ಮಹಾನಗರ: ಪಂಚ ದ್ರಾವೀಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಸಿಗಬೇಕಾದ ಮನ್ನಣೆ, ಸ್ಥಾನಮಾನ, ಗೌರವ ಇನ್ನೂ ಸಿಕ್ಕಿಲ್ಲ. ಅತ್ಯಂತ ಪ್ರಾಚೀನ ಭಾಷೆಯಾದ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರದಿರುವುದು ಖೇದಕರ ಎಂದು ಹಿರಿಯ ಸಾಹಿತಿ ಡಾ| ವಾಮನ ನಂದಾವರ ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ತುಳುಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಬಹುಭಾಷಾ ಕವಿ ಮಹಮ್ಮದ್ ಬಡೂxರು, ಮೊಗ ಮೂರ್ತಿ ಲೋಹ ಶಿಲ್ಪಿ ಕುಂಞಿ ರಾಮನ್ ಅವರಿಗೆ ಚಾವಡಿ ಸಮ್ಮಾನ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಮಾತನಾಡಿ, ತುಳು ಭಾಷಾ ಸಂಸ್ಕೃತಿ ವಿಶಾಲವಾದುದು. ಆದರೂ ತುಳು ಭಾಷೆಗೆ ದೊರಕಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ ಎಂಬುವುದು ಬೇಸರದ ಸಂಗತಿ. ಭಾಷೆಗೆ ಅಧಿಕೃತ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ 2003ರಲ್ಲಿ ತುಳು ಸಹಿತ ಒಟ್ಟು 4 ಭಾಷೆಗಳು ಸಾಲಿನಲ್ಲಿದ್ದವು. ಅದರಲ್ಲಿ 3 ಭಾಷೆಗಳಿಗೆ ಸ್ಥಾನಮಾನ ಸಿಕ್ಕಿತ್ತು. ಆದರೆ ತುಳು ಭಾಷೆ ಮಾತ್ರ ಹಿಂದುಳಿಯಿತು ಎಂದರು.
ತಮ್ಮನ ಸ್ವೀಕರಿಸಿದ ಸಾಹಿತಿ ಮಹಮ್ಮದ್ ಬಡೂxರು ಮಾತನಾಡಿ, ತುಳುನಾಡಿನಲ್ಲಿರುವ ಎಲ್ಲರೂ ತುಳುವರು. ತುಳುನಾಡು ಒಂದು ಮನೆ ಇದ್ದ ಹಾಗೆ. ಈ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.
ಮಂಗಳೂರು ವಿ.ವಿ. ನಾರಾಯಣ ಗುರು ಅಧ್ಯಯನ ಪೀಠದ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಉಪಸ್ಥಿತರಿದ್ದರು. ತುಳು ಸಾ. ಅ. ರಿಜಿಸ್ಟ್ರಾರ್ ರಾಜೇಶ್ ಜಿ. ಸ್ವಾಗತಿಸಿದರು. ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಅಕಾಡೆಮಿ ಸದಸ್ಯರಾದ ಚೇತನ್ ಪೂಜಾರಿ, ತಾರಾ ಉಮೇಶ ಆಚಾರ್ಯ ಸಮ್ಮಾನಿತರರನ್ನು ಪರಿಚಯಿಸಿದರು.