿದ್ದು, ನೀರಿನ ಸಂಪರ್ಕ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ.
ಕುಡಿಯುವ ನೀರಿನ ಸಮಸ್ಯೆ
ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ನೀರು ಸಂಪರ್ಕ ಕಲ್ಪಿಸಿದ್ದರೂ, ಸಹ ಅಸಮರ್ಪಕ ನಿರ್ವಹಣೆಯಿಂದಾಗಿ ಪೈತಾಳ, ರಾಮಗುಡ್ಡೆ, ಮೈದಾನ ಪರಿಸರದಲ್ಲಿ ಬೇಸಗೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಈ ಸಮಸ್ಯೆಯೂ ಬಗೆಹರಿಯಬೇಕಿದೆ.
ಬಸ್ ಬರಲಿ
ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಹಾಗಾಗಿ ಸುತ್ತು ಬಳಸಿ ಕಾರ್ಕಳ ತಾಲೂಕಿನ ಅಜೆಕಾರು ಮಾರ್ಗವಾಗಿ ಹೋಗಬೇಕು. ತಾಲೂಕು ಕೇಂದ್ರ ಹೆಬ್ರಿಯಿಂದ ಕಾಡುಹೊಳೆ ಮಾರ್ಗವಾಗಿ ಅಂಡಾರಿಗೆ ನೇರ ಬಸ್ ವ್ಯವಸ್ಥೆ ಕಲ್ಪಿಸಿ ಎನ್ನುವುದು ಬಹು ವರ್ಷಗಳ ಬೇಡಿಕೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ಯವ್ಯ ಸಂದರ್ಭವೂ ಮನವಿ ಮಾಡಲಾಗಿದೆ. ಆಗ ಹತ್ತು ದಿನಗಳೊಳಗೆ ಬಸ್ ಸಂಚಾರ ಆರಂಭವಾಗುವುದಾಗಿ ಹೇಳಿದರೂ ಇನ್ನೂ ಆರಂಭವಾಗಿಲ್ಲ. ಈ ಬೇಡಿಕೆಯೂ ಆದಷ್ಟು ಬೇಗ ಈಡೇರಬೇಕಿದೆ.
ಬಹುತೇಕ ಗ್ರಾಮಸ್ಥರು ಭತ್ತ ಬೆಳೆಯತ್ತ ಆಸಕ್ತಿ ತೋರದ ಕಾರಣ, ಪ್ರಸ್ತುತ ನೂರಾರು ಎಕ್ರೆ ಗದ್ದೆಗಳು ಪಾಳು ಬಿದ್ದಿವೆ. ಮತ್ತೆ ಭತ್ತ ಕೃಷಿಯತ್ತ ಪ್ರೋತ್ಸಾಹ ನೀಡಬೇಕಿದೆ. ಇದರೊಂದಿಗೆ ಕಾಡು ಪ್ರಾಣಿ ಹಾವಳಿಯನ್ನೂ ತಡೆಯಬೇಕಿದೆ. ಪ್ರಸ್ತುತ ಹೈನುಗಾರಿಕೆಯಲ್ಲಿ ಗ್ರಾಮದಲ್ಲಿ ಒಂದು ಸಾವಿರ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಹಾಗಾಗಿ ಅಗತ್ಯವಾದ ಪಶು ಆಸ್ಪತ್ರೆ ಗ್ರಾಮದಲ್ಲಿ ಸ್ಥಾಪಿಸಬೇಕಿದೆ.
ಗ್ರಾಮದಲ್ಲಿ ಪ.ಜಾತಿ, ಪ.ಪಂಗಡದ ಕುಟುಂಬಗಳಿದ್ದು, ಸಮುದಾಯ ಭವನ ನಿರ್ಮಿಸಲು ಡೀಮ್ಡ್ ಅರಣ್ಯ ಸಮಸ್ಯೆ ತೊಡಕಾಗಿದೆ. ಈ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಹಲವು ಮಂದಿಗೆ ಹಕ್ಕು ಪತ್ರವೂ ಸಿಗದಾಗಿದೆ. ಈ ಹಿಂದೆ ಬಾಲವಾಡಿಯಾಗಿದ್ದ ಕಟ್ಟಡ ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿದೆ. ಆದರೆ ಕಟ್ಟಡ ನಿರ್ವಹಣೆ ಇಲ್ಲದೆ ಗಿಡ ಗಂಟಿಗಳು ಬೆಳೆದಿದ್ದು ಸಮರ್ಪಕವಾಗಿ ನಿರ್ವಹಿಸಬೇಕಿದೆ.
ಅಂಡಾರು ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ 2 ವಾರ್ಡ್ ಒಳಗೊಂಡ ಅಂಡಾರು ಗ್ರಾಮ ಹಾಗೂ ಒಂದು ವಾರ್ಡ್ ಒಳಗೊಂಡ ಮುಟ್ಲುಪಾಡಿ ಗ್ರಾಮವಿದೆ. ಎರಡು ಗ್ರಾಮಗಳ ನಡುವೆ ದಟ್ಟಾರಣ್ಯ ಕುದುರೆಮುಖ ವನ್ಯಜೀವಿ ವಿಭಾಗವಿದೆ. ಮುಟ್ಲುಪಾಡಿ ಜನತೆ ಕಂದಾಯ ಕಚೇರಿಯನ್ನು ಸುಮಾರು 10 ಕಿ.ಮೀ. ಸಾಗಿ ಮುನಿಯಾಲು ಮಾರ್ಗವಾಗಿ ತಲುಪಬೇಕು. ಅಂಡಾರು ಮತ್ತು ಮುಟ್ಲುಪಾಡಿಯನ್ನು ಪ್ರತ್ಯೇಕ ಕಂದಾಯ ಗ್ರಾಮವನ್ನಾಗಿ ಮಾಡಿದಲ್ಲಿ ಎರಡೂ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಇದರೊಂದಿಎಗ ಮುಟ್ಲುಪಾಡಿ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಬಹಳಷ್ಟಿದೆ. ಸಚಿವರು, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಈ ಸಮಸ್ಯೆ ಬಗೆಹರಿದರೆ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ.
ಹೆಚ್ಚಿನ ಮುತುವರ್ಜಿ: ಶ್ಮಶಾನ ಕಾಮಗಾರಿ ತ್ವರಿತ ಪೂರ್ಣಗೊಳಿಸಲಾಗುವುದು. ಕೋಲಿಬೆಟ್ಟು ಸೇತುವೆ ನಿರ್ಮಾಣ ಹಾಗೂ ಅಂಡಾರು ಕಾಡುಹೊಳೆ ರಸ್ತೆ ಅಭಿವೃದ್ಧಿಗೆ ಸಚಿವರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. –
ಉಷಾ ಹೆಬ್ಟಾರ್, ಅಧ್ಯಕ್ಷರು ಗ್ರಾ. ಪಂ. ವರಂಗ
ಗ್ರಾಮೀಣ ಒಳರಸ್ತೆ ಅಭಿವೃದ್ಧಿಪಡಿಸಿ: ನಮಗೆ ತಾಲೂಕು ಕೇಂದ್ರ ಸಂಪರ್ಕಿಸಲು ಇರುವ ಪ್ರಮುಖ ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ಸಾರಿಗೆ ವ್ಯವಸ್ಥೆಯೂ ಇಲ್ಲ. ಜತೆಗೆ ಅಂಡಾರು ಬ್ರಹ್ಮ ಬೈದರ್ಕಳ ರಸ್ತೆಯೂ ಅಭಿವೃದ್ಧಿಗೊಳ್ಳಬೇಕಿದೆ. ಗ್ರಾಮೀಣ ಭಾಗದ ಒಳ ರಸ್ತೆಗಳ ಅಭಿವೃದ್ಧಿ ಜತೆಗೆ ದಾರಿ ದೀಪ ವ್ಯವಸ್ಥೆ ಆಗಬೇಕಿದೆ. –
ಮನೋಹರ ಅಚಾರ್ಯ, ಸ್ಥಳೀಯರು
-ಜಗದೀಶ್ ಅಂಡಾರು