ಹೊಸದಿಲ್ಲಿ: ಸರಕಾರದ ರಕ್ಷಣೆಯಲ್ಲಿರುವ ದೇಶದ ಪುರಾತನ ಸ್ಥಳಗಳ ಪುನರ್ ವಿಂಗಡಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಆಯಾ ಸ್ಥಳಗಳ ಮಹತ್ವ ಹಾಗೂ ಐತಿಹಾಸಿಕ ಪ್ರಾಮುಖ್ಯತೆಯನ್ನು ಆಧರಿಸಿ ಈ ವರ್ಗೀಕರಣ ಮಾಡಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.
1958ರ ಪುರಾತನ ಸ್ಮಾರಕಗಳು ಹಾಗೂ ಪ್ರಾಚ್ಯವಸ್ತು ಸ್ಥಳ ಮತ್ತು ಅವಶೇಷಗಳ ಕಾಯ್ದೆಯ ಪ್ರಕಾರ, ಸರಕಾರದ ಸಂರಕ್ಷಣೆಯಲ್ಲಿರುವ ಐತಿಹಾಸಿಕ ಕಟ್ಟಡಗಳ ಸುತ್ತಲೂ ಸುಮಾರು 100 ಮೀ.ವರೆಗೆ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಅವಕಾಶವಿಲ್ಲ. 100ರಿಂದ 200 ಮೀ.ರವರೆಗಿನ ವ್ಯಾಪ್ತಿಯಲ್ಲಿ ಆಗುವ ಯಾವುದೇ ನಿರ್ಮಾಣಗಳ ಮೇಲೆ ಸರಕಾರದ ನಿಯಂತ್ರಣವಿರುತ್ತದೆ.
ಆದರೆ, ಈ ಬಿಗಿ ನಿಯಮಗಳಿಂದಾಗಿ ಕೆಲವು ವರ್ಷಗಳಿಂದ ಈ ಪ್ರಾಂತ್ಯಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ, ನಿಯಮಗಳ ಸಡಿಲಿಕೆಗಾಗಿ, ಕಾಯ್ದೆಗೆ ತಿದ್ದುಪಡುವ ಉದ್ದೇಶದ ವಿಧೇಯಕವೊಂದನ್ನು ಕಳೆದ ಸಂಸತ್ ಅಧಿವೇಶನದಲ್ಲೇ ಮಂಡಿಸಲಾಗಿದ್ದು, ಅದಕ್ಕೆ ಲೋಕಸಭೆ ಒಪ್ಪಿಗೆ ನೀಡಿದೆ. ರಾಜ್ಯಸಭೆಯು ಈ ವಿಧೇಯಕವನ್ನು ಸಂಸತ್ ಸಮಿತಿಯೊಂದರ ಅವಗಾಹನೆಗೆ ಕಳುಹಿಸಿದೆ.
– ಪುರಾತನ ಸ್ಥಳಗಳ ಐತಿಹಾಸಿಕ ಮಹತ್ವದ ಆಧಾರದ ಮೇಲೆ ವಿಂಗಡಿಸಲು ನಿರ್ಧಾರ
– 1958ರ ಪುರಾತನ ಸ್ಮಾರಕಗಳ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರದ ಉದ್ದೇಶ
– ತಿದ್ದುಪಡಿ ವಿಧೇಯಕಕ್ಕೆ ಸಂಸತ್‌ನ ಕಳೆದ ಅಧಿವೇಶನದಲ್ಲೇ ಲೋಕಸಭೆಯಲ್ಲಿ ಅನುಮೋದನೆ
– ಸದ್ಯಕ್ಕೆ ಸಂಸದೀಯ ಸಮಿತಿಯೊಂದರ ಅವಗಾಹನೆಯಲ್ಲಿರುವ ವಿಧೇಯಕ