Advertisement

ಅವಸಾನದ ಅಂಚಿನಲ್ಲಿರುವ ಪುರಾತನ ಕಲ್ಯಾಣಿ

11:30 AM May 14, 2019 | Suhan S |

ಮುಳಬಾಗಿಲು: ತಾಲೂಕಿನ ದುಗ್ಗಸಂದ್ರ ಹೋಬಳಿ ಮಂಡಿಕಲ್ ಗ್ರಾಮದಲ್ಲಿ ಬೃಹತ್‌ ಕಲ್ಯಾಣಿಯಿದ್ದು, ನಿರ್ವಹಣೆ ಇಲ್ಲದೇ, ಹೂಳು ತುಂಬಿ ಹೊಂಡವಾಗಿದೆ. ಗ್ರಾಮಕ್ಕೆ ಒಂದಿಕೊಂಡಂತೆ ಅನತಿ ದೂರದಲ್ಲಿಯೇ ಪ್ರಸನ್ನ ಚೌಡೇಶ್ವರಿ ದೇವಾಲಯವಿದೆ. ಪ್ರತಿ ವರ್ಷ ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ನಡೆಯುತ್ತಿದೆ.

Advertisement

ಹಿಂದೆ ದೇವರ ವಿಗ್ರಹಕ್ಕೆ 70x70x24 ಅಡಿ ವಿಸ್ತೀರ್ಣವುಳ್ಳ ಕಲ್ಯಾಣಿಯಲ್ಲಿ ಚಕ್ರಸ್ನಾನ ಮಾಡಿಸಿ, ನಂತರ ಜಾತ್ರೆಗೆ ಚಾಲನೆ ನೀಡಲಾಗುತ್ತಿತ್ತು. ಜೊತೆಗೆ ಗ್ರಾಮದ ಜನರು ಕಲ್ಯಾಣಿಯ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದರು. ಕಾಲನಂತರದಲ್ಲಿ ಕಲ್ಯಾಣ ನಿರ್ವಹಣೆ ಇಲ್ಲದೆ, ಮುಚ್ಚಿದ್ದರಿಂದ ಚಕ್ರ ಸ್ನಾನ ಕಾರ್ಯಕ್ರಮವನ್ನು ವನದಲ್ಲಿರುವ ಒಂದು ಸಣ್ಣ ಕೊಳದಲ್ಲಿ ನಡೆಸಲಾಗುತ್ತಿದೆ. ಬಹಳಷ್ಟು ಭಕ್ತರು ಬಂದು ಅಲ್ಲಿ ಸ್ನಾನ ಮಾಡಿ ಒಂದು ನಾಗರಕಲ್ಲನ್ನು ಕಲ್ಯಾಣಿಯ ಮೇಲ್ಗಡೆ ಪ್ರತಿಷ್ಠಾಪಿಸಿದರೆ ರೋಗರುಜಿನಗಳು ವಾಸಿಯಾಗುವುದು ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.

ಕೊಳಚೆ ನೀರು: ಕಲ್ಯಾಣಿ ಅಂಚಿನಲ್ಲಿಯೇ ಪ್ರಾಚೀನ ಕಾಲದ ನಾಗರಕಲ್ಲುಗಳ ಜೊತೆ ವೀರಕಲ್ಲುಗಳಿವೆ. ಈ ಒಂದು ಪುಷ್ಕರಣಿಯಲ್ಲಿಯೇ ಪಾಳೆಗಾರ ಬಿಸೇಗೌಡರು ಸ್ನಾನ ಮಾಡಿ ನಂತರ ಚೌಡೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಚಂದ್ರಗಿರಿ ಕೊಳ್ಳೆಯನ್ನು ಹೊಡೆಯಲು ಹಾಗೂ ಇತರೆ ಕಡೆಗಳಿಗೆ ಪ್ರಯಾಣ ಬೆಳೆಸಿದ್ದರು ಎನ್ನುವುದು ಗ್ರಾಮಸ್ಥರ ನಂಬಿಕೆ. ಈ ಕಲ್ಯಾಣಿಗೆ ಅರಣ್ಯದಿಂದ ರಾಜಕಾಲುವೆ ಇದ್ದು, ಆ ಮೂಲಕ ಮಳೆಗಾಲದಲ್ಲಿ ನೀರು ಹರಿದು ಬರುತ್ತಿತ್ತು. ಆದರೆ, ಈಗ ಮಳೆಯೂ ಇಲ್ಲ, ರಾಜ ಕಾಲುವೆಯೂ ಇಲ್ಲ. ಕೆಸರು ನೀರು ತುಂಬಿಕೊಂಡು ದುರ್ನಾತ ಬೀರುತ್ತಿದೆ.

ಗತವೈಭವ ಮರುಕಳುಹಿಸಿ: ಈ ಕಲ್ಯಾಣಿಯಲ್ಲಿ ನೀರು ತುಂಬಾ ಕಡಿಮೆಯಾಗಿದೆ. 3 ಮೀಟರ್‌ ಆಳದಷ್ಟು ಹೂಳು ತುಂಬಿದ್ದು, ಅದರ ಮೇಲೂ ಎರಡು ಅಡಿ ನೀರು ಈಗಲೂ ಇದೆ. ಅದು ಕೊಳಚೆ ನೀರಾಗಿರುವ ಪರಿಣಾಮ ಬಳಸಲು ಯೋಗ್ಯವಾಗಿಲ್ಲ. ಶೀಘ್ರ ಕಲ್ಯಾಣಿ ಪುನಶ್ಚೇತನಗೊಳಿಸಿ ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡಬೇಕೆಂದು ಗ್ರಾಮದ ಮುಖಂಡ ಎಸ್‌.ಚೌಡಪ್ಪ ಮತ್ತು ಮಂಡಿಕಲ್ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಮಾಧವರಾವ್‌ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಎಂ.ನಾಗರಾಜಯ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next