Advertisement
ಹಾಯ್..ಹಲೋ..ನಮಸ್ಕಾರ…ಎನ್ನುತ್ತಲೇ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ, ನಿರರ್ಗಳವಾಗಿ ಪದಪುಂಜಗಳನ್ನೇ ತೇಲಿ ಬಿಡುವ ಹುಡುಗ-ಹುಡುಗಿಯರನ್ನು ಕಂಡಾಗಲೆಲ್ಲ ನಾವೂ ಅವರಂತಾಗಬೇಕು, ಅವರಂತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಬೇಕು, ಮೈಕ್ ಮುಂದೆ ನಿಂತು ನಿರರ್ಗಳ ಪದಮುತ್ತುಗಳನ್ನು ಉದುರಿಸಬೇಕೆಂಬ ಬಯಕೆ, ಆಸೆ ಚಿಗುರೊಡೆಯುವುದು ಸಾಮಾನ್ಯ. ಆದರೆ, ಅಂತಹ ಮಾತುಗಾರಿಕೆ ಕಲೆ ಸುಮ್ಮನೇ ಬಂದೀತೆ? ಆ್ಯಂಕರಿಂಗ್ ಅವಕಾಶ ದಕ್ಕಿಸಿಕೊಳ್ಳಲು ಅವಿರತ ಶ್ರಮವೂ ಅಗತ್ಯ ಎನ್ನುವುದು ಅಷ್ಟೇ ಪ್ರಾಮುಖ್ಯ.
ಯಾವುದೇ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ಜನ ಸಾಮಾನ್ಯರಿಗೆ ಮನಮುಟ್ಟುವಂತೆ ತಿಳಿಸುವುದು ಆ್ಯಂಕರ್ ಎನಿಸಿಕೊಂಡವರ ಕರ್ತವ್ಯ. ಮುಖ್ಯವಾಗಿ ಒಬ್ಬ ಯಶಸ್ವಿ ನಿರೂಪಕನಾಗಿ ರೂಪು ತಳೆಯಬೇಕಾದರೆ ಮಾತುಗಾರಿಕೆಯ ಕಲೆಯೊಂದಿದ್ದರೆ ಸಾಲದು. ಮಾತನಾಡಿದ್ದನ್ನು ಜನಮಾನಸಕ್ಕೆ ತಲುಪಿಸುವುದು ಅಷ್ಟೇ ಮುಖ್ಯ. ಸಮರ್ಥ ಭಾಷಾ ಹಿಡಿತದೊಂದಿಗೆ ಆಂಗಿಕ ಭಾಷಾ ಹಿಡಿತವೂ ಇಲ್ಲಿ ಮುಖ್ಯವಾಗುತ್ತದೆ. ಶುದ್ಧ ಭಾಷಾಜ್ಞಾನ, ಉತ್ತಮ ಸಂವಹನ ಕೌಶಲ, ಪ್ರಾಪಂಚಿಕ ಜ್ಞಾನ, ಶಬ್ದಭಂಡಾರ, ಆಕರ್ಷಕ ಮೈಕಟ್ಟು, ಆರೋಗ್ಯಕರ ಮನಸ್ಸು, ಆತ್ಮವಿಶ್ವಾಸ ಇವಿಷ್ಟಿದ್ದರೆ ನಿರೂಪಣೆ ಕ್ಷೇತ್ರದಲ್ಲಿ ಪಳಗುವುದು ಸುಲಭ.
Related Articles
ಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡರೆ ಹಲವಾರು ಕಾರ್ಯಕ್ರಮಗಳ ನಿರೂಪಣೆಗೆ ಸ್ವತಃ ಕಾರ್ಯಕ್ರಮ ಆಯೋಜಕರೇ ಆಹ್ವಾನಿಸುತ್ತಾರೆ. ಹೀಗೆ ನಿರೂಪಣೆಯಲ್ಲಿ ತೊಡಗಿಸಿಕೊಂಡರೆ ಒಂದು ನಿರೂಪಣೆಗೆ ಕನಿಷ್ಠ 10 ಸಾವಿರ ರೂ.ಗಳಿಂದ ಲಕ್ಷ ರೂ.ಗಳವರೆಗೂ ಸಂಪಾದಿಸಲು ಅವಕಾಶವಿದೆ. ಉದ್ಯೋಗ ನಿರ್ವಹಿಸುತ್ತಲೇ ಉಪ ವೃತ್ತಿಯಾಗಿ ನಿರೂಪಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
Advertisement
ಕಾಲೇಜುಗಳಲ್ಲೇ ತರಬೇತಿಬೆಂಗಳೂರಿನಂತಹ ಮಹಾನಗರಗಳಲ್ಲಿ ಆ್ಯಂಕರಿಂಗ್‌ಗೆಂದೇ ಅಲ್ಪಾವಧಿಯ ಕೆಲವು ಕೋರ್ಸ್‌ಗಳಿವೆ. ಆದರೆ ಮಂಗಳೂರಿನಲ್ಲಿ ಇಂತಹ ಕೋರ್ಸ್ ಗಳು ಇರುವುದಿಲ್ಲ. ಪ್ರಮುಖವಾಗಿ ಮಾಧ್ಯಮ ಕ್ಷೇತ್ರಕ್ಕೆ ಪೂರಕವಾದ ಕೋರ್ಸ್ ಗಳನ್ನು ಕೆಲವು ಖಾಸಗಿ ಸಂಸ್ಥೆಗಳಲ್ಲಿಯೇ ನೀಡಲಾಗುತ್ತದೆ. ಪತ್ರಿಕೋದ್ಯಮ ತರಗತಿಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಪ್ರಾಯೋಗಿಕ ಶಿಕ್ಷಣವಾಗಿ ಇದನ್ನು ಕಲಿಸಲಾಗುತ್ತದೆ. ಉಜಿರೆ ಎಸ್‌ಡಿಎಂ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜು ಮತ್ತು ಇತರ ಕೆಲವು ಕಾಲೇಜುಗಳು ಪತ್ರಿಕೋದ್ಯಮ ವಿಭಾಗದಲ್ಲಿಯೇ ತಮ್ಮದೇ ಆದ ಸ್ಟುಡಿಯೋವೊಂದನ್ನು ಹೊಂದಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಭಾಗವಾಗಿ ಆ್ಯಂಕರಿಂಗ್ ತರಬೇತಿಯನ್ನೂ ನೀಡಲಾಗುತ್ತದೆ. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು, ಬೆಸೆಂಟ್ ಕಾಲೇಜುಗಳಲ್ಲಿಯೂ ಪತ್ರಿಕೋದ್ಯಮ ತರಗತಿಯಲ್ಲಿ ಆ್ಯಂಕರಿಂಗ್ ಕುರಿತು ಪ್ರಾಥಮಿಕ ಮಾಹಿತಿ ಒದಗಿಸುವ ವ್ಯವಸ್ಥೆ ಇರುತ್ತದೆ. ಇನ್ನು ರಾಜ್ಯ ಮಟ್ಟದ ಸುದ್ದಿವಾಹಿನಿಗಳು ತಮ್ಮ ಸಂಸ್ಥೆಗಳಲ್ಲಿಯೇ ಆ್ಯಂಕರಿಂಗ್ ತರಬೇತಿಯನ್ನು ಆರಂಭಿಸಿ ರುವುದು ಆ್ಯಂಕರಿಂಗ್ ಬಗ್ಗೆ ಕನಸು ಕಾಣುತ್ತಿರುವ ಯುವ ಸಮುದಾಯಕ್ಕೆ ವರವಾಗಿದೆ. - ಧನ್ಯಾ ಬಾಳೆಕಜೆ