Advertisement
ತಾಲೂಕಿನಲ್ಲಿ 364 ಕೆರೆಗಳಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಮಡಿವಾಡ ಚೊಕ್ಕೊಂಡಹಳ್ಳಿ, ಶಿವಾರಪಟ್ಟಣ ಅರಳೇರಿ, ಮಿಂಡಹಳ್ಳಿ, ಮತ್ತಿತರ ಕಡೆಗಳಲ್ಲಿ ಪುರಾತನ ಕಲ್ಯಾಣಿಗಳಿದ್ದು, ಪಟ್ಟಣದಲ್ಲಿಯೂ ಗಜಾಗುಂಡ್ಲ, ಕಪ್ಪಶೆಟ್ಟಿ ಬಾವಿಯಂತಹ ಕಲ್ಯಾಣಗಳಿದ್ದವು. ಜಿಲ್ಲೆಯನ್ನು ಆಳಿದ್ದ ಗಂಗರು ಪ್ರತಿ ಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಿದ್ದರೂ ಎನ್ನಲಾಗಿದೆ. ಇದರ ಜೊತೆಗೆ ಸರ್ಕಾರವು ಜಲಾನಯನ ಇಲಾಖೆಯ ಮೂಲಕ ಕೃಷಿ ಭೂಮಿ ಬಳಿ 275ಕ್ಕೂ ಹೆಚ್ಚು ಚೆಕ್‌ಡ್ಯಾಂ ನಿರ್ಮಿಸಿದೆ.
Related Articles
Advertisement
ಮಾಲೂರು ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ತನ್ನದೇ ಪಾತ್ರ ವಹಿಸಿದ್ದ ಕುಪ್ಪಶೆಟ್ಟಿಬಾವಿ ಕಲ್ಯಾಣಿ, ಗಾಂಧಿವೃತ್ತದ ತಿಪ್ಪಾಳಗಳನ್ನು ಮುಚ್ಚಿ ವರ್ಷಗಳೇ ಕಳೆದಿವೆ. ತಿಪ್ಪಾಳದ ಕಲ್ಯಾಣಿಯನ್ನು ಪುರಸಭೆ ಸಾರ್ವಜನಿಕ ಹರಾಜು ಮೂಲಕ ಪರಭಾರೆ ಮಾಡಿಯೂ ಅಗಿದೆ. ರೈಲ್ವೆ ನಿಲ್ದಾಣದ ಬಳಿಯಲ್ಲಿನ ಮಂಡೆಪ್ಪನ ಬಾವಿಯನ್ನು ಮೈಸೂರು ಸಂಸ್ಥಾನದ ದಿವಾನ್ ಪೂರ್ಣಯ್ಯ ಕಟ್ಟಿಸಿದ್ದರು. ಪ್ರಸ್ತುತ ನಿರ್ವಹಣೆ ಕೊರತೆ ಕಾರಣ ಮಳೆ ನೀರಿನ ಜೊತೆಗೆ ಚರಂಡಿ ನೀರೂ ನಿಂತು, ಕಸ ಹಾಕಿ ಮುಚ್ಚಲಾಗುತ್ತಿದೆ.
ತಾಲೂಕಿನ ಮಡಿವಾಳ ಗ್ರಾಮದ ಬಳಿಯಲ್ಲಿದ್ದ ಪುರಾತನ ಶಂಕರಯ್ಯನ ಕುಂಟೆಯನ್ನು ಸಮೀಪದಲ್ಲೇ ಬಡಾವಣೆ ಮಾಡುತ್ತಿರುವ ಡೆವಲಪರ್‌ಗಳು ರಾತ್ರೋರಾತ್ರಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನ ಸಂತೇಹಳ್ಳಿ ಗ್ರಾಪಂ ವ್ಯಾಪ್ತಿಯ ಬೇಚರಕ್ ಗ್ರಾಮವಾಗಿರುವ ಪಟ್ಟಿಗೆನಹಳ್ಳಿ ಸರ್ವೆ ನಂಬರ್ 16ರ ಪೈಕಿ 1.4 ಎಕರೆಯಲ್ಲಿರುವ ಕುಂಟೆಯಲ್ಲಿ ಇಂದಿಗೂ ನೀರಿನ ಸಂಗ್ರಹವಿದೆ. ಈ ಭಾಗದಲ್ಲಿನ ಕಾಡು ಪ್ರಾಣಿಗಳಿಗೆ ಅಶ್ರಯವಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಕೊರತೆಯಿಂದ 1.4 ಎಕರೆ ಪ್ರದೇಶದ ಕುಂಟೆಯ ಅಕ್ಕಪಕ್ಕದ ಜಮೀನು ಒತ್ತುವರಿಯಾಗಿದ್ದು, ಉಳಿದ ಅಲ್ಪಸ್ವಲ್ಪ ಭಾಗದ ಸರ್ಕಾರಿ ಕುಂಟೆಯು ಭೂ ಮಾಫಿಯಾಗಳ ಪಾಲಾಗುವುದರಲ್ಲಿ ಸಂಶಯವಿಲ್ಲ.
ಪಟ್ಟಿಗೆನಹಳ್ಳಿ ಕುಂಟೆಯಲ್ಲಿನ ನೀರು ಕಾಡು ಪ್ರಾಣಿಗಳಿಗೆ ಅಗತ್ಯವಾಗಿದೆ. ಆದರೆ, ನೀರನ್ನು ಅಕ್ರಮವಾಗಿ ಇಟ್ಟಿಗೆ ಕಾರ್ಖಾನೆಯವರು, ಬಡಾವಣೆ ನಿರ್ಮಾಣಕ್ಕೆ ಉಪಯೋಗವಾಗುತ್ತಿರುವುದನ್ನು ತಡೆಯಬೇಕಾಗಿದೆ. ಕುಂಟೆಯಲ್ಲಿನ ನೀರಿಗೆ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರನ್ನು ಇಟ್ಟಿಗೆ ಕಾರ್ಖಾನೆ, ಲೇಔಟ್‌ಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಯಬೇಕಾಗಿದೆ. ನೀರು ಸಾಗಿಸಲು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದು, ಬೆಸ್ಕಾಂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಡಾ.ವಿಶ್ವನಾಥ್, ಜಿಪಂ ಸಿಇಒ ಆಗಿದ್ದ ರಾಜೇಂದ್ರಚೋಳನ್ ಇಚ್ಛಾಶಕ್ತಿಯ ಫಲವಾಗಿ ತಾಲೂಕಿನ ಹತ್ತಾರು ಕಲ್ಯಾಣಿಗಳು, ಗೋಕುಂಟೆಗಳನ್ನು ಪ್ರತಿವಾರ ಒಂದು ಕಲ್ಯಾಣಿ ಆಯ್ಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರ ಸಹಕಾರೊಂದಿಗೆ ಹೂಳು ತೆಗೆಯುವ ಕಾರ್ಯ ಮಾಡಿದ್ದರ ಫಲವಾಗಿ ಇಂದಿಗೂ ಕೆಲ ಕಲ್ಯಾಣಿಗಳಲ್ಲಿ ನೀರಿದೆ.
ಇಂತಹ ಮಹತ್ವದ ಕಾರ್ಯದಿಂದಾಗಿ ಜಿಲ್ಲೆಯ ಹತ್ತಾರು ಕಲ್ಯಾಣಿಗಳು ಮತ್ತು ಗೋಕುಂಟೆಗಳು ಮರುಪೂರಣಕ್ಕೆ ಕಾರಣವಾಗಿವೆ. ಇಂತಹ ಮಾದರಿ ಪ್ರಯತ್ನಗಳ ನಡುವೆಯೂ ಪ್ರಸ್ತುತ ಅಡಳಿತವು ಗ್ರಾಮಗಳ ಮಧ್ಯಭಾಗದಲ್ಲಿನ ಕಲ್ಯಾಣಿ, ಗೋಕುಂಟೆ ಮುಚ್ಚುತ್ತಿದೆ.
ಪ್ರಸ್ತುತ ಸರ್ಕಾರ ನೂರಾರು ಕೋಟಿ ರೂ. ವೆಚ್ಚ ಮಾಡಿ ಕೆ.ಸಿ.ವ್ಯಾಲಿ, ಎತ್ತಿನಹೊಳೆ ಹಾಗೂ ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಕಾಲದಲ್ಲಿ ಜಿಲ್ಲೆಯ ಕೆರೆ ಕುಂಟೆ ಕಲ್ಯಾಣಿಗಳು ತುಂಬಿ ಸಮೃದ್ಧಿಯಾಗುವ ವಿಶ್ವಾಸವಿದೆ. ತಾಲೂಕು ಅಡಳಿತ ಅವುಗಳ ಉಳಿಸುವ ಕಾರ್ಯ ಮಾಡಬೇಕಾಗಿದೆ.
● ಎಂ.ರವಿಕುಮಾರ್