ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಧ್ಯಪ್ರದೇಶದ ಬಾಂಧವ್ ಗಢ್ ನಲ್ಲಿ ಉತ್ಖನನ ನಡೆಸಿದ ವೇಳೆ ಪುರಾತನ ಗುಹೆ, ದೇವಾಲಯಗಳು, ಬೌದ್ಧರ ಕಾಲದ ಅವಶೇಷಗಳು, ಮಥುರಾ, ಕೌಶಂಬಿ ನಗರಗಳ ಹೆಸರನ್ನು ಹೊಂದಿರುವ ಪುರಾತನ ಲಿಪಿಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ಯಶ್; ಏನಿದು ಕಲಾಶ್ನಿಕೋವ್ ಗನ್ ಕಥೆ?
1938ರ ನಂತರ ಮೊದಲ ಬಾರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ತಂಡ ಬಾಂಧವ್ ಗಢ್ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಸುಮಾರು ಒಂದು ತಿಂಗಳ ಕಾಲ ಉತ್ಖನನ ನಡೆಸಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಪ್ರದೇಶ ಸುಮಾರು 170 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವುದಾಗಿ ವರದಿ ವಿವರಿಸಿದೆ.
ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉತ್ಖನನ ಕಾರ್ಯಾಚರಣೆಯಲ್ಲಿ 26 ದೇವಾಲಯಗಳು, 26 ಗುಹೆಗಳು, 2 ಬೌದ್ಧ ವಿಹಾರ, 2 ಸ್ತೂಪ, 24 ಶಿಲಾಶಾಸನಗಳು, 46 ಶಿಲ್ಪಗಳು ಹಾಗೂ 19 ನೀರಿನ ಮಾರ್ಗದ ರಚನೆಯನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದೆ.
ಮೇ 20ರಿಂದ ಜೂನ್ 27ರವರೆಗೆ ನಡೆಸಿದ ಉತ್ಖನನದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜಬಲ್ಪುರ್ ವಲಯ ಕೂಡಾ ಅನೇಕ ಪ್ರಾಚೀನ ಶಿಲ್ಪಗಳು ದೊರೆತಿರುವುದಾಗಿ ವರದಿ ನೀಡಿತ್ತು. ಇದರಲ್ಲಿ ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಒಂದಾದ ವರಾಹ ಮತ್ತು ಮತ್ಸ್ಯ ಶಿಲ್ಪ ಮತ್ತು ನೈಸರ್ಗಿಕ ಗುಹೆಯಲ್ಲಿ ಕೊರೆದ ಬೋರ್ಡ್ ಆಟಗಳು ಸೇರಿದಂತೆ ಹಲವು ಶಿಲ್ಪಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಬಲ್ಪುರ್ ಸರ್ಕಲ್ ನ ಹಿರಿಯ ಪುರಾತತ್ವ ಶಾಸ್ತ್ರಜ್ಞ ಎಸ್.ಕೆ. ಬಾಜ್ ಪೈ ನೇತೃತ್ವದ ತಂಡ ಉತ್ಖನನ ಕೈಗೊಂಡಿದ್ದು, ಈ ಬಗ್ಗೆ ನವದೆಹಲಿಯ ಎಎಸ್ ಐ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಉತ್ಖನನ ಕುರಿತ ಮಾಹಿತಿ ಮತ್ತು ಚಿತ್ರಗಳ ಕುರಿತು ವಿವರ ನೀಡಿರುವುದಾಗಿ ವರದಿ ತಿಳಿಸಿದೆ.
ನನಗೆ ಹಿಂದೂ ರಾಜವಂಶ ಆಳ್ವಿಕೆ ನಡೆಸಿದ ಪ್ರದೇಶದಲ್ಲಿ ಬೌದ್ಧರ ರಚನೆಗಳ ಅವಶೇಷ ಕಂಡು ಬಂದಿರುವುದು ಅಚ್ಚರಿ ಮೂಡಿಸಿತ್ತು. ಇದು ಧಾರ್ಮಿಕ ಸಾಮರಸ್ಯವನ್ನು ಸೂಚಿಸುತ್ತದೆ. ಆದರೆ ಬೌದ್ಧ ರಚನೆಗಳನ್ನು ಯಾರು ನಿರ್ಮಿಸಿದ್ದರು ಎಂಬ ಬಗ್ಗೆ ತಿಳಿದುಬಂದಿಲ್ಲ ಎಂದು ಬಾಜ್ ಪೈ ತಿಳಿಸಿದ್ದಾರೆ.