Advertisement

ಅನಂತಕುಮಾರ ನಾಮಪತ ಸಲ್ಲಿಕೆ ಇಂದು

05:17 PM Apr 02, 2019 | Team Udayavani |

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅನಂತಕುಮಾರ ಹೆಗಡೆ ಏ.2 ರಂದು ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ದೈವಜ್ಞ ಸಭಾ ಭವನದಲ್ಲಿ ಬೆಳಗ್ಗೆ 11:30ಕ್ಕೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕ್ಷೇತ್ರದ ಮಾಧ್ಯಮ ಸಹ ಸಂಚಾಲಕ ವೆಂಕಟರಮಣ ಹೆಗಡೆ ಹೇಳಿದರು.

Advertisement

ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಪಕ್ಷಾಂತರಿ ಆನಂದ ಅಸ್ನೋಟಿಕರ್‌ ಗೆ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಅಪಪ್ರಚಾರ ನಡೆಸಲು ವಿಷಯಗಳೇ ಸಿಗುತ್ತಿಲ್ಲ. ಹೀಗಾಗಿ ಅವರು ಅನಂತಕುಮಾರರನ್ನು ಬೈಯ್ಯುವುದು, ಶೂನ್ಯ ಸಂಪಾದನೆ ಎಂದು ಹೇಳುತ್ತ ತಿರುಗುತ್ತಿದ್ದಾರೆ. ಈಗಾಗಲೇ ಜನರಿಂದ ತಿರಸ್ಕೃತಗೊಂಡಿರುವ ಆನಂದ ಅಸ್ನೋಟಿಕರ್‌ ಈ ಬಾರಿ ಸೋಲಲಿದ್ದಾರೆ. ಅನಂತಕುಮಾರ ಹೆಗಡೆ ವಿರುದ್ಧ ಕೈಲಾಗದವ ಮೈ ಪರಚಿಕೊಂಡ ಎನ್ನುವಂತೆ, ಆನಂದ ಅಸ್ನೋಟಿಕರ್‌ ಹೋದಲೆಲ್ಲಾ ಬೊಬ್ಬಿಡುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಆನಂದ ಅಸ್ನೋಟಿಕರ ಸಮಾಜವಾದಿ ಪಕ್ಷ, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಿಗೆ ಪಕ್ಷಾಂತರ ಮಾಡಿ ದಾಖಲೆನೇ ಬರೆದಿದ್ದಾರೆ. ರಾಜ್ಯದಲ್ಲಿ ಇನ್ಯಾವ ಪಕ್ಷವೂ ಉಳಿದಿಲ್ಲ. ಹೀಗಾಗಿ ಸೋತ ಬಳಿಕ ಪಕ್ಷಾಂತರ ನಡೆಸಲು ಉತ್ತರ ಭಾರತದಿಂದ ಕೆಲವೊಂದು ಪಕ್ಷಗಳನ್ನು ಬೇಕಾದರೆ ತಂದು ಕೊಡೋಣ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಧುರೀಣ ನಾಗರಾಜ ನಾಯಕ ಮಾತನಾಡಿ, ಆನಂದ ಅಸ್ನೋಟಿಕರ್‌ ಈ ಹಿಂದೆ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕನಾಗಿದ್ದಾಗ, 2010ರ ಅಕ್ಟೋಬರ್‌ 10 ರಂದು ಸಭಾಪತಿಯಾಗಿದ್ದ ಬೋಪಯ್ಯನವರು ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಿದ್ದರು.

ಹೈಕೋರ್ಟ್‌ ಕೂಡ ಅನರ್ಹತೆಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಶಾಸಕರಿಲ್ಲದೇ ಸುಮಾರು 8 ತಿಂಗಳು ಕ್ಷೇತ್ರದ ಜನರನ್ನು ಅವರು ಅನಾಥರನ್ನಾಗಿಸಿದ್ದರು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೇ, ರೆಸಾರ್ಟ್‌ ರಾಜಕೀಯದಲ್ಲಿ ಮಗ್ನರಾಗಿದ್ದರು. ಅವರು 5 ವರ್ಷ ಪೂರೈಸಿ ಶೇ.ನೂರು ಸಾಧನೆ ಮಾಡಿದ ಶಾಸಕರ ಯಾದಿಯಲ್ಲಿ ಬರುವುದಿಲ್ಲ. ಅವರು ಶಾಸಕತ್ವಕ್ಕೆ ಮನ್ನಣೆ ನೀಡಿ ಮಾಡಿದ ಸಾಧನೆ ಕೇವಲ ಶೇ.87 ಮಾತ್ರ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಶಾಸಕನಾಗಿ ಜನಪರ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಪಕ್ಷಾಂತರ, ರೆಸಾರ್ಟ್‌ ರಾಜಕೀಯ ಮೂಲಕ ಮನಬಂದಂತೆ ಆಡಿ ಮೂಲೆಗುಂಪಾಗಿದ್ದಾರೆ.

Advertisement

ಇಂತಹ ವ್ಯಕ್ತಿ ಎಂಪಿಯಾದರೆ, ಜನರ ಗತಿ ಅಧೋಗತಿ. ಆದ್ದರಿಂದ ಅನಂತಕುಮಾರ ಹೆಗಡೆ ಅಭಿವೃದ್ಧಿ ಮಾಡಿಲ್ಲ ಎಂದು ಅಪಪ್ರಚಾರ ನಡೆಸುವ ನೈತಿಕತೆಯನ್ನು ಆನಂದ ಅಸ್ನೋಟಿಕರ್‌ ಕಳೆದುಕೊಂಡಿದ್ದಾರೆ ಎಂದರು.

ಹೆಚ್ಚು ಬಹುಮತದ ಆಯ್ಕೆನಿಶ್ಚಿತ: ಅನಂತ್‌ ವಿಶ್ವಾಸ
ಶಿರಸಿ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಆಯ್ಕೆಗೊಳ್ಳುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಪಾದಿಸಿದರು.
ಅವರು ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಮೂರರಲ್ಲಿ ಎರಡರಷ್ಟು ಅಂಶ ಸ್ಥಾನ ಪಡೆದು ಗೆಲ್ಲಲಿದೆ. ಅಧಿ ಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಅಸ್ಮಿತೆಯ ಆಧಾರವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ, ದೇಶಕ್ಕೆ ಹೊಸ ದಿಕ್ಕು ಕೊಡುವ ಚುನಾವಣೆ ಇದಾಗಲಿದೆ ಎಂದೂ ಹೇಳಿದರು.

ಏ.2ರ ಬೆಳಗ್ಗೆ 11ಕ್ಕೆ ಕಾರವಾರದಲ್ಲಿ ನಾಮಪತ್ರ ಸಲ್ಲಿಸುತ್ತಿರುವದಾಗಿ ಹೇಳಿದ ಅನಂತಕುಮಾರ ಹಿರಿಯರ ಸಹಕಾರದಲ್ಲಿ ಅವರ ಆಸೆಯಿಂದ ಅಭ್ಯರ್ಥಿಯಾಗಿದ್ದೇನೆ ಎಂದರು. ಎಷ್ಟು ಜನ ಸೇರತಾರೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರಳವಾಗಿ ತೆರಳಿ ನಾಮಪತ್ರ ಸಲ್ಲಿಸುತ್ತೇವೆ. ಜನ ಸೇರಿಸುವುದಿಲ್ಲ, ಅವರಾಗೆ ಬಂದರೆ ಗೊತ್ತಿಲ್ಲ ಎಂದೂ ಹೇಳಿದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ, ಗಣಪತಿ ನಾಯ್ಕ, ನಂದನ್‌ ಸಾಗರ್‌, ರಮೇಶ ಆಚಾರಿ, ರವಿ ಚಂದಾವರ, ರೂಪಾ ಹೆಗಡೆ, ರೇಖಾ ಹೆಗಡೆ ಇತರರಿದ್ದರು.

ಮಾರಿಕಾಂಬೆ-ಮಧುಕೇಶ್ವರನಿಗೆ ಪೂಜ
ಶಿರಸಿ:
ಆದಿ ಕವಿ ಪಂಪ ಹಾಡಿ ಹೊಗಳಿದ, ಬನವಾಸಿಯ ಪುರಾಣ ಪ್ರಸಿದ್ಧ ಮಧುಕೇಶ್ವರ, ಶಿರಸಿಯ ಮಾರಿಕಾಂಬೆ, ದೊಡ್ನಳ್ಳಿಯ ಕುಲ ದೇವರಲ್ಲಿಯೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪೂಜೆ ಸಲ್ಲಿಸಿದರು. ಸೋಮವಾರ ಪತ್ನಿ ರೂಪಾ ಹಾಗೂ ಕುಟುಂಬದ ಸದಸ್ಯರ ಜೊತೆ ತೆರಳಿದ ಅವರು ಪ್ರಥಮ ಪೂಜೆಯನ್ನು ಬನವಾಸಿಯ ಮಧುಕೇಶ್ವರನಿಗೆ ಸಲ್ಲಿಸಿದರು. ಬಳಿಕ ಗುಡ್ನಾಪುರದ ಬಂಗಾರಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ರಾಜ್ಯದ ಶಕ್ತಿ ದೇವತೆ, ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸೀರೆ, ಹಣ್ಣುಕಾಯಿ ಅರ್ಪಿಸಿದ ಅನಂತಕುಮಾರ ಹೆಗಡೆ ಅವರು ಪಕ್ಕದಲ್ಲೇ ಇರುವ ಭೂತರಾಜ ದೇವರಿಗೂ ಪೂಜೆ ಸಲ್ಲಿಸಿದರು. ಬಳಿಕ ಕುಲ ದೇವರಾದ ದೊಡ್ನಳ್ಳಿಯ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next