Advertisement

ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ

05:51 PM Nov 12, 2024 | Team Udayavani |

ಉದಯವಾಣಿ ಸಮಾಚಾರ
ಬೆಂಗಳೂರು: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿರುವ ಅಲ್ಲಮಪ್ರಭು ಸ್ವಾಮಿ ದೇವಸ್ಥಾನ, ಅದರ ಶಿಲ್ಪಕಲೆ ಹಾಗೂ ಪ್ರಾಚೀನತೆಯು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ-1961ರ ಅನ್ವಯ ಪುರಾತನ ಸ್ಮಾರಕಗಳ ವ್ಯಾಪ್ತಿಗೆ ಬರಲಿದೆಯೇ ಎಂಬ
ಬಗ್ಗೆ ನಿರ್ಧರಿಸಲು ತ್ರಿಸದಸ್ಯ ತಜ್ಞರ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿ ಅಪಾಯದ ಅಂಚಿನಲ್ಲಿರುವ ಅಲ್ಲಮಪ್ರಭು ಸ್ವಾಮಿ ದೇವಸ್ಥಾನವನ್ನು ಸುರಕ್ಷಿತವಾಗಿ ಬೇರೆ ಕಡೆ ಸ್ಥಳಾಂತರಿಸಬೇಕು ಹಾಗೂ ದೇವಸ್ಥಾನವನ್ನು ಸಂರಕ್ಷಿತ ಪುರಾತನ ಸ್ಮಾರಕವೆಂದು ಘೋಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಮಹಾರಾಷ್ಟ್ರದ ಕೊಲ್ಹಾಪುರದ ಕಾನೂನು ವಿದ್ಯಾರ್ಥಿ ನಿಖಿಲ್‌ ವಿಠಲ್‌
ಪಾಟೀಲ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ವಾದ ಮಂಡಿಸಿ, ಅಲ್ಲಮ ಪ್ರಭು ದೇವಾಲಯ 17-18ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಪ್ರಾಚೀನ ಸ್ಮಾರಕದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ-1958ರ ಪ್ರಾಚೀನ ಸ್ಮಾರಕಗಳ ವ್ಯಾಖ್ಯಾನದ ವ್ಯಾಪ್ತಿಗೆ ಈ ದೇವಾಲಯ ಬರಲಿದೆ. ಆದರೆ, ಕಾಯ್ದೆಯಡಿ ಅದನ್ನು ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿಲ್ಲ. ಒಂದೊಮ್ಮೆ ಕೇಂದ್ರ ಕಾಯ್ದೆಯಡಿ ಪ್ರಾಚೀನ ಸ್ಮಾರಕವೆಂದು ಘೋಷಿಸಿಲ್ಲ ಎಂದಾದರೆ ಅದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಬೇಕು ಎಂದರು.

ಅದಕ್ಕೆ, ಅಲ್ಲಮಪ್ರಭು ಸ್ವಾಮಿ ದೇವಸ್ಥಾನ, ಅದರ ಶಿಲ್ಪಕಲೆ ಹಾಗೂ ಪ್ರಾಚೀನತೆಯು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ-1961ರ ಅನ್ವಯ ಪುರಾತನ ಸ್ಮಾರಕಗಳ ವ್ಯಾಪ್ತಿಗೆ ಬರಲಿದೆಯೇ ಎಂಬುದನ್ನು ನಿರ್ಧರಿಸಲು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಯನ್ನು ಒಳಗೊಂಡ ಮೂವರು
ಸದಸ್ಯರ ಸಮಿತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಚನೆ ಮಾಡಬೇಕು. ಆ ಸಮಿತಿಯು ಅಧ್ಯಯನ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಡಿ. 10ಕ್ಕೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next