Advertisement
ಕಸಕಡ್ಡಿಗಳನ್ನು ಬಾವಿಗೆ ಸುರಿಯುತ್ತಾರೆ…ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡುಗಳಿವೆ. ಪ್ರತೀ ವಾರ್ಡ್‌ನಲ್ಲಿಯೂ ಕನಿಷ್ಠ 5-6 ತೆರೆದ ಬಾವಿಗಳಿರಬಹುದೆಂದು ಊಹಿಸಲಾಗಿದೆ. ಇವುಗಳಲ್ಲಿ ಬಹುತೇಕ ಬಾವಿಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಬಾವಿಗಳು ಕಸಕಡ್ಡಿಗಳನ್ನು ಸುರಿಯುವ ತೊಟ್ಟಿಗಳಾಗಿ ಅವನತಿಯ ಹಾದಿಯಲ್ಲಿವೆ. ಪ್ರತೀವರ್ಷ ಬೇಸಗೆಯಲ್ಲಿ ನಗರದಲ್ಲಿ ನೀರಿನ ಅಭಾವ ಎದುರಾಗುತ್ತದೆ. ನೀರು ಪೂರೈಸಲು ಜಿಲ್ಲಾಡಳಿತ ಅನೇಕ ರೀತಿಯಲ್ಲಿ ಯಾತನೆ ಪಡುತ್ತದೆ. ಇದರ ಅರಿವಿದ್ದರೂ ನಗರಾಡಳಿತ ಬಾವಿಗಳನ್ನು ದುರಸ್ತಿಗೊಳಿಸುವ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
ಮಲ್ಪೆಯ ಲಕ್ಷ್ಮೀನಗರ, ಪೊಲೀಸ್ ಠಾಣೆ ಬಳಿ, ಪದ್ಮನಾಭ ನಗರ, ಬಡಗುಬೆಟ್ಟು, ರೈಲ್ವೇ ಬ್ರಿಡ್ಜ್ ಮೊದಲಾದ ಕಡೆಗಳಲ್ಲಿ ತೆರೆದ ಬಾವಿಗಳಿವೆ. ಕೆಲವು ಕಡೆಗಳಲ್ಲಿ ಬಳಕೆಗೆ ಯೋಗ್ಯ ಸ್ಥಿತಿಯಲ್ಲಿದ್ದರೆ, ಇನ್ನು ಕೆಲವೆಡೆಗಳಲ್ಲಿ ಬಳಕೆಗೆ ಯೋಗ್ಯವಾಗಿಲ್ಲ. ಪರ್ಕಳದ ನಗರಸಭೆ ಉಪ ಕಚೇರಿ ಆವರಣದಲ್ಲಿರುವ ಬಾವಿ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಬಾವಿಯಲ್ಲಿ ನೀರಿನ ಸೆಲೆ ಇದ್ದರೂ ಪಾಳು ಬಿದ್ದಿದೆೆ. ಬಾವಿಯೊಳಗೆ ಕಸದ ರಾಶಿಗಳು ತುಂಬಿವೆ. ಸುತ್ತಮುತ್ತ ಗಿಡಬಳ್ಳಿಗಳು ಬೆಳೆದು ಪೊದೆಗಳಿಂದ ಮುಚ್ಚಿದ ಸ್ಥಿತಿಯಲ್ಲಿದೆ. ಪುನಶ್ಚೇತನಕ್ಕೆ ಕಾಲ ಸನ್ನಿಹಿತ
ಈ ಬಾವಿಗಳ ಹೂಳೆತ್ತಿ ನೀರನ್ನು ಸ್ವತ್ಛಗೊಳಿಸಿದರೆ ಬಳಸಲು ಅಡ್ಡಿಯಾಗದು. ಪಾಳುಬಿದ್ದ ಬಾವಿಗಳಿಗೆ ಕಾಯಕಲ್ಪ ನೀಡಿದಲ್ಲಿ ಕಡು ಬೇಸಗೆಯ ನೀರಿನ ತಾಪತ್ರಯಗಳ ಭಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಪುರಾತನ ಬಾವಿಗಳ ಪುನಶ್ಚೇತನಕ್ಕೆ ಕಾಲ ಕೂಡ ಈಗ ಸನ್ನಿಹಿತಗೊಂಡಿದೆ. ತೆರೆದ ಬಾವಿಗಳನ್ನು ಗುರುತಿಸಿ ದುರಸ್ತಿ ನಡೆಸಿ ಬಳಕೆಗೆ ಯೋಗ್ಯವಾಗಿಸಿದಲ್ಲಿ ಕಡು ಬೇಸಗೆಯಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅನುದಾನಗಳು ಸದ್ಭಳಕೆಯಾಗಿ ಎಲ್ಲ ಬಾವಿಗಳು ಶುದ್ಧಗೊಂಡರೆ ನೀರಿನ ಕೊರತೆ ನೀಗುವ ವಿಶ್ವಾಸವನ್ನು ನಾಗರಿಕರು ಹೊಂದಿದ್ದಾರೆ.
Related Articles
Advertisement
ಬಜೆಟ್ ಸಿದ್ಧಪಡಿಸಿಲ್ಲನಗರಸಭೆ ವ್ಯಾಪ್ತಿಯ ತೆರೆದ ಬಾವಿಗಳ ಪಟ್ಟಿ ಸಿದ್ಧಪಡಿಸುವಂತೆ ವಿಭಾಗದ ಎಂಜಿನಿಯರ್‌ಗೆ ಸೂಚಿಸಲಾಗುವುದು. ಬಜೆಟ್ ಸಿದ್ಧವಾದ ಬಳಿಕ ಬಾವಿಗಳನ್ನು ಪುನಶ್ಚೇತನಗೊಳಿಸುವತ್ತ ಗಮನ ಹರಿಸಲಾಗುವುದು.
-ಆನಂದ ಕಲ್ಲೋಳಿಕರ್,
ಪೌರಾಯುಕ್ತರು ನಗರಸಭೆ. ನೀರು ಬಳಕೆಯಾಗುತ್ತಿಲ್ಲ
ತೆರೆದ ಬಾವಿಗಳಿಂದ ನೀರು ಸೇದುವವರು ಈಗ ಕಡಿಮೆ. ಪರ್ಕಳದಲ್ಲಿರುವ ಬಾವಿಯ ನೀರನ್ನು ಯಾರೂ ಕೂಡ ಬಳಸುತ್ತಿಲ್ಲ. ಬಳಸದೇ ಇದ್ದ ಕಾರಣ ಪಾಳು ಬಿದ್ದಿದೆ. ಅಲೆಮಾರಿಗಳು ಬಾವಿ ಬಳಿಯಲ್ಲಿ ಬಿಡಾರ ಹೂಡಿ ಕಸ, ಕಡ್ಡಿಗಳನ್ನು ಬಾವಿಗೆ ಹಾಕಿ ನೀರನ್ನು ಕಲುಷಿತಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರ ನಿರ್ವಹಣೆಯತ್ತ ಗಮನಹರಿಸಲಾಗುವುದು.
-ಸುಮಿತ್ರಾ ಆರ್. ನಾಯಕ್, ಪರ್ಕಳ ವಾರ್ಡ್ ಸದಸ್ಯೆ -ಬಾಲಕೃಷ್ಣ ಭೀಮಗುಳಿ