ಬೆಂಗಳೂರು : ಬೆಂಗಳೂರು ಮೂಲದ ವಿಮಾನ ಯಾನ ಸಂಸ್ಥೆ ಅಕಾಸಾ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಮಾರ್ಗ ಮಧ್ಯೆ ಬೀಡಿ ಸೇದಿದ 56 ವರ್ಷದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬ ವಿಮಾನದಲ್ಲಿ ಮಾರ್ಗಮಧ್ಯೆಯೇ ಬಿಡಿ ಸೇದಿದ ಬಗ್ಗೆ ವಿಮಾನದಲ್ಲಿದ್ದ ಡ್ಯೂಟಿ ಮ್ಯಾನೇಜರ್ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬಂಧಿತನನ್ನು ರಾಜಸ್ಥಾನದ ಮಾರ್‌ವಾರ್ ಪ್ರದೇಶದ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಅಹಮದಾಬಾದ್‌ನಲ್ಲಿ ವಿಮಾನವೇರಿದ್ದ ಆತ ವಿಮಾನದ ಶೌಚಾಲಯದಲ್ಲಿ ಬೀಡಿ ಸೇದುತ್ತಿರುವುದನ್ನು ನೋಡಿದ ವಿಮಾನದ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸದ್ಯಕ್ಕೆ ಬಂಧಿತನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದ್ದು, ವಿಚಾರಣೆ ವೇಳೆ ಆತ ಇದು ತನ್ನ ಪ್ರಥಮ ವಿಮಾನ ಪ್ರಯಾಣವಾಗಿತ್ತು. ನಿಯಮಗಳ ಬಗ್ಗೆ ತಿಳಿದಿರದ ಕಾರಣ ಹೀಗಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ʻತಾನು ಆಗಾಗ ರೈಲಿನಲ್ಲಿ ಪ್ರಯಾಣಿಸುತ್ತೇನೆ. ಆ ವೇಳೆ ಶೌಚಾಲಯಕ್ಕೆ ತೆರಳಿ ಬೀಡಿ ಸೇದುತ್ತೇನೆ. ಆದರೆ ಈ ಬಾರಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ರೈಲಿನಂತೆ ಇಲ್ಲಿಯೂ ಶೌಚಾಲಯದಲ್ಲಿ ಧೂಮಪಾನ ಮಾಡಬಹುದೆಂದುಕೊಂಡು ಈ ತಪ್ಪೆಸಗಿದ್ದೇನೆʼ ಎಂದು ಹೇಳಿಕೊಂಡಿದ್ದಾನೆ.
ಕೆಲವೇ ದಿನಗಲ ಹಿಂದಷ್ಟೇ ವಿಮಾನದಲ್ಲಿ ಸಿಗರೇಟ್ ಸೇದಿದ ಇಬ್ಬರನ್ನು ಬಂಧಸಲಾಗಿತ್ತು. ಪದೇ ಪದೇ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದರಿಂದ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.