Advertisement

ಅನಾರ್ಕಲಿ ಡಿಸ್ಕೋ ಚಲಿ…

11:45 AM Sep 19, 2019 | mahesh |

ಇತಿಹಾಸದ ಪ್ರಕಾರ ಸಲೀಂ, ನೃತ್ಯಗಾತಿ ಅನಾರ್ಕಲಿಯನ್ನು ಅದೆಷ್ಟು ಹಚ್ಚಿಕೊಂಡಿದ್ದನೋ; ಇಂದಿನ ಯುವತಿಯರು ಈ ಅನಾರ್ಕಲಿಯನ್ನು ಅಷ್ಟೇ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಎಲ್ಲ ಹುಡುಗಿಯರ ವಾರ್ಡ್‌ರೋಬ್‌ನಲ್ಲಿ ಸ್ಥಾನ ಪಡೆದಿರುವ ಈ ಉಡುಗೆ, ಸಿಂಪಲ್‌ ಆಗಿದ್ದರೆ ಕ್ಯಾಶುವಲ್‌, ಕೊಂಚ ಅದ್ದೂರಿಯಿದ್ದರೆ ಫೆಸ್ಟಿವ್‌…

Advertisement

ದಾಳಿಂಬೆಯ ಹೂವನ್ನು ನೋಡಿದ್ದೀರಲ್ಲ? ಅದನ್ನು ಹಿಂದಿಯಲ್ಲಿ ಅನಾರ್ಕಲಿ ಎನ್ನುತ್ತಾರೆ. ದಾಳಿಂಬೆಯ ಹೂವನ್ನು ಹೋಲುವ ಉಡುಗೆಗೂ ಅದೇ ಹೆಸರನ್ನಿಡಲಾಗಿದೆ. ಮಹಿಳೆಯರ ಅಚ್ಚುಮೆಚ್ಚಿನ ಈ ದಿರಿಸು ಬಹಳ ವಿಭಿನ್ನ. ಸಿಂಪಲ್‌ ಕಾಲೇಜು ಫೆಸ್ಟ್‌ನಿಂದ ಹಿಡಿದು, ಮದುವೆಗಳವರೆಗೆ, ಯಾವುದೇ ಕಾರ್ಯಕ್ರಮದಲ್ಲಾದರೂ ತೊಡಬಹುದಾದ ಈ ಅನಾರ್ಕಲಿ, ಕ್ಯಾಶುವಲ್‌ ಕೂಡ ಹೌದು, ಫೆಸ್ಟಿವ್‌ ಕೂಡಾ ಹೌದು. ಆದ್ದರಿಂದ, ಇದು ಎಂದೆಂದಿಗೂ ಬೇಡಿಕೆಯಲ್ಲಿರುವ ಉಡುಪು.

ನರ್ತಕಿಯರ ಉಡುಗೆ
ಸಾಂಪ್ರದಾಯಿಕ ಉಡುಗೆಗಳ ಸಾಲಿಗೆ ಸೇರುವ ಈ ದಿರಿಸನ್ನು ಹಿಂದಿನ ಕಾಲದಲ್ಲಿ ಮುಜ್ರಾ ನರ್ತಕಿಯರು ತೊಡುತ್ತಿದ್ದರು. ಕಥಕ್‌ ನರ್ತಕಿಯರ ಉಡುಗೆಯೂ ಕೂಡಾ ಅನಾರ್ಕಲಿಯನ್ನು ಹೋಲುವುದನ್ನು ಗಮನಿಸಿರಬಹುದು. ವ್ಯಕ್ತಿತ್ವಕ್ಕೆ ವಿಶೇಷ ಕಳೆ ನೀಡುವ, ಈ ಬಟ್ಟೆಯನ್ನು ಹಬ್ಬ-ಹರಿದಿನ, ಮದುವೆ-ಮುಂಜಿ, ಪಾರ್ಟಿ, ಮುಂತಾದ ಕಾರ್ಯಕ್ರಮಗಳಲ್ಲಿ ತೊಡಬಹುದು.

ಬಿಂದಾಸ್‌ ಆಗಿರ್ಬೋದು
ಸಮಾರಂಭ ಅಂದರೆ ಓಡಾಟ, ಗಡಿಬಿಡಿ, ಹಾಡು-ಕುಣಿತ ಎಲ್ಲವೂ ಇರುತ್ತದೆ. ಸೀರೆ ತೊಟ್ಟು ಅವನ್ನೆಲ್ಲ ಮಾಡಲು ಸಾಧ್ಯವಿಲ್ಲ. ಅನಾರ್ಕಲಿಯಾದರೆ ಆರಾಮಾಗಿ ಓಡಾಡಬಹುದು, ಸಂಗೀತ, ಮದರಂಗಿ ಶಾಸ್ತ್ರದ ವೇಳೆ ಆಟ ಆಡಬಹುದು, ಕುಣಿಯಬಹುದು. ಆರಾಮಕ್ಕೆ ಆರಾಮ, ಸ್ಟೈಲಿಗೆ ಸ್ಟೈಲು- ಇದು ಅನಾರ್ಕಲಿಯ ಗಮ್ಮತ್ತು!

ಡಿಸೈನರ್‌ ಅನಾರ್ಕಲಿ
ರೆಡ್‌ಕಾರ್ಪೆಟ್‌ ಇವೆಂಟ್‌ಗಳಿಗೆ, ಸಿನಿಮಾ ಪ್ರಚಾರಕ್ಕೆ, ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವಾಗ ಸೆಲೆಬ್ರಿಟಿಗಳು ತೊಡುತ್ತಾರಲ್ಲ; ಅವು ಡಿಸೈನರ್‌ ಅನಾರ್ಕಲಿಗಳು. ಪ್ರಸಿದ್ಧ ವಸ್ತ್ರವಿನ್ಯಾಸಕಾರರು ವಿನ್ಯಾಸ ಮಾಡಿದ ಆ ದಿರಿಸುಗಳು ಲಕ್ಷಾಂತರ ರೂ. ಬೆಲೆಬಾಳುತ್ತವೆ. ಅವರಷ್ಟೇ ಅಲ್ಲ, ಲೈಫ್ಟೈಮ್‌ ಸೆಲೆಬ್ರೇಷನ್‌ ಅನ್ನಿಸಿಕೊಳ್ಳುವ ನಿಶ್ಚಿತಾರ್ಥ, ಮದುವೆ, ಆರತಕ್ಷತೆಗಳ ದಿನ, ವಿಶೇಷವಾಗಿ ಕಾಣಿಸುವ ಹಂಬಲದಿಂದ ಸಾಮಾನ್ಯರೂ ಡಿಸೈನರ್‌ ಅನಾರ್ಕಲಿಗಳನ್ನು ತೊಡುತ್ತಾರೆ. ಈ ಡಿಸೈನರ್‌ ಅನಾರ್ಕಲಿಗಳು ವಿನ್ಯಾಸ, ಗುಣಮಟ್ಟ, ಬಣ್ಣಗಳಲ್ಲಿ ಬೇರೆ ಅನಾರ್ಕಲಿಗಿಂತ ಭಿನ್ನವಾಗಿರುತ್ತವೆ.

Advertisement

ಅನಾರ್ಕಲಿಯ ಮೇಲಿನ ಕಸೂತಿ, ಚಿತ್ರಗಳಲ್ಲೂ ಬಹಳ ಬಗೆಗಳಿವೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಲಿತದಲ್ಲಿರುವ ಕಸೂತಿ ಕಲೆಯನ್ನು ವಸ್ತ್ರವಿನ್ಯಾಸಕರು ಬಟ್ಟೆಯ ಮೇಲೆ ಮೂಡಿಸುತ್ತಾರೆ. ಇನ್ನು, ಉತ್ತರ ಭಾರತದ ವಿವಾಹಗಳಲ್ಲಿ ವಧು, ಸೀರೆಗಿಂತ ಲೆಹೆಂಗಾ (ಲಂಗ) ತೊಡುವುದೇ ಹೆಚ್ಚು. ಇದೀಗ ಈ ಲೆಹೆಂಗಾ ಬದಲಿಗೆ ಕುಂಕುಮ ಬಣ್ಣದ ಅನಾರ್ಕಲಿ ತೊಡಲು ಇಷ್ಟಪಡುತ್ತಿದ್ದಾರೆ ಯುವತಿಯರು.

ಬೈಕ್‌ ಮೇಲೆ ಬ್ಯಾಲೆನ್ಸ್‌
ಹಿಂದೆಲ್ಲಾ ಪಲಕ್ಕಿಯಲ್ಲಿ ಕುಳಿತು ಮದುವೆ ಛತ್ರಕ್ಕೆ ಬರುತ್ತಿದ್ದ ವಧು, ಕಾಲ ಬದಲಾದಂತೆ ಕುದುರೆ ಮೇಲೆ, ಮೋಟಾರ್‌ ಬೈಕ್‌ ಮೇಲೆ ಕುಳಿತು ಬರುವುದು ಟ್ರೆಂಡ್‌ ಆಗಿದೆ. ಹಾಗಿ¨ªಾಗ ಸೀರೆ ಅಥವಾ ಲೆಹೆಂಗಾ ತೊಟ್ಟು ಕುದುರೆ ಅಥವಾ ಬೈಕ್‌ ಮೇಲೋ ಕುಳಿತುಕೊಳ್ಳಲು ಕಷ್ಟವಲ್ಲವೇ? ಆದ್ದರಿಂದಲೇ, ಅನಾರ್ಕಲಿ ಮದುಮಗಳ ಹಾಟ್‌ ಫೇವರಿಟ್‌ ಡ್ರೆಸ್‌ ಆಗಿಬಿಟ್ಟಿದೆ!

ನಮ್ಮಲ್ಲಿ ಮಾತ್ರವಲ್ಲ…
ಅನಾರ್ಕಲಿ ಕೇವಲ ಭಾರತದಲ್ಲಷ್ಟೇ ಅಲ್ಲ, ಪಾಕಿಸ್ತಾನ, ಅಫ್ಘಾನಿಸ್ಥಾನದಲ್ಲೂ ಜನಪ್ರಿಯವಾಗಿರುವ ಉಡುಗೆ. ಇತಿಹಾಸದ ಪ್ರಕಾರ, ಈಗಿನ ಪಾಕಿಸ್ತಾನದ ಲಾಹೋರ್‌, ಅನಾರ್ಕಲಿ ಶೈಲಿಯ ವಸ್ತ್ರಗಳ ಮೂಲವಂತೆ! ಬೇರೆ ದೇಶದ ಸೆಲೆಬ್ರಿಟಿಗಳೂ ಕೂಡಾ ನಮ್ಮ ಸೀರೆಗೆ ಮಾರು ಹೋದಂತೆಯೇ, ಅನಾರ್ಕಲಿ ತೊಟ್ಟು ಮಿಂಚಿರುವ ಉದಾಹರಣೆಗಳಿವೆ.

ಸ್ಲಿಮ್‌ ಸೀಕ್ರೆಟ್ಸ್‌
ಅನಾರ್ಕಲಿ, ಎಲ್ಲ ವಯೋಮಾನದ ಸ್ತ್ರೀಯರಿಗೂ ಸೂಟ್‌ ಆಗುವಂಥ ಉಡುಗೆ. ಆದರೂ, ದಪ್ಪಗಿರುವವರಿಗೆ ಚೆಂದ ಕಾಣುವುದಿಲ್ಲವೇನೋ ಎಂಬ ಅನುಮಾನ ಕೆಲವರದ್ದು. ಅಂಥವರು ಅನಾರ್ಕಲಿ ಧರಿಸುವಾಗ ಕೆಲವು ಸಲಹೆಗಳನ್ನು ಪಾಲಿಸಿದರೆ, ಸ್ಲಿಮ್‌ ಆಗಿ ಕಾಣಬಲ್ಲರು.

1. ಕ್ರೆಪ್‌, ಶಿಫಾನ್‌ ಹಾಗೂ ಜಾರ್ಜೆಟ್‌ನ ಅನಾರ್ಕಲಿಯಲ್ಲಿ ಶರೀರವು ಸ್ಲಿಮ್‌ ಆಗಿ ಕಾಣುತ್ತದೆ.
2. ಅದ್ದೂರಿ ನೆಕ್‌ ಡಿಸೈನ್‌ಗಳಿರುವ, ಬೋಟ್‌ ನೆಕ್‌, ಡೀಪ್‌ ನೆಕ್‌ ಹಾಗೂ ಬ್ಯಾಕ್‌ಲೆಸ್‌ ಅನಾರ್ಕಲಿಯಲ್ಲಿ ಎತ್ತರ ಕಡಿಮೆ ಅನ್ನಿಸುವುದರಿಂದ, ದಪ್ಪಗಿರುವವರು ಮತ್ತಷ್ಟು ದಪ್ಪ ಕಾಣುತ್ತಾರೆ.
3. ಹೈ ನೆಕ್‌, ವಿ ನೆಕ್‌, ಸ್ಟ್ರೇಟ್‌ ಕಟ್ಸ್‌, ಬ್ಯಾಂಡ್‌ ನೆಕ್‌ ಅನಾರ್ಕಲಿಗಳು ಚೆನ್ನಾಗಿ ಒಪ್ಪುತ್ತವೆ.
4. ಶಾರ್ಟ್‌ ಮತ್ತು ಮಧ್ಯದಲ್ಲಿ ಕಟ್‌ ಇರುವ ಅನಾರ್ಕಲಿಗಳು ಬೇಡ.
5. ಉದ್ದವಿರುವ ಹಾಗೂ ಕೆಳಗೆ ಅದ್ಧೂರಿ ಡಿಸೈನ್‌ಗಳಿರುವ ಅನಾರ್ಕಲಿಯಲ್ಲಿ ಎತ್ತರವಾಗಿ ಕಾಣಬಹುದು.
6. ಕಡುಗೆಂಪು, ಕಡು ಹಸಿರು, ಕಡು ನೀಲಿ, ನೇರಳೆಯಂಥ ಗಾಢ ಬಣ್ಣಗಳಲ್ಲಿ ಸ್ಲಿಮ್‌ ಆಗಿ ಕಾಣಿಸಬಹುದು.
7. ಹೈ ಹೀಲ್ಸ್‌ ಧರಿಸುವುದರಿಂದ ಸ್ಲಿಮ್‌ ಲುಕ್‌ ಸಿಗುತ್ತದೆ.
8. ತುಂಬಾ ಬಿಗಿ, ತುಂಬಾ ಸಡಿಲ ಇರುವ ವಸ್ತ್ರದಿಂದ ಸ್ಟೈಲಿಶ್‌ ಆಗಿ ಕಾಣಲು ಸಾಧ್ಯವಿಲ್ಲ.

– ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next