Advertisement

ಅಂಡಮಾನಿನ ಅಲೆಮಾರಿ “ಗೂಬೆ’

10:04 AM Jan 26, 2020 | Lakshmi GovindaRaj |

ಅಂಡಮಾನಿನ ಎಲ್ಲ ಗೂಬೆಗಳೂ ಕ್ಯಾಮೆರಾಗಳಲ್ಲಿ ಬಂಧಿಯಾದವು; ಒಂದನ್ನು ಬಿಟ್ಟು. ಒಳಬಾರದೆ ಹೊರವುಳಿದ ಗೂಬೆಯೆಂದರೆ, ಅಂಡಮಾನ್‌ ಬಾರ್ನ್ ಔಲ್‌. ಅಂದರೆ, ಅಂಡಮಾನ್‌ ಕಣಜ ಗೂಬೆ…

Advertisement

ಎರಡು ವರ್ಷದ ಹಿಂದೆ ಅಂಡಮಾನ್‌ ನಿಕೋಬಾರ್‌ಗೆ ಪಕ್ಷಿ ಫೋಟೊಗ್ರಫಿಗಾಗಿ ತೆರಳಿದ್ದೆ. ಹಗಲು- ರಾತ್ರಿ ಪಕ್ಷಿಗಳ ಬೆನ್ನು ಹತ್ತಿದ್ದೇ ಹತ್ತಿದ್ದು. 10-15 ದಿನಗಳ ಪ್ರವಾಸದಲ್ಲಿ ನಾಲ್ಕು ದಿನದ ನಿಕೋಬಾರ್‌ಗಾಗಿ ನೀರಿನ ಮೇಲೆ ಪ್ರಯಾಣದ ದಿನಗಳನ್ನು ಬಿಟ್ಟರೆ, ಬಾಕಿ ಎಲ್ಲ ದಿನವೂ ಗೂಬೆಗಳಿಗಾಗಿ ಹುಡುಕಾಡಿದ್ದೆ. ದಿನಾ ಸಂಜೆ ಮುಗೀತು ಅಂದ್ರೆ ಗೂಬೆಗಳಿಗಾಗಿ ಕಾಯುತ್ತಿದ್ದ ಗೂಬೆಗಳು ನಾವಾಗಿದ್ದೆವು. ಆ ಕತ್ತಲಲ್ಲಿ ಗೂಬೆಯ ಸದ್ದಿಗಾಗಿ, ಸುದ್ದಿಗಾಗಿ ನಿಶ್ಶಬ್ದದಲ್ಲಿ ಲೀನವಾಗಿರುತ್ತಿದ್ದೆವು.

ನಮ್ಮ ಟೀಮ್‌ ಲೀಡರ್‌ ಖುಷೂº ಶರ್ಮ ಗೂಬೆಪ್ರಿಯೆ. ಭಾರತದ ಬಹುತೇಕ ಗೂಬೆಗಳು ಅವರ ಚಿತ್ರಬುತ್ತಿಯಲ್ಲಿವೆ. ನಾನು ಪ್ರೀತಿಯಿಂದ ಅವರಿಗಿತ್ತ ಅಡ್ಡಹೆಸರು “ಗೂಬೆರಾಣಿ’. ಯಾವ ಕತ್ತಲಲ್ಲೂ ಗೂಬೆ ಗುರುತಿಸುವ ಸೂಕ್ಷ್ಮಿಣಿ. ಆಕೆಯ ಹಂಬಲ ಪೂರೈಸುವ ಹೊಣೆ ಹೊತ್ತ ನಮ್ಮ ಪಕ್ಷಿ ಮಾರ್ಗದರ್ಶಿ ವಿಕ್ರಂ, ಅಂಡಮಾನ್‌ ನಿಕೋಬಾರ್‌ನೆಲ್ಲೆಡೆ ಗೂಬೆಯ ಹಿಂದೆ ಬಿದ್ದಿದ್ದರು. ಅಂಡಮಾನಿನ ಎಲ್ಲ ಗೂಬೆಗಳೂ ಕ್ಯಾಮೆರಾಗಳಲ್ಲಿ ಬಂಧಿಯಾದವು; ಒಂದನ್ನು ಬಿಟ್ಟು. ಒಳಬಾರದೆ ಹೊರವುಳಿದ ಗೂಬೆಯೆಂದರೆ, ಅಂಡಮಾನ್‌ ಬಾರ್ನ್ ಔಲ್‌.

ಅಂದರೆ, ಅಂಡಮಾನ್‌ ಕಣಜ ಗೂಬೆ. ಬಹುತೇಕ ಊರುಗಳ ಕಣಜಗಳ ಬಳಿ, ತೋಟ ತುಡಿಕೆಗಳಲ್ಲಿ ವಾಸಿಸುವ ಕಾರಣದಿಂದ ಇದಕ್ಕೆ “ಕಣಜ ಗೂಬೆ’ ಎಂಬ ಹೆಸರು ಬಂತು. ಅಂಡಮಾನ್‌ನಲ್ಲಿ ಐದಾರು ರಾತ್ರಿಯ ನಮ್ಮ ನಿರಂತರ ಕಾಯುವಿಕೆಗೂ ಬಗ್ಗದೆ ಅದು ಕಣ್ತಪ್ಪಿಸಿಕೊಂಡಿತು. ಒಂದು ರಾತ್ರಿ ನಾವಿದ್ದ ಜಾಗದ ಸಮೀಪದ ಮರಕ್ಕೆ ಬಂದಿತ್ತು. ಅದಕ್ಕೆ ಏನನ್ನಿಸಿತೋ ಏನೋ, ಪುರ್ರನೆ ಹಾರಿ ಹೋಯಿತು. ಅದರ ಹಾರುವ ಸದ್ದಿಗಿಂತ, ನಾವೆಲ್ಲಾ ಬಿಟ್ಟ ನಿಟ್ಟುಸಿರ ಶಬ್ದವೇ ಹೆಚ್ಚಿತ್ತು ಎನ್ನಿಸಿತು.

ಈ ವರ್ಷದ ಮೊದಲ ಪ್ರಾಜೆಕ್ಟ್ ಆಗಿ, ಕಣಜ ಗೂಬೆಯನ್ನೇ ಆರಿಸಿಕೊಂಡೆ. ವರ್ಷದ ಮೊದಲ ದಿನವೇ ಬೆಳ್ಳಂಬೆಳಗ್ಗೆ ನಾಲ್ಕೂವರೆಗೆ ಬೆಂಗಳೂರಿನಿಂದ ವಿಮಾನವೇರಿ ಏಳು ಗಂಟೆಗೆಲ್ಲಾ ಪೋರ್ಟ್‌ಬ್ಲೇರ್‌ನಲ್ಲಿಳಿದೆ. ಹಡಗನ್ನೇರಿ, ಲಿಟಲ್‌ ಅಂಡಮಾನಿನಲ್ಲಿ ಇಳಿದ ಮರುಕ್ಷಣ ಲಗೇಜ್‌ ರೂಮಿನಲ್ಲಿಳಿಸಿ, ನಮ್ಮನ್ನು ಹೊತ್ತ ಗಾಡಿ ಓಡಿದ್ದು ಈ ಗೂಬೆಯತ್ತ. ಪಾಪದ ನಮ್ಮ ಕಣಜ ಗೂಬೆ, ನಮ್ಮನ್ನೇ ಕಾಯುತ್ತಾ ಕುಳಿತಿತ್ತು.

Advertisement

“ಬನ್ನಿ’ ಎಂದು ನೋಟದಲ್ಲಿ ಸ್ವಾಗತಿಸಿ, ಮತ್ತೂಂದು ತಾಣದಲ್ಲಿ ಕುಳಿತು ನೋಡತೊಡಗಿತು. ಎಲ್ಲರ ಕ್ಯಾಮೆರಾ ಕ್ಲಿಕ್ಕಿಸುವ ಸದ್ದಿಗೆ ಒಗ್ಗಿಹೋದ ಹಾಗೆ ಕುಳಿತೇ ಇತ್ತು. ನಾವೇ ಅಲ್ಲಿಂದ ಹೊರಟು ಮತ್ತೂ ಒಂದು ಜಾಗದಲ್ಲಿ ಗೂಬೆಗೆ ಹಾಯ್‌ ಹೇಳಿ ಮರಳಿದೆವು. ಆಹಾ, ಏನು ಚೆಂದದ ಬಿಳಿಬಿಳಿ ಬಣ್ಣದ ಚಂದ್ರವದನ. ಲವ್‌ ಸಿಂಬಲ್‌ನಂಥ ಮೊಗದ ರೂಪರಾಶಿ. ಪ್ರೀತಿ ಉಕ್ಕಿಸುವ ಮುದ್ದು ನೋಟ. ಅದರ ಕಣ್ಹೋಟದ ಸೆಳೆತದ ಸುಳಿಯಲ್ಲಿ ಸಿಕ್ಕಿಬೀಳದಿರಲು ಹೇಗೆ ಸಾಧ್ಯ?

ಇರುಳಿನ ಕೃತಕ ಬೆಳಕಿನಲ್ಲಿ ಕ್ಯಾಮೆರಾದ ಬಲೆಗೆ ಬಿದ್ದ ಅದನ್ನು ಹಗಲಿನ ಸಹಜ ಬೆಳಕಿನಲ್ಲೂ ಕ್ಲಿಕ್ಕಿಸುವ ಬಯಕೆಯಿಂದ ಮರುದಿನ ಮತ್ತೆ ಅದೇ ತಾಣಕ್ಕೆ ತೆರಳಿದೆವು. ಜನವಸತಿ ಇದ್ದ ಜಾಗದಲ್ಲಿ ಅಡಕೆಮರಗಳನ್ನೇ ಆವಾಸವಾಗಿಸಿಕೊಂಡಿದ್ದ 4 ಕಣಜ ಗೂಬೆಗಳಿಗೆ ಪಕ್ಕದ ಮಹಡಿಯಲ್ಲಿನ ಜಂತಿಯ ಸಂಧಿಯೂ ಪ್ರಿಯವಾದ ತಾಣವಾಗಿತ್ತು. ಮರದಿಂದ ಅಲ್ಲಿಗೆ, ಅಲ್ಲಿಂದ ಸುತ್ತಲಿನ ಮರಗಳಿಗೆ ಹಾರಾಡಿಕೊಂಡಿದ್ದವು. ಆದರೆ, ಮರದಲ್ಲಿ ಜೋಡಿಯಾಗಿ ತೆಗೆಯುವ ನನ್ನಾಸೆ ಅವಕ್ಕೆ ತಲುಪಲೇ ಇಲ್ಲ. ಎಲ್ಲಿ ಇದ್ದವೋ ಅಲ್ಲೆ ಒಂದಿಷ್ಟು ಚಿತ್ರವಾಗಿಸಿ, ಚಿತ್ತದಲ್ಲಿರಿಸಿಕೊಂಡೆ.

ಗೂಬೆ ಸೋಜಿಗ: ತೂಕ- 430- 620 ಗ್ರಾಂ., ಉದ್ದ- 30-36 ಸೆಂ.ಮೀ., ರೆಕ್ಕೆಯ ಉದ್ದ- 250-264 ಮಿ.ಮೀ., ಬಾಲ ಉದ್ದ- 110- 113 ಮಿ.ಮೀ., ಆಹಾರ- ದಿನಕ್ಕೆ 4 ಇಲಿ, ಆಯುಸ್ಸು- 5 ವರ್ಷ

ಲವ್‌ ಸಿಂಬಲ್‌ ಮುಖವೇ ಕಿವಿ!: ಕಣಜ ಗೂಬೆಗಳ ಹೃದಯಾಕಾರದ ಮುಖವೇ, ಶಬ್ದಗ್ರಹಣ ಅಂಗ. ಮನುಷ್ಯನ ಕಿವಿಯಂತೆ ಇವು ಕೆಲಸ ಮಾಡುತ್ತವೆ. ನಮ್ಮ ಕಿವಿಗಿಂತಲೂ ಇವುಗಳ ಶ್ರವಣಾಂಗ ಬಹಳ ಸೂಕ್ಷ್ಮ. ಅದರಲ್ಲೂ ಇಲಿಗಳ ಪುಟ್ಟ ಪುಟ್ಟ ಸದ್ದನ್ನೂ ಗ್ರಹಿಸುವಷ್ಟು ಇವು ಚುರುಕಾಗಿ ಕೆಲಸ ಮಾಡುತ್ತವೆ.

* ಲೀಲಾ ಅಪ್ಪಾಜಿ

Advertisement

Udayavani is now on Telegram. Click here to join our channel and stay updated with the latest news.

Next