ಅಪರೂಪದ ವ್ಯಕ್ತಿತ್ವದ ಸುಷ್ಮಾ ಸ್ವರಾಜ್ ಅವರು ನನಗೆ ಹಿರಿಯಕ್ಕನಂತೆ ಇದ್ದರು. ಅವರ ಅಕಾಲಿಕ ಮರಣ ತೀವ್ರ ನೋವಾಗಿದೆ. ಒಂದರ ಹಿಂದೆ ಮತ್ತೂಂದರಂತೆ ಆಘಾತಗಳಾಗುತ್ತಿವೆ.
ಇತ್ತೀಚೆಗಷ್ಟೇ ಸುಷ್ಮಾ ಸ್ವರಾಜ್ ಅವರ ಪುತ್ರಿ ನಮ್ಮ ಮನೆಗೆ ಬಂದಿದ್ದರು. ಆಗಲೂ ಸುಷ್ಮಾ ಅಕ್ಕ ಅವರು ಆರೋಗ್ಯವಾಗಿರುವುದಾಗಿ ಅವರ ಪುತ್ರಿ ಹೇಳಿದ್ದರು. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾಗಿರುವ ಈ ದಿನವನ್ನು ನನ್ನ ಜೀವಮಾನದಲ್ಲಿ ನೋಡಲು ಕಾದಿದ್ದೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದನ್ನು ನೋಡಿದ್ದೆ. ಆದರೆ ಕೆಲ ಹೊತ್ತಿನಲ್ಲೇ ವಿಧಿವಶರಾದ ವಿಚಾರ ತಿಳಿದು ತೀವ್ರ ನೋವಾಗಿದೆ.
ಸುಷ್ಮಾ ಸ್ವರಾಜ್ ಅವರು ಬಳ್ಳಾರಿಯಿಂದ ಸ್ಪರ್ಧಿಸುವಂತೆ ಮನವೊಲಿಸಿ ಕರೆತಂದವರಲ್ಲಿ ಅನಂತ್ ಕುಮಾರ್ ಪ್ರಮುಖರು. ಸುಷ್ಮಾ ಸ್ವರಾಜ್ ಅವರನ್ನು ಮನೆಯಿಂದ ಅನಂತ ಕುಮಾರ್ ಅವರೇ ಕರೆತಂದು ಬಳ್ಳಾರಿ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದರು. ಚುನಾವಣೆಯಲ್ಲಿ ಪರಾಭವಗೊಂಡರೂ ಕರ್ನಾಟಕದೊಂದಿಗಿನ ಒಡನಾಟವನ್ನು ಅವರು ಕಳೆದುಕೊಂಡಿರಲಿಲ್ಲ. ಎರಡು ತಿಂಗಳ ಹಿಂದೆ ಅವರ ಮನೆಗೆ ಹೋಗಿ ಮಾತನಾಡಿ ಬಂದಿದ್ದೆ. ಇಷ್ಟು ಬೇಗ ನಮ್ಮನ್ನು ಅಗಲಿ ಹೋಗಲಿದ್ದಾರೆ ಎಂಬ ಊಹೆಯೂ ಇರಲಿಲ್ಲ.
ಐದು ಬಾರಿ ಪೂಜೆಗೆ ಬಂದಿದ್ದರು: ಬಳ್ಳಾರಿಗೆ ವರಮಹಾಲಕ್ಷ್ಮೀ ಪೂಜೆಗೆ ಅವರು ಆಗಮಿಸುತ್ತಿದ್ದರು. ಬೆಂಗಳೂರಿಗೆ ಬಂದು ನಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿ ನಂತರ ಬಳ್ಳಾರಿಗೆ ತೆರಳುತ್ತಿದ್ದರು. ಅವರು ನಮ್ಮಮನೆಗೆ ಪೂಜೆಗೆಂದು ಬಂದಾಗ ವಿಶೇಷ ವಿನ್ಯಾಸದ ಕುಂಕುಮ ಭರಣಿಯನ್ನು ಉಡುಗೊರೆಯಾಗಿ ನೀಡುತ್ತಿದ್ದರು. ನಮ್ಮ ಮನೆಯಲ್ಲಿ ಅವರು ನೀಡಿರುವ ಐದು ವಿನ್ಯಾಸದ ಕುಂಕುಮ ಭರಣಿಗಳು ಅವರ ಐದು ಪೂಜಾ ಭೇಟಿಯ ಸಂಕೇತವಾಗಿ ಉಳಿದಿವೆ.
ಇತ್ತೀಚೆಗೆ ನಮ್ಮ ಮನೆಗೆ ಬಂದಿದ್ದ ಅವರ ಪುತ್ರಿಗೆ ಆ ಭರಣಿಗಳನ್ನು ತೋರಿಸಿ ಪೂಜೆಗೆ ಬಂದಿದ್ದ ವಿಚಾರಗಳನ್ನು ಹೇಳಿದ್ದೆ. ಆದರೆ ವರ ಮಹಾಲಕ್ಷ್ಮೀ ವ್ರತಕ್ಕೆ ಮೂರು ದಿನ ಇರುವಂತೆಯೇ ಅವರು ವಿಧಿವಶರಾಗಿರುವುದು ಅತೀತ ದುಃಖ ಉಂಟು ಮಾಡಿದೆ.
● ತೇಜಸ್ವಿನಿ ಅನಂತ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ